ಹಜ್ ಯಾತ್ರಿಗಳಿಗಾಗಿ 2 ಸ್ಮಾರ್ಟ್‌ಫೋನ್ ಆ್ಯಪ್‌ಗಳ ಬಿಡುಗಡೆ

Update: 2019-08-07 17:38 GMT

ಜಿದ್ದಾ, ಆ. 7: ಹಜ್ ಯಾತ್ರಿಗಳಿಗೆ ನೆರವಾಗಲು ಸೌದಿ ಅರೇಬಿಯದ ಅಧಿಕಾರಿಗಳು ಎರಡು ಸಂವಹನಕಾರಿ ಆ್ಯಪ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಸ್ಮಾರ್ಟ್ ಫೋನ್‌ಗಳಲ್ಲಿ ಅಳವಡಿಸಿಕೊಳ್ಳಬಹುದಾದ ಈ ಆ್ಯಪ್‌ಗಳು ತುರ್ತು ಸೇವಾ ಕೇಂದ್ರಗಳು, ಪವಿತ್ರ ಸ್ಥಳಗಳು, ಕರೆನ್ಸಿ ವಿನಿಮಯ ಕೇಂದ್ರಗಳು, ರೆಸ್ಟೋರೆಂಟ್‌ಗಳು ಮತ್ತು ವಾಸ್ತವ್ಯ ಸ್ಥಳಗಳನ್ನು ಪತ್ತೆಹಚ್ಚುವಲ್ಲಿ ನೆರವು ನೀಡುತ್ತವೆ.

ಇಂಗ್ಲಿಷ್, ಉರ್ದು ಮತ್ತು ಫ್ರೆಂಚ್ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಲಭ್ಯವಿರುವ ‘ಮನಸಿಕಾನ’ ಎಂಬ ಆ್ಯಪ್‌ನ್ನು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ಸಹಕಾರದೊಂದಿಗೆ ಹಜ್ ಮತ್ತು ಉಮ್ರಾ ಸಚಿವಾಲಯ ಬಿಡುಗಡೆಗೊಳಿಸಿದೆ.

ಅದು ಮಕ್ಕಾ, ಮದೀನಾ ಹಾಗೂ ಇತರ ನಗರಗಳಲ್ಲಿ ಇಂಟರ್‌ನೆಟ್ ಸಂಪರ್ಕ ಇಲ್ಲದೆಯೇ ನಿರ್ದಿಷ್ಟ ಸ್ಥಳಗಳನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ನೆರವು ನೀಡುತ್ತದೆ. ಮಿನಾ, ಅರಫಾತ್ ಮತ್ತು ಮುಝ್ದಲಿಫದಲ್ಲಿನ ಪವಿತ್ರ ಸ್ಥಳಗಳು, ಮಸೀದಿಗಳು, ರೆಸ್ಟೋರೆಂಟ್‌ಗಳು ಮತ್ತು ಶೌಚಾಲಯಗಳನ್ನು ಈ ಆ್ಯಪ್‌ನಲ್ಲಿ ಪ್ರಮುಖವಾಗಿ ಬಿಂಬಿಸಲಾಗಿದೆ. ಈ ಆ್ಯಪನ್ನು ಈಗಾಗಲೇ 10,000ಕ್ಕಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ.

ಯಾತ್ರಿಕರಿಗಾಗಿ ಸೌದಿ ಪೋಸ್ಟ್ ಅಭಿವೃದ್ಧಿಪಡಿಸಿರುವ ಆ್ಯಪ್ ‘ಹಜ್ ಆ್ಯಂಡ್ ಉಮ್ರಾ ನ್ಯಾವಿಗೇಟರ್’ನ್ನೂ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್‌ನಲ್ಲಿ ಮಕ್ಕಾ ಮತ್ತು ಮದೀನಾಗಳಲ್ಲಿರುವ ಪವಿತ್ರ ಸ್ಥಳಗಳ ಮಾರ್ಗಸೂಚಿಗಳನ್ನೊಳಗೊಂಡ ನಕಾಶೆಗಳನ್ನು ನೀಡಲಾಗಿದೆ. ಯಾತ್ರಿಕರು ವಿಳಾಸಗಳು, ಸೇವೆಗಳು, ಶಿಬಿರ ಸಂಖ್ಯೆಗಳು ಅಥವಾ ಹಜ್ ಕಂಪೆನಿಗಳ ಹೆಸರುಗಳನ್ನು 16 ಭಾಷೆಗಳಲ್ಲಿ ಬರೆದು ಮಾಹಿತಿಗಳನ್ನು ಕೋರಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News