370ನೇ ವಿಧಿ ರದ್ದು ಅಪಾಯಕಾರಿ, ತಪ್ಪು ಹೆಜ್ಜೆ: ನ್ಯೂಯಾರ್ಕ್ ಟೈಮ್ಸ್

Update: 2019-08-06 17:27 GMT

ಕಾಶ್ಮೀರದ ಭಾಗಶ ಸ್ವಾಯತ್ತೆಯನ್ನು ರದ್ದು ಪಡಿಸುವ ಭಾರತೀಯ ಸರಕಾರದ ಕ್ರಮ ಅತ್ಯಂತ ಅಪಾಯಕಾರಿ ಹಾಗು ತಪ್ಪು ಹೆಜ್ಜೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಭಾರೀ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿ ಜಾರಿ ಮಾಡಲಾಗಿರುವ ಈ ಕ್ರಮದಿಂದ ರಕ್ತಪಾತ ನಡೆಯುವುದು ಬಹುತೇಕ ಖಚಿತ ಹಾಗು ಪಾಕಿಸ್ತಾನದ ಜೊತೆ ಸಂಘರ್ಷ ಉಲ್ಬಣಿಸುವುದಕ್ಕೆ ಇದು ದಾರಿ ಮಾಡಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.  

ತನ್ನ ಈ ಕ್ರಮದಿಂದ ಸಂಘರ್ಷ ಸೃಷ್ಟಿಯಾಗುತ್ತದೆ ಎಂದು ಭಾರತ ಸರಕಾರಕ್ಕೆ ಚೆನ್ನಾಗಿ ಗೊತ್ತಿರುವುದರಿಂದಲೇ ಅದು ದೊಡ್ಡ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿ, ರಾಜ್ಯದಿಂದ ಪ್ರವಾಸಿಗರನ್ನು ಹೊರಕಳಿಸಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಟ್ಟು, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಟೀಕಿಸಿದೆ. 

ನಿಜವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ 'ಐತಿಹಾಸಿಕ ಪ್ರಮಾದ' ಎಂದು ಬಿಜೆಪಿ ಹಾಗು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಬಂದಿದ್ದಾರೆ. ಆದರೆ ಈ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಭಯೋತ್ಪಾದಕ ದಾಳಿಯ ಸಾಧ್ಯತೆ ಇದೆ ಎಂದು ಹೇಳಿ ಕೇಂದ್ರ ಸರಕಾರ ಕಾಶ್ಮೀರದಲ್ಲಿ ದಿಗ್ಬಂಧನ ವಿಧಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. 

ಕೇಂದ್ರದ ಈ ನಡೆ ಜಾಗತಿಕ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗ ಅಮೇರಿಕ ಪಾಕ್ ಗೆ ನೆರವು ಕಡಿಮೆ ಮಾಡಿ ಭಾರತದೊಂದಿಗೆ ಸ್ನೇಹ ಬೆಳೆಸಿ ಚೀನಾವನ್ನು ಕೆಣಕುತ್ತಿದೆ. ಆ ಕಡೆ ಚೀನಾ ಪಾಕ್ ಬೆಂಬಲಕ್ಕೆ ನಿಂತಿದೆ. ಈ ವಿವಾದವನ್ನು ಬಳಸಿಕೊಂಡು ಅಮೇರಿಕ ಹಾಗು ಚೀನಾ ದೇಶಗಳು ಕಾಶ್ಮೀರವನ್ನು ದಾಳವಾಗಿ ಬಳಸುವ ಸಾಧ್ಯತೆ ಇದೆ, ಆದರೆ ಹಾಗಾಗಬಾರದು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಅಮೇರಿಕ, ಚೀನಾ ವಿಶ್ವಸಂಸ್ಥೆ ಹಾಗು ಇತರ ಪ್ರಭಾವೀ ಜಾಗತಿಕ ಶಕ್ತಿಗಳು ಭಾರತದ ಮೇಲಿರುವ ತಮ್ಮ ಪ್ರಭಾವವನ್ನು ಸರಿಯಾಗಿ ಬಳಸಿ ಭಾರತದ ಈ ಕ್ರಮ ಪ್ರದೇಶದಲ್ಲಿ ಭಾರೀ ಅನಿರೀಕ್ಷಿತ ಅಪಾಯ ಹಾಗು ಬಿಕ್ಕಟ್ಟಿಗೆ ತಿರುಗದಂತೆ ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದೆ. 

ಭಾರತ ಸರಕಾರದ ಕ್ರಮ ಕೊನೆಗೆ ಸುಪ್ರೀಂ ಕೋರ್ಟ್ ಎದುರು ಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದಿರುವ ಪತ್ರಿಕೆ ಆದರೂ 'ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ' ಎಂಬ ಕುಖ್ಯಾತಿಗೆ ಒಳಗಾಗಿರುವ ಕಾಶ್ಮೀರದ ಕುರಿತ ಈ ಕ್ರಮ ಈಗಾಗಲೇ ಬೆಂಕಿ ಹಚ್ಚಿ ಆಗಿದೆ ಎಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News