ಕಾಶ್ಮೀರದಲ್ಲಿ 8-10 ಸಾವಿರ ಮಂದಿ ಸತ್ತರೂ ಕೇಂದ್ರ ಸಿದ್ಧವಾಗಿದೆ, ಆದರೆ ನಾವು ಶಾಂತಿ ಕಾಪಾಡೋಣ: ಶಾ ಫೈಸಲ್

Update: 2019-08-07 10:30 GMT
ಶಾ ಫೈಸಲ್

ಹೊಸದಿಲ್ಲಿ:  ಕಾಶ್ಮೀರದ ಐಎಎಸ್ ಟಾಪರ್, ಮಾಜಿ ಅಧಿಕಾರಿ, ಈಗ ರಾಜಕಾರಣಿಯಾಗಿರುವ ಶಾ  ಫೈಸಲ್, 370ನೇ ವಿಧಿ ಹಾಗೂ ರಾಜ್ಯ ಸ್ಥಾನಮಾನ ರದ್ದತಿ ನಂತರ ಕಾಶ್ಮೀರದ  ಈಗಿನ ಸ್ಥಿತಿಗತಿಗಳನ್ನು  ವಿವರಿಸಿ ಟ್ವೀಟ್ ಮಾಡಿದ್ದಾರೆ.

"ಕಾಶ್ಮೀರ ಅಭೂತಪೂರ್ವ ನಿರ್ಬಂಧಗಳನ್ನು ಅನುಭವಿಸುತ್ತಿದೆ. ಝೀರೋ ಬ್ರಿಡ್ಜ್ ನಿಂದ ಏರ್ ಪೋರ್ಟ್ ತನಕ ಕೆಲ ವಾಹನಗಳು ಸಂಚಾರ ಕಾಣಿಸುತ್ತದೆ. ಇತರ ಸ್ಥಳಗಳಿಗೆ ರೋಗಿಗಳಿಗೆ ಅಥವಾ  ಕರ್ಫ್ಯೂ  ಪಾಸ್ ಹೊಂದಿದವರಿಗೆ ಹೊರತಾಗಿ ಇತರರಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸಾಜದ್ ಲೋನೆ ಅವರನ್ನು ಸಂಪರ್ಕಿಸಲು ಯಾ ಅವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇತರ ಜಿಲ್ಲೆಗಳಲ್ಲಿ ಕರ್ಫ್ಯೂ ಇನ್ನಷ್ಟು ಬಿಗಿಯಾಗಿದೆ.  ಎಂಟು ಮಿಲಿಯನ್ ಜನಸಂಖ್ಯೆ ಇಂತಹ  ಪರಿಸ್ಥಿತಿ ಹಿಂದೆಂದೂ ಎದುರಿಸಿರಲಿಲ್ಲ,'' ಎಂದು ಅವರು ವಿವರಿಸಿದ್ದಾರೆ.

"ಸದ್ಯ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಧಿಕಾರಿಗಳಿಗೆ ನೀಡಲಾಗಿರುವ ಸ್ಯಾಟಲೈಟ್ ಫೋನುಗಳನ್ನು ಬಳಸಿ ಅಗತ್ಯ ವಸ್ತು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನನ್ನ ಕೆಲ ಮೂಲಗಳು ತಿಳಿಸಿವೆ. ಬೇರೆ ಯಾವುದೇ ರೀತಿಯಲ್ಲಿ ಸಂಪರ್ಕ ಸಾಧ್ಯವಿಲ್ಲ, ಡಿಶ್ ಟಿವಿ ಇರುವವರು ಟಿವಿಯಲ್ಲಿ ಸುದ್ದಿ ನೋಡುತ್ತಾರೆ. ಕೇಬಲ್ ಸೇವೆಗಳು ಬಾಧಿತವಾಗಿವೆ. ಏನಾಗಿದೆ ಎಂಬುದರ ಬಗ್ಗೆ ಈಗಲೂ ಹಲವರಿಗೆ ಅರಿವಿಲ್ಲ. ಈಗ ಸ್ವಲ್ಪ ಹೊತ್ತಿನ ತನಕ ರೇಡಿಯೋ ಕೇಳಬಹುದಾಗಿತ್ತು. ಈಗ ಜನರು ಕೇವಲ ಡಿಡಿ ಮಾತ್ರ ನೋಡಬಹುದು. ಎಲ್‍ಡಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿ ಮಹಿಳೆಯರು ಸಮಸ್ಯೆ ಎದುರಾಗದಿರಲೆಂದು ಮುಂಚಿತವಾಗಿಯೇ ದಾಖಲಾಗುತ್ತಿದ್ದಾರೆ. ಕೆಲ ಜನರು ಲಂಗರ್  ನಡೆಸಲು ಯೋಚಿಸುತ್ತಿದ್ದಾರೆ,'' ಎಂದು ಅವರು ಬರೆದಿದ್ದಾರೆ.

"ಇಲ್ಲಿಯ ತನಕ ಎಲ್ಲೂ ಹಿಂಸಾತ್ಮಕ ಘಟನೆಗಳು ನಡೆದಿಲ್ಲ ಎಂದು ಬರೆದಿರುವ ಶಾ  ಫೈಸಲ್, " ರಾಮ್‍ಬಾಘ್, ನಟಿಪೋರ, ಡೌನ್‍ಟೌನ್, ಕುಲ್ಗಾಂ, ಅನಂತ್‍ನಾಗ್ ಮುಂತಾದೆಡೆ ಕಲ್ಲೆಸೆತದ ಘಟನೆಗಳು ನಡೆದಿವೆ. ಆದರೆ ಸಾವು ನೋವು ಸಂಭವಿಸಿಲ್ಲ,'' ಎಂದು ಬರೆದಿದ್ದಾರೆ.

ಇತ್ತೀಚಿಗಿನ ಬೆಳವಣಿಗೆಗಳ ಕುರಿತಂತೆ ಕಾಶ್ಮೀರಿಗಳ ಪ್ರತಿಕ್ರಿಯೆಯ ಬಗ್ಗೆಯೂ ಬರೆದಿರುವ ಅವರು "ಜನರು ಆಘಾತದಲ್ಲಿದ್ದಾರೆ. ಏನಾಯಿತೆಂದು ಅರಿತು ಅವರು ಇನ್ನೂ ಸಾವರಿಸಿಕೊಂಡಿಲ್ಲ. ನಾವು ಕಳೆದುಕೊಂಡಿದ್ದನ್ನು ಎಲ್ಲರೂ ದುಃಖಿಸುತ್ತಿದ್ದಾರೆ. 370ನೇ ವಿಧಿಗಿಂತ ಹೆಚ್ಚಾಗಿ ರಾಜ್ಯ ಸ್ಥಾನಮಾನ ಕಳೆದುಕೊಂಡಿದ್ದು ಜನರಿಗೆ ನೋವು ತಂದಿದೆ. ಕಳೆದ 70 ವರ್ಷಗಳಲ್ಲಿ ಇದು ಭಾರತದ ಅತಿ ದೊಡ್ಡ ವಿಶ್ವಾಸದ್ರೋಹವೆಂದು ತಿಳಿಯಲಾಗಿದೆ,'' ಎಂದು ಶಾ ಫೈಸಲ್ ಬರೆದಿದ್ದಾರೆ.

"ಬಂಧನದಿಂದ ತಪ್ಪಿಸಿಕೊಂಡ ಕೆಲ ನಾಯಕರು ಶಾಂತಿಯಿಂದಿರುವಂತೆ ಟಿವಿ ಮೂಲಕ ವಿನಂತಿಸಿದ್ದಾರೆ. ಎಂಟರಿಂದ ಹತ್ತು ಸಾವಿರ ಸಾವುಗಳನ್ನು ಎದುರಿಸಲು ಸರಕಾರ ಸಿದ್ಧವಿದೆಯೆಂದು ಹೇಳಲಾಗುತ್ತಿದೆ.  ಸಾಮೂಹಿಕ ಹತ್ಯಾಕಾಂಡಕ್ಕೆ ನಾವು ಅವಕಾಶ ನೀಡಬಾರದು. ನಾವು ಜೀವಂತವಾಗಿದ್ದುಕೊಂಡು ಪ್ರತಿ ಹೋರಾಟ ನಡೆಸೋಣ,'' ಎಂದು ಅವರು ಕಾಶ್ಮೀರದ ಜನತೆಗೆ ಕರೆಯಿತ್ತಿದ್ದಾರೆ.

"ಅಹಿತಕರ ಘಟನೆಗಳು ನಡೆಯದಂತಾಗಲು ಜನರು ಜಮ್ಮು ಕಾಶ್ಮೀರಕ್ಕೆ ಪಯಣಿಸಬಾರದು. ಇಲ್ಲಿನ ಸೇನಾ ಸಿಬ್ಬಂದಿಗಳು ಕಠೋರವಾಗಿದ್ದಾರೆ. ನಿಮ್ಮ ಜಾಗವನ್ನು ನಿಮಗೆ ತೋರಿಸುತ್ತೇವೆ ಎಂದು ಒಬ್ಬ ಸಿಬ್ಬಂದಿ ನನ್ನ ಪರಿಚಿತರಿಗೆ  ಹೇಳಿದ್ದಾರೆ. ಈ ರೀತಿ ಸ್ಥಳೀಯರನ್ನು ಬೆದರಿಸಿರುವ ಬಗ್ಗೆ ಹಲವು ಕಡೆಗಳಿಂದ ತಿಳಿದು ಬಂದಿದೆ. ಆದರೆ ಕಾಶ್ಮೀರಿಗಳು ಶಾಂತರಾಗಿದ್ದಾರೆ.  ಕರ್ಫ್ಯೂ  ಸಡಿಲಗೊಳಿಸಿದರೂ ಪರಿಸ್ಥಿತಿ ಸ್ಫೋಟಕವಾಗಿರಲಿದೆ. ನನ್ನಲ್ಲಿ ವಿಮಾನ ನಿಲ್ದಾಣದಲ್ಲಿ ಹಲವಾರು ಪ್ರಶ್ನೆ ಕೇಳಿದ ಯುವಕರಿಗೆ ಈ ಅನ್ಯಾಯ ಸರಿ ಪಡಿಸಲು ಸುಪ್ರೀಂ ಕೋರ್ಟಿಗೆ ಹೋಗುವ ಎಂದು ಹೇಳಿದೆ, ಇದೇ ನಮಗಿರುವ ಒಂದು ಆಶಾವಾದ. ಅಂತಾರಾಷ್ಟ್ರೀಯ ಸಮುದಾಯ ಕಣ್ಣು ಮುಚ್ಚಿ ಕುಳಿತಿದೆ. ಅಲ್ಲಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ನಮ್ಮಿಂದ ಹಾಡು ಹಗಲೇ ಕದಿಯಲಾದ ಸಂಪತ್ತನ್ನು ನಮಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಒಂದು ದಿನ ವಾಪಸ್ ನೀಡಬೇಕಾಗಿರುವುದು  ಶೋಚನೀಯ. ಪ್ರತಿ ಹೋರಾಟ ನಡೆಸುವ ನಿರ್ಧಾರದ ಹೊರತಾಗಿ ಪ್ರಾಯಶಃ ಎಲ್ಲವನ್ನೂ ಕಳೆದುಕೊಂಡಿದ್ದೇವೆ.ನಾವು ಖಂಡಿತವಾಗಿಯೂ ಹೋರಾಡುತ್ತೇವೆ,''ಎಂದು ಅವರು ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News