ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ

Update: 2019-08-05 18:34 GMT

ಸಾವು ನೋವು, ದೌರ್ಜನ್ಯ ಅತ್ಯಾಚಾರ, ಹಿಂಸೆ ಹತ್ಯಾಕಾಂಡಗಳಿಂದ ವಿಚಲಿತರಾಗದ ಸ್ಥಿತಪ್ರಜ್ಞ ಮನಸ್ಥಿತಿಗೆ ನಾವು, ಭಾರತೀಯರು ತಲುಪಿದ್ದೇವೆಯೇ? ಈ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡಬೇಕಿದೆ. ಇದು ನಿಷ್ಕ್ರಿಯ ಮೆದುಳಿನ ಫಲವೋ, ನಿರ್ಲಿಪ್ತ ಮನಸಿನ ನಿರ್ಭಾವುಕತೆಯೋ, ಸಮೂಹ ಸನ್ನಿಗೊಳಗಾದ ಮನಸ್ಥಿತಿಯೋ ಅಥವಾ ನಿಜಕ್ಕೂ ಸ್ಥಿತಪ್ರಜ್ಞ ಸ್ಥಿತಿಯೋ? ಇದಾವುದೂ ಅಲ್ಲ. ತಂತ್ರಜ್ಞಾನ ಯುಗ ಮಾನವ ಸಮಾಜದ ಸಂವೇದನೆಯನ್ನು ಮಾರುಕಟ್ಟೆಯ ಕವಾಟಗಳಲ್ಲಿ ಬಂಧಿಸಿಟ್ಟಿರುವುದು ಇಂದಿನ ಸಮಸ್ಯೆ.

ಭಾರತದ ನಾಗರಿಕ ಪ್ರಜ್ಞೆ ಅದೇಕೋ ದಿನದಿಂದ ದಿನಕ್ಕೆ ನಶಿಸಿಹೋಗುತ್ತಿದೆ. ಮೊದಲೆಲ್ಲಾ ಹೀಗಿರಲಿಲ್ಲ. ಸಂವಹನ ಮಾಧ್ಯಮಗಳೇ ಇಲ್ಲದಿದ್ದ ಕಾಲದಲ್ಲೂ ಅಲ್ಲೆಲ್ಲೋ ಸಾವಿರ ಮೈಲುಗಳಾಚೆ ನಡೆಯುವ ದೌರ್ಜನ್ಯ ಇಡೀ ದೇಶವನ್ನು ಬಡಿದೆಬ್ಬಿಸು ತ್ತಿತ್ತು. ಪಾರಿವಾಳಗಳೇನೂ ಸಾರ್ವಜನಿಕ ಸಂದೇಶವಾಹಕಗಳಾಗಿರಲಿಲ್ಲ. ಒಂದು ಅತ್ಯಾಚಾರ, ಒಂದು ದೌರ್ಜನ್ಯ ಒಂದು ಅಸಹಜ ಸಾವು ಅಥವಾ ಹತ್ಯೆ ದೇಶದ ಸಂಗಜೀವಿ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಮೂಡಿಸುತ್ತಿತ್ತು. ಅಂದು ‘ಬುದ್ಧಿಜೀವಿ’ಗಳೆಂಬ ಮೂದಲಿಕೆಯ ಪದ ಬಳಕೆಯಲ್ಲಿರಲಿಲ್ಲ. ಏಕೆಂದರೆ ಮಾನವೀಯ ಮೌಲ್ಯಗಳನ್ನು ಉಲ್ಲಂಘಿಸುವ ಯಾವುದೇ ಘಟನೆಗೆ ಸಾಮೂಹಿಕ ವಿರೋಧ ಪ್ರಕಟವಾಗುತ್ತಿತ್ತು. ಮಾನವೀಯತೆ ಪರ ನಿಲ್ಲುವವರು ಮಾತ್ರ ಬುದ್ಧಿಜೀವಿಗಳು ಎಂಬ ‘ಸಂಘಜೀವಿ’ಗಳ ವ್ಯಾಖ್ಯಾನ ಇತ್ತೀಚಿನದ್ದು. ದುರಂತ ಎಂದರೆ ಈ ವ್ಯಾಖ್ಯಾನದ ಫಲವಾಗಿ ಇಂದು ಬುದ್ಧಿ ಇಲ್ಲದ ಜೀವಿಗಳು ಹೆಚ್ಚಾಗುತ್ತಿದ್ದಾರೆ. ಸಂಗ ಜೀವಿಗಳಾಗಿದ್ದ ಬಹುತೇಕ ಭಾರತೀಯರು ನೇರವಾಗಿಯೋ ಪರೋಕ್ಷವಾಗಿಯೋ, ಅಜ್ಞಾನದಿಂದಲೋ ಪ್ರಜ್ಞಾಪೂರ್ವಕವಾಗಿಯೋ ಸಂಘಜೀವಿಗಳಾಗಿಬಿಟ್ಟಿದ್ದಾರೆ. ಹಾಗಾಗಿ ಹುಟ್ಟು, ಸಾವು, ನೋವು ಮತ್ತು ಹಿಂಸೆ ಇವೆಲ್ಲವೂ ಸಾಪೇಕ್ಷ ವಿದ್ಯಮಾನಗಳಾಗಿಬಿಟ್ಟಿವೆ. ಸಾಮೂಹಿಕ ಹತ್ಯಾಕಾಂಡಗಳನ್ನು ಸಂಭ್ರಮದಿಂದ ಎದುರುನೋಡುವ ಪರಂಪರೆಗೆ ವಿದ್ಯುನ್ಮಾನ ಮಾಧ್ಯಮಗಳ ರಂಗುರಂಗಿನ ಪರದೆಗಳು ಸಾಕ್ಷಿಯಾಗಿ ನಿಂತಿರುವುದನ್ನು ನೋಡಿದರೆ ತಿಳಿಯುತ್ತದೆ. ಉನ್ನಾವೊ ಈ ವಿದ್ಯಮಾನದ ಒಂದು ಆಯಾಮವಾಗಿ ಮಾತ್ರ ಕಾಣುತ್ತದೆ. ಜೈಶ್ರೀರಾಮ್ ಘೋಷಣೆ ಇದರ ವಿಕೃತ ಸಾಂಸ್ಕೃತಿಕ ಪ್ರತಿಮೆಯಂತೆ ಕಾಣುತ್ತದೆ.
ಸಾವು ನೋವು, ದೌರ್ಜನ್ಯ ಅತ್ಯಾಚಾರ, ಹಿಂಸೆ ಹತ್ಯಾಕಾಂಡಗಳಿಂದ ವಿಚಲಿತರಾಗದ ಸ್ಥಿತಪ್ರಜ್ಞ ಮನಸ್ಥಿತಿಗೆ ನಾವು, ಭಾರತೀಯರು ತಲುಪಿದ್ದೇವೆಯೇ? ಈ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡಬೇಕಿದೆ. ಇದು ನಿಷ್ಕ್ರಿಯ ಮೆದುಳಿನ ಫಲವೋ, ನಿರ್ಲಿಪ್ತ ಮನಸಿನ ನಿರ್ಭಾವುಕತೆಯೋ, ಸಮೂಹ ಸನ್ನಿಗೊಳಗಾದ ಮನಸ್ಥಿತಿಯೋ ಅಥವಾ ನಿಜಕ್ಕೂ ಸ್ಥಿತಪ್ರಜ್ಞ ಸ್ಥಿತಿಯೋ? ಇದಾವುದೂ ಅಲ್ಲ. ತಂತ್ರಜ್ಞಾನ ಯುಗ ಮಾನವ ಸಮಾಜದ ಸಂವೇದನೆಯನ್ನು ಮಾರುಕಟ್ಟೆಯ ಕವಾಟಗಳಲ್ಲಿ ಬಂಧಿಸಿಟ್ಟಿರುವುದು ಇಂದಿನ ಸಮಸ್ಯೆ. ಕಣ್ಣೆದುರಿನ ಘಟನೆಯನ್ನು ನೋಡಲೂ ನಿರಾಕರಿಸುವ ನಾವು ಪರದೆಯ ಮೇಲಿನ ಭ್ರಮೆಯನ್ನು ಸುಲಭವಾಗಿ ನಂಬುವ ಸ್ಥಿತಿಗೆ ತಲುಪಿದ್ದೇವೆ. ಭ್ರಮೆ ಮತ್ತು ವಾಸ್ತವದ ನಡುವೆ ಇರುವ ಕಂದರದಲ್ಲಿ ಅಡಗಿರಬಹುದಾದ ಸೂಕ್ಷ್ಮ ಸತ್ಯವನ್ನು ಗ್ರಹಿಸಲು ವಿಫಲರಾಗುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮೆಳಗಿನ ಸೂಕ್ಷ್ಮ ಸಂವೇದನೆ ಕಳೆದುಹೋಗಿರುವುದು. ಉನ್ನಾವೊ ಘಟನೆಯನ್ನು ಒಮ್ಮೆ ಅವಲೋಕನ ಮಾಡಿದರೆ ಇದು ಅರಿವಾಗುತ್ತದೆ. ಹಾಗೆಂದ ಮಾತ್ರಕ್ಕೆ ಉನ್ನಾವೊ, ಸಮಕಾಲೀನ ಭಾರತದ ಸಂದರ್ಭದಲ್ಲಿ ಅಪರೂಪದ ಘಟನೆಯೇನಲ್ಲ. ನಿಮಿಷಕ್ಕೊಂದು ಹೆಣ್ಣು ಅತ್ಯಾಚಾರ ದೌರ್ಜನ್ಯಕ್ಕೊಳಗಾಗುತ್ತಿರುವ ನವ ಭಾರತದಲ್ಲಿ, ಗಂಟೆಗೊಬ್ಬ ದಲಿತ ಹಲ್ಲೆ/ಹತ್ಯೆಗೊಳಗಾಗುತ್ತಿರುವ ಭಾರತದಲ್ಲಿ ಇದು ಅಪರೂಪ ಅಲ್ಲವೇ ಅಲ್ಲ. ಆದರೆ ಈ ಘಟನೆಯ ಸುತ್ತ ನಡೆಯುತ್ತಿರುವ ಸಿನಿಮೀಯ ಬೆಳವಣಿಗೆಗಳು ಹೆಚ್ಚು ಆತಂಕಕಾರಿಯಾಗಿ ಕಾಣುತ್ತಿದೆ. ಆಧಿಪತ್ಯ ರಾಜಕಾರಣದ ಪ್ರಾಬಲ್ಯ ಎಂತಹ ದೌರ್ಜನ್ಯವನ್ನೂ ಸಹನೀಯ ಮಾಡಿಬಿಡುತ್ತದೆ ಎನ್ನುವ ಕಲ್ಪನೆಯೇ ಎದೆ ನಡುಕ ಹುಟ್ಟಿಸುತ್ತದೆ.


ಅತ್ಯಾಚಾರಕ್ಕೊಳಗಾದ ಹೆಣ್ಣಿಗೆ ಸಾಂತ್ವನ ಹೇಳುವ ದನಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ರಾಜಕೀಯ ನಿಷ್ಠೆ ಮತ್ತು ತಾತ್ವಿಕ ನಿಲುವುಗಳು ಈ ಕ್ಷೀಣಿಸುತ್ತಿರುವ ದನಿಗಳನ್ನು ಅಣಕಿಸುತ್ತಿವೆ. ಈ ದೇಶದ ಸಾಂಸ್ಕೃತಿಕ ರಾಜಕಾರಣ ಎಷ್ಟು ಪ್ರಬಲವಾಗಿ ಬೇರೂರಿದೆ, ಎಷ್ಟು ಪ್ರಖರವಾಗಿ ತನ್ನ ಪ್ರಭಾವವನ್ನು ಬೀರಿದೆ ಎಂದರೆ ಮಹಿಳೆಯರ ಒಂದು ವರ್ಗವೂ ಸಹ ಹೆಣ್ತನದ ಮೇಲಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನಸಿಕ ಹಲ್ಲೆಯನ್ನು ನಿರ್ಲಕ್ಷಿಸುತ್ತಿದೆ. ಕಾರಣಗಳು ಹಲವಾರು. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಧುನಿಕ ಜೀವನ ಶೈಲಿ, ಮೂಲ ಸಂಸ್ಕೃತಿಯ ನಿರಾಕರಣೆ, ಸಾಂಪ್ರದಾಯಿಕ ಕಟ್ಟುಪಾಡುಗಳ ಉಲ್ಲಂಘನೆ, ಕೌಟುಂಬಿಕ ನಿಯಮಗಳ ನಿರ್ಲಕ್ಷ್ಯ ಹೀಗೆ ಹಲವು ಕಾರಣಗಳನ್ನು ಮುಂದೊಡ್ಡುವ ಮೂಲಕ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನೂ, ಹೆಣ್ತನದ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯಗಳನ್ನೂ ಅಲಕ್ಷಿಸಲಾಗುತ್ತಿದೆ. ಮತ್ತೊಂದೆಡೆ ಅತ್ಯಾಚಾರ, ದೌರ್ಜನ್ಯಕ್ಕೊಳಗಾದ ಮಹಿಳೆಯ ಅಸ್ಮಿತೆಯೂ ನಮ್ಮ ಸಂವೇದನೆಯನ್ನು ನಿಯಂತ್ರಿಸಲಾರಂಭಿಸಿದೆ. ಅತ್ಯಾಚಾರ ಎಸಗುವ ಪುರುಷರ ಅಸ್ಮಿತೆ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡಲು ಮಾನದಂಡವಾಗಿ ಪರಿಣಮಿಸುತ್ತಿದೆ.
ಈ ಎಲ್ಲ ಆಯಾಮಗಳನ್ನು ಉನ್ನಾವೊ ಘಟನೆಯಲ್ಲಿ ಕಾಣ ಬಹುದು. ಅತ್ಯಾಚಾರಕ್ಕೊಳಗಾದ ಮಹಿಳೆಯ ಚಾರಿತ್ರ್ಯವನ್ನೇ ಪ್ರಶ್ನಿಸುವ ಸಮಾಜ ಇಂದು ಆಕೆಯ ಬದುಕುವ ಹಕ್ಕನ್ನೇ ಪ್ರಶ್ನಿಸುವ ಮಟ್ಟಿಗೆ ಮುಂದುವರಿದಿದೆ! ಆಕೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ. ಸಾಕ್ಷಿಗಳು ಹತರಾಗಿದ್ದಾರೆ. ಅವರ ವಕೀಲರು ಗಾಯಗೊಂಡಿದ್ದಾರೆ. ಅತ್ಯಾಚಾರ ಎಸಗಿದ ವ್ಯಕ್ತಿ ಘಟನೆ ನಡೆದ ಎರಡು ವರ್ಷದ ನಂತರ ರಾಜಕೀಯ ಪಕ್ಷದಿಂದ ಉಚ್ಚಾಟಿತನಾಗುತ್ತಾನೆ. ಈ ಎರಡು ವರ್ಷಗಳ ಅವಧಿಯಲ್ಲಿ ಜನಪ್ರತಿನಿಧಿಯಾಗಿಯೇ ಮುಂದುವರಿಯುತ್ತಾನೆ. ಈ ಅಕ್ರಮವನ್ನು ಪ್ರಶ್ನಿಸಿದ ಕೂಡಲೇ ಮತ್ತೊಂದು ಸಮುದಾಯದ ಶವ ಎದುರಾಗುತ್ತದೆ, ಸಂತ್ರಸ್ತೆ ಎದುರಾಗುತ್ತಾಳೆ, ಸಾಮುದಾಯಿಕ ಅಸ್ಮಿತೆ ಎದುರಾಗುತ್ತದೆ. ಕಥುವಾ ಘಟನೆಯಲ್ಲಿ ಇದನ್ನೇ ಕಂಡಿದ್ದೇವೆ. ಅತ್ಯಾಚಾರ ಎಸಗುವವರ ಅಸ್ಮಿತೆ ಪುರುಷಾಧಿಪತ್ಯವೊಂದೇ ಆಗಿದ್ದರೂ ಸಾಂದರ್ಭಿಕವಾಗಿ ಸಾಪೇಕ್ಷತೆಯನ್ನು ಪಡೆದುಕೊಂಡುಬಿಡುತ್ತದೆ. ಇಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ಅಸ್ಮಿತೆಯನ್ನೇ ಕಳೆದುಕೊಂಡುಬಿಡುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಸೇಡು ತೀರಿಸಿಕೊಳ್ಳುವ ಸಾಧನವಾಗಿ ಬಳಸುವ ಪರಂಪರೆಗೂ ನಾವು ಒಗ್ಗಿಹೋಗಿದ್ದೇವೆ. ಉನ್ನಾವೊ ಘಟನೆಯಲ್ಲೂ ಸಹ ಭೂ ವಿವಾದವೇ ಈ ಅತ್ಯಾಚಾರಕ್ಕೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಭೂ ವಿವಾದದಲ್ಲಿ ಯಾವುದೇ ಪಾತ್ರ ಇಲ್ಲದೆಯೂ ಹೆಣ್ಣು ಬಲಿಯಾಗುತ್ತಾಳೆ. ನಮ್ಮ ಬಾಲಿ, ಕಾಲಿ, ಟಾಲಿ, ಸ್ಯಾಂಡಲ್‌ವುಡ್ ಸಿನೆಮಾಗಳಲ್ಲೂ ಇದನ್ನೇ ತೋರುವುದಲ್ಲವೇ? ಇಷ್ಟಾದರೂ ನಮ್ಮ ನಾಗರಿಕ ಪ್ರಜ್ಞೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಇದಕ್ಕೆ ಏನನ್ನೋಣ?
ತುಡಿಯದಿರುವ ಹೃದಯಗಳನ್ನೂ ಕಲಕುವಂತಹ ಇಂತಹ ಘಟನೆಗಳೇ ನಮ್ಮ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸದಿರುವ ಸಂದರ್ಭದಲ್ಲಿ ‘‘ಜೈ ಶ್ರೀರಾಮ್’’ ಘೋಷಣೆಗೆ ಬಲಿಯಾಗುವ ಜೀವಗಳು ಹೇಗೆ ಮುಖ್ಯವಾಗಲು ಸಾಧ್ಯ? ರಾಮಮಂದಿರ ಮತ್ತು ಸುತ್ತಲಿನ ರಾಜಕಾರಣದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ‘‘ಜೈ ಶ್ರೀರಾಮ್’’ ಘೋಷಣೆ ಈಗ ಅಲ್ಪಸಂಖ್ಯಾತರ ವಿರುದ್ಧ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ವಿರೋಧಿಸುವವರ ವಿರುದ್ಧ ಬಳಸುವ ಯುದ್ಧಘೋಷವಾಗಿ ಪರಿಣಮಿಸಿದೆ. ಇದು ವ್ಯವಸ್ಥಿತ ರಾಜಕೀಯ ಸ್ವರೂಪ ಹೊಂದಿರುವಂತೆಯೇ ಸಂಘಟಿತ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗವಾಗಿಯೂ ನಾಗರಿಕ ಸಮಾಜವನ್ನು ಬಾಧಿಸುತ್ತಿದೆ. ಇಲ್ಲಿ ಪ್ರಶ್ನೆ ಇರುವುದು ಹಿಂದೂ ಧರ್ಮ ಮತ್ತು ಹಿಂದುತ್ವ ರಾಜಕಾರಣದ್ದು. ಜೈಶ್ರೀರಾಮ್ ಘೋಷಣೆಗೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಆದರೆ ಹಿಂದೂ ಧರ್ಮದ ಸಂರಕ್ಷಕರಾಗಿ ಸ್ವತಃ ನೇಮಿಸಿಕೊಂಡಿರುವ ಸಾಂಸ್ಕೃತಿಕ ರಾಜಕಾರಣದ ಅಧಿಪತಿಗಳಿಗೆ ಹಿಂದುತ್ವ ಮತ್ತು ಜೈಶ್ರೀರಾಮ್ ಘೋಷಣೆ ಪರಸ್ಪರ ಪೂರಕವಾಗಿರುವುದು ಸ್ಪಷ್ಟ. ಹಾಗಾಗಿ ಜೈಶ್ರೀರಾಮ್ ಘೋಷಣೆಗೆ ಮಾನ್ಯತೆ ನೀಡದವರು ಹಿಂದೂಗಳೇ ಅಲ್ಲ ಎಂದು ಘೋಷಿಸುವ ಅಧಿಕಾರವನ್ನು ಸಾಂಸ್ಕೃತಿಕ ಟೆಂಡರ್ ಮೂಲಕ ಪಡೆದುಕೊಂಡಿದ್ದಾರೆ.
‘‘ಜೈ ಶ್ರೀರಾಮ್’’ ಘೋಷಣೆ ಕೂಗದ 14 ವರ್ಷದ ಬಾಲಕನನ್ನು ಸುಟ್ಟುಹಾಕಲಾಗಿದೆ. ಘೋಷಣೆ ಕೂಗಲು ಶಾಸಕರೊಬ್ಬರ ಮೇಲೆ ಒತ್ತಡ ಹೇರಲಾಗಿದೆ. ಸಂಸತ್ತಿನಲ್ಲಿ ನಿರಾತಂಕವಾಗಿ ‘‘ಜೈ ಶ್ರೀರಾಮ್’’ ಘೋಷಣೆ ಮೊಳಗಿದೆ. ದೇಶದ ವಿವಿಧೆಡೆ ಈ ಘೋಷಣೆ ಹಲ್ಲೆಗೆ ಪರವಾನಿಗೆ ನೀಡುವ ಸಾಧನವಾಗಿ ಪರಿಣಮಿಸಿದೆ. ಇದು ನಾಗರಿಕ ಸಮಾಜಕ್ಕೆ ತಕ್ಕನಾದುದಲ್ಲ, ಇದರಿಂದ ನಾಗರಿಕ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವು ಸಾಹಿತಿಗಳು, ಕಲಾವಿದರು, ಚಿತ್ರರಂಗದ ಅಗ್ರಜರು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿ ಪತ್ರ ದೊಡ್ಡ ಕಲಹವನ್ನೇ ಸೃಷ್ಟಿಸಿದೆ. ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಚಂದ್ರಲೋಕಕ್ಕೆ ಹೋಗಲು ಆದೇಶಿಸಲಾಗಿದೆ. ಇಲ್ಲಿ ಸಮಸ್ಯೆ ಇರುವುದು ಘೋಷಣೆಯಲ್ಲಿ ಅಲ್ಲ. ಘೋಷಣೆಯ ಅಧಿಕೃತ ಮಾಲಕತ್ವ ಪಡೆದಿರುವವರಲ್ಲಿ. ‘‘ಜೈ ಶ್ರೀರಾಮ್’’ ಘೋಷಣೆ ನಿಷಿದ್ಧವೇನಲ್ಲ. ರಾಮನನ್ನು ಪೂಜಿಸುವವರು, ಆರಾಧಿಸುವವರು ಅಥವಾ ರಾಮನನ್ನು ದೈವಾಂಶ ಸಂಭೂತನೆಂದು ಭಾವಿಸುವವರು ಈ ಘೋಷಣೆಯನ್ನು ಕೂಗಲು ಅಡ್ಡಿ ಆತಂಕಗಳೂ ಇಲ್ಲ. ಆದರೆ ಈ ಘೋಷಣೆ ಕೂಗಲು ಒಪ್ಪದವರು ಹಿಂದೂ ವಿರೋಧಿಗಳೆಂದೋ ಅಥವಾ ದೇಶದ್ರೋಹಿಗಳೆಂದೋ ಭಾವಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ.
 ಹಿಂದುತ್ವ ಅಥವಾ ಹಿಂದುತ್ವದ ಪ್ರತಿಪಾದಕರು ಅನುಸರಿಸುವ ಮಾರ್ಗವನ್ನು ಒಪ್ಪದವರು ಹಿಂದೂ ವಿರೋಧಿಗಳೆಂದು ಅರ್ಥೈಸುವುದೇ ಇಂದಿನ ರಾಜಕೀಯ ದುರಂತ ಎನಿಸುತ್ತದೆ. ‘‘ಜೈ ಶ್ರೀರಾಮ್’’ ಘೋಷಣೆ ಈ ದುರಂತವನ್ನು ವಿಜೃಂಭಿಸುವ ಅಸ್ತ್ರವಾಗಿ, ಪ್ರತಿರೋಧದ ದನಿಗಳನ್ನು ದಮನಿಸುವ ಶಸ್ತ್ರವಾಗಿ ಪರಿಣಮಿಸುತ್ತಿದೆ. ಕೇಂದ್ರ ಸಚಿವರೊಬ್ಬರು ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದ ‘‘ವಂದೇ ಮಾತರಂ’’ ಘೋಷಣೆಯಂತೆ ‘‘ಜೈ ಶ್ರೀರಾಮ್’’ ಘೋಷಣೆಯನ್ನು ಬಳಸಲು ಆಜ್ಞಾಪಿಸಿದ್ದಾರೆ. ಈ ಸಾಂಸ್ಕೃತಿಕ ವಿಕೃತಿಗಳನ್ನು ನಾವು ಸಹಿಸಿಕೊಂಡೇ ಬಂದಿದ್ದೇವೆ. ಕಾರಣಗಳು ಹಲವು. ರಾಜಕೀಯ ನಿಷ್ಠೆ, ಸೈದ್ಧಾಂತಿಕ ಬದ್ಧತೆ, ಮತಧರ್ಮದಲ್ಲಿನ ಶ್ರದ್ಧೆ ಮತ್ತು ಹಲ್ಲೆಗೊಳಗಾಗುವ ಭೀತಿ. ಇಲ್ಲಿ ಸ್ವಧರ್ಮ ರಕ್ಷಣೆಯೇ ಪ್ರಧಾನ ಭೂಮಿಕೆಯಾಗಿದೆಯಾದರೂ ಇದೇ ಧರ್ಮದ ರಕ್ಷಣೆಯ ನೆಪವೊಡ್ಡಿ ಈ ನೆಲದ ಮೂಲ ಸಂಸ್ಕೃತಿಯನ್ನೇ ಬೇರುಸಹಿತ ಕಿತ್ತುಹಾಕಲು ಯತ್ನಿಸುತ್ತಿರುವ ವಿಕೃತ ಸಾಂಸ್ಕೃತಿಕ ಪ್ರಜ್ಞೆ ಆತಂಕ ಸೃಷ್ಟಿಸುತ್ತದೆ.
ಈ ವಿಕೃತ ಸಾಂಸ್ಕೃತಿಕ ಪ್ರಜ್ಞೆ ನಮ್ಮ ಸಮಾಜದ ನಾಗರಿಕ ಪ್ರಜ್ಞೆಯನ್ನು ನಿಷ್ಕ್ರಿಯವನ್ನಾಗಿ ಮಾಡಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ‘‘ಜೈ ಶ್ರೀರಾಮ್’’ ಘೋಷಣೆಯ ಮೂಲಕ ಅನ್ಯತೆಯ ಭಾವ ಮೂಡಿಸಿ ದ್ವೇಷ ರಾಜಕಾರಣವನ್ನು ಪೋಷಿಸುತ್ತಿರುವ ಕೆಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ. ಹಿಂದೂ ಧರ್ಮವನ್ನು ಒಪ್ಪಿಕೊಂಡೇ ಅದರೊಳಗಿನ ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಶ್ರೇಷ್ಠತೆಯ ಪರಂಪರೆ ಮತ್ತು ಅಹಮಿಕೆ ಇವೆಲ್ಲವನ್ನೂ ವಿರೋಧಿಸುವ ದನಿಗಳು ಇತಿಹಾಸ ಕಾಲದಲ್ಲೂ ಇದ್ದವು, ಇಂದೂ ಇದೆ, ಮುಂದೆಯೂ ಇರುತ್ತದೆ. ಈ ಯಾವುದೇ ದನಿಗಳಿಗೆ, ‘‘ಜೈ ಶ್ರೀರಾಮ್’’ ಘೋಷವಾಕ್ಯವಾಗುವುದಿಲ್ಲ. ರಾಮನೂ ಸ್ವೀಕರಾರ್ಹನಾಗಬೇಕೆಂದಿಲ್ಲ. ಇಲ್ಲಿ ಗಮನಿಸಬೇಕಿರುವ ಸಂಗತಿ ಎಂದರೆ ಈ ರೀತಿಯ ಪ್ರತಿರೋಧವನ್ನು ಶತಮಾನಗಳಿಂದಲೂ ಎದುರಿಸುತ್ತಲೇ ಹಿಂದೂ ಧರ್ಮವೂ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ‘‘ಜೈ ಶ್ರೀರಾಮ್’’ ಘೋಷಣೆಯನ್ನು ಸಾರ್ವತ್ರಿಕ ಘೋಷವಾಕ್ಯವನ್ನಾಗಿ ಮಾಡುವ ಮೂಲಕವೇ ಹಿಂದೂ ಧರ್ಮವನ್ನು ರಕ್ಷಿಸಬಹುದು ಎನ್ನುವ ಸಮೂಹ ಸನ್ನಿಗೆ ನಮ್ಮ ಸಮಾಜ ಬಲಿಯಾಗಿರುವುದೇ ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ವಿಕೃತಿಗಳಿಗೆ ಉತ್ತೇಜನ ನೀಡಿದಂತಾಗಿದೆ. 19 ಮತ್ತು 20ನೇ ಶತಮಾನದ ಅನೇಕ ಸಮಾಜ ಸುಧಾರಕರೂ ಸಹ ಹಿಂದೂ ಧರ್ಮದೊಳಗಿನ ಮಾನವ ವಿರೋಧಿ ನೀತಿ ಸಂಹಿತೆಗಳನ್ನು ಖಂಡತುಂಡವಾಗಿ ವಿರೋಧಿಸಿದ್ದಾರೆ. ಆದರೆ ಅವರಾರೂ ಹಿಂದೂ ವಿರೋಧಿಗಳಾಗಿರಲಿಲ್ಲ. ಪ್ರಸ್ತುತ ಸಂದರ್ಭದಲ್ಲೂ ಸಹ ಹಿಂದೂ ಧರ್ಮವನ್ನು ಅನೇಕ ಕಾರಣಗಳಿಗಾಗಿ ವಿರೋಧಿಸುವವರು ಹಿಂದೂಗಳನ್ನು ವಿರೋಧಿಸುವುದಿಲ್ಲ ಎನ್ನುವುದೂ ವಾಸ್ತವ ಅಲ್ಲವೇ?
 ಈ ವಾಸ್ತವವನ್ನು ಮರೆಮಾಚಿ ಹಿಂದೂ-ಹಿಂದೂ ಧರ್ಮ-ಹಿಂದುತ್ವ ಈ ಮೂರನ್ನೂ ಸಮೀಕರಿಸುವ ಮೂಲಕ ‘‘ಜೈ ಶ್ರೀರಾಮ್’’ ಘೋಷಣೆಯನ್ನು ಸಾರ್ವತ್ರೀಕರಿಸಲಾಗುತ್ತಿದೆ. ಈ ಸಾರ್ವತ್ರೀಕರಣಕ್ಕೆ ನಾಗರಿಕ ಮನ್ನಣೆ ದೊರೆತಿದೆಯೇನೋ ಎನ್ನುವಂತೆ ನಾಗರಿಕ ಸಮಾಜವೂ ಎಲ್ಲ ರೀತಿಯ ಹತ್ಯೆ, ಹಲ್ಲೆ, ಆಕ್ರಮಣ ಮತ್ತು ಗುಂಪು ಹಲ್ಲೆಗಳಿಗೆ ಮೂಕ ಸಾಕ್ಷಿಯಾಗಿ ನಿಂತಿದೆ. ಇದೇ ಮೂಕ ಪ್ರಜ್ಞೆಯನ್ನು ಉನ್ನಾವೊ, ಕಥುವಾ, ದಾದ್ರಿ, ಉನ ಘಟನೆಗಳಲ್ಲೂ ಕಾಣುತ್ತಿದ್ದೇವೆ. ಅಷ್ಟೇ ಅಲ್ಲ ಆರ್ಥಿಕ ವಲಯದ ಕ್ಷೋಭೆ ಈ ದೇಶದ ಕೋಟ್ಯಂತರ ಜನರ ಬದುಕಿಗೆ ಮಾರಕವಾಗುತ್ತಿರುವುದನ್ನೂ ನಿರ್ಲಿಪ್ತತೆಯಿಂದ ನೋಡುತ್ತಿದ್ದೇವೆ. ಈಗ ಯೋಚಿಸೋಣ. ಭಾರತೀಯ ಸಮಾಜವನ್ನು ಆವರಿಸಿರುವುದು ಸಮೂಹ ಸನ್ನಿಯೋ, ನಿಷ್ಕ್ರಿಯತೆಯೋ, ನಿರ್ಲಿಪ್ತತೆಯೋ ಅಥವಾ ಸ್ಥಿತಪ್ರಜ್ಞ ಮನೋಭಾವವೋ? ನಮ್ಮ ಸುತ್ತಲಿನ ಸಮಾಜ ಖಂಡಿತವಾಗಿಯೂ ಸ್ಥಿತಪ್ರಜ್ಞ ಸಮಾಜವಲ್ಲ. ನಮ್ಮ ನಾಗರಿಕ ಪ್ರಜ್ಞೆ ನಿಷ್ಕ್ರಿಯವಾಗುತ್ತಿದೆ. ಚಿರನಿದ್ರೆಗೆ ಜಾರುವ ಮುನ್ನ ಜಾಗೃತರಾಗುವುದು ಒಳಿತಲ್ಲವೇ?

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ