ಬಿಜೆಪಿಯ ಸ್ವರಾಜ್ ಇನ್ನಿಲ್ಲ

Update: 2019-08-07 18:30 GMT

ಬಿಜೆಪಿಯೊಳಗಿರುವ ವಾಜಪೇಯಿ ತಲೆಮಾರಿನ ಪ್ರಮುಖ ಕೊಂಡಿಯೊಂದು ಕಳಚಿದೆ. ಸುಶ್ಮಾ ಸ್ವರಾಜ್ ಇನ್ನಿಲ್ಲ ಎನ್ನುವ ಮಾತು ವರ್ತಮಾನದ ರಾಜಕೀಯ ಬೆಳವಣಿಗೆಯಲ್ಲಿ ಹತ್ತು ಹಲವು ಬಗೆಯಲ್ಲಿ ಧ್ವನಿಸುತ್ತದೆ. ಸದ್ಯ ದೇಶದಲ್ಲಿ ಬಿಜೆಪಿ ರಾಜಕೀಯವಾಗಿ ಹೊರಳುತ್ತಿರುವ ದಿಕ್ಕುಗಳನ್ನು ಗಮನಿಸಿದಾಗ, ವಾಜಪೇಯಿ ತಲೆಮಾರಿನ ಸುಶ್ಮಾ ಸ್ವರಾಜ್ ಅವರಂತಹ ಅನುಭವೀ ನಾಯಕರು ದೇಶಕ್ಕಲ್ಲದಿದ್ದರೂ, ಬಿಜೆಪಿಗೆ ತುರ್ತು ಅಗತ್ಯವಿತ್ತು ಎನ್ನುವುದು ಬಹುತೇಕರ ಕಳವಳವೂ ಹೌದು. 1970ರಲ್ಲಿ ಎಬಿವಿಪಿ ನಾಯಕಿಯಾಗಿ ರಾಜಕೀಯದಲ್ಲಿ ಬೆಳೆಯುತ್ತಾ, ಬರೇ ಏಳು ವರ್ಷಗಳಲ್ಲಿ ಹರ್ಯಾಣದ ವಿಧಾನಸಭೆಗೆ ಶಾಸಕಿಯಾಗಿ ಆಯ್ಕೆಯಾದರು. ಅಷ್ಟೇ ಅಲ್ಲ ಹರ್ಯಾಣದಲ್ಲಿ ಎರಡು ಬಾರಿ ಸಚಿವೆಯಾಗಿ, ಬಳಿಕ ನಿಧಾನಕ್ಕೆ ರಾಷ್ಟ್ರ ರಾಜಕಾರಣಕ್ಕೆ ತಮ್ಮನ್ನು ವಿಸ್ತರಿಸಿಕೊಂಡರು. ಸುಪ್ರೀಂಕೋರ್ಟ್‌ನ ವಕೀಲೆಯಾಗಿದ್ದ ಸುಶ್ಮಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕೃತವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡವರು. ಇದಾದ ಬಳಿಕ, ಸಂಘಪರಿವಾರ ಸಿದ್ಧಾಂತದ ತಳಹದಿಯಲ್ಲಿ ರಾಜಕೀಯವಾಗಿ ಬೆಳೆಯುತ್ತಾ ಹೋದರು.

ಶಾಸಕಿಯಾಗಿ, ಸಚಿವೆಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲೆಯಾಗಿ ರಾಜಕೀಯ ಅನುಭವಗಳ ಗಣಿಯಾಗಿದ್ದ ಸುಶ್ಮಾಸ್ವರಾಜ್‌ಗೆ ಈ ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳಿದ್ದವು. ಮೋದಿ ಎನ್ನುವ ಕೃತಕ ಅಲೆಯೊಂದು ಬಿಜೆಪಿಯೊಳಗೆ ಸುನಾಮಿ ರೂಪದಲ್ಲಿ ಎದ್ದೇಳದೆ ಇದ್ದರೆ ಅದು ಸಾಧ್ಯವೂ ಆಗಿ ಬಿಡುತ್ತಿತ್ತು. ಹಾಗೊಂದು ವೇಳೆ ಆಗಿದ್ದರೆ ಆಕೆ, ಭಾರತದ ಎರಡನೇ ಮಹಿಳಾ ಪ್ರಧಾನಿಯಾಗಿ ಗುರುತಿಸುತ್ತಿದ್ದರೇನೋ. ವಾಜಪೇಯಿಯಂತಹ ಹಿರಿಯ ಮುತ್ಸದ್ದಿಗಳ ಗರಡಿಯಲ್ಲಿ ಪಳಗಿದ್ದ ಸುಶ್ಮಾ ಸ್ವರಾಜ್ ಅವರಿಗೆ ಈ ದೇಶವನ್ನು ಯಶಸ್ವಿಯಾಗಿ ಮುನ್ನೆಡೆಸುವ ಮುತ್ಸದ್ದಿತನವೂ ಇತ್ತು. ದುರದೃಷ್ಟವಶಾತ್, ಆಡಳಿತ ನಡೆಸುವುದಕ್ಕೆ ಮುತ್ಸದ್ದಿತನ, ಅನುಭವ, ವಿದ್ಯಾರ್ಹತೆ ಇವುಗಳ ಅಗತ್ಯವೇ ಇಲ್ಲ ಎನ್ನುವ ಹೊಸ ಬಗೆಯ ರಾಜಕಾರಣವೊಂದು ದೇಶದಲ್ಲಿ ಜಾರಿಗೆ ಬಂತು. ಪರಿಣಾಮವಾಗಿ ಸುಶ್ಮಾ ಸ್ವರಾಜ್ ಮಾತ್ರವಲ್ಲ, ಅವರಂತೆಯೇ ಅನುಭವಿಗಳಾಗಿರುವ ಒಂದು ತಲೆಮಾರೇ ಬಿಜೆಪಿಯೊಳಗೆ ಬದಿಗೆ ತಳ್ಳಲ್ಪಟ್ಟಿತು. ವಿದೇಶಾಂಗ ಸಚಿವ ಸ್ಥಾನಕ್ಕೇ ಸುಶ್ಮಾ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಸುಶ್ಮಾ ರಾಷ್ಟ್ರ ರಾಜಕೀಯದಲ್ಲಿ ಮುನ್ನೆಲೆಗೆ ಬಂದುದು ಬಳ್ಳಾರಿಯಲ್ಲಿ ಸೋನಿಯಾಗಾಂಧಿಯ ವಿರುದ್ಧ ಸ್ಪರ್ಧಿಸುವ ಮೂಲಕ. ಸೋನಿಯಾಗಾಂಧಿಯನ್ನು ‘ವಿದೇಶಿ’ ಎಂದು ಬಿಂಬಿಸಿ ಅವರು ಪ್ರಧಾನಿಯಾಗದಂತೆ ತಡೆಯುವಲ್ಲಿ ಸುಶ್ಮಾ ಅವರ ಪಾಲು ಬಹುದೊಡ್ಡದಿದೆ. ಸೋನಿಯಾಗಾಂಧಿ ಅವರು ಪ್ರಧಾನಿಯಾದರೆ ತಾನು ತಲೆಬೋಳಿಸಿಕೊಳ್ಳುತ್ತೇನೆ ಎಂಬ ಅಸೂಕ್ಷ್ಮವಾದ ಹೇಳಿಕೆಯನ್ನೂ ಸುಶ್ಮಾ ಸ್ವರಾಜ್ ನೀಡಿ ವಿವಾದಕ್ಕೊಳಗಾಗಿದ್ದರು. ಸೋನಿಯಾಗಾಂಧಿಯ ವಿರುದ್ಧ ಆಕೆ ಸೋತರಾದರೂ, ರಾಷ್ಟ್ರಮಟ್ಟದಲ್ಲಿ ಅವರ ರಾಜಕೀಯ ಬದುಕು ತಿರುವು ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಬೆಳೆದ ‘ಬಳ್ಳಾರಿ ನಂಟು’ ಅವರನ್ನು ಬಳಿಕ ತೀವ್ರ ಮುಜುಗರಕ್ಕೆ ಸಿಲುಕಿಸಿತು. ಬಳ್ಳಾರಿಯ ಗಣಿದೊರೆಗಳಿಂದ ಸೂಟ್‌ಕೇಸ್ ಒಯ್ಯುವುದಕ್ಕಾಗಿಯೇ ಪ್ರತಿವರ್ಷ ಇವರು ಬಳ್ಳಾರಿಗೆ ಭೇಟಿ ನೀಡುತ್ತಿದ್ದರು ಎಂಬ ಆರೋಪಗಳಿದ್ದವು. ಪೂರಕವಾಗಿ, ಸುಶ್ಮಾ ಸ್ವರಾಜ್ ಅವರನ್ನು ರೆಡ್ಡಿ ಸಹೋದರರು ‘ಅಮ್ಮ’ ಎಂದು ಕರೆಯುತ್ತಿದ್ದರು. ಜನಾರ್ದನ ರೆಡ್ಡಿ ಜೈಲು ಸೇರಿದಾಗ, ಇವರ ತಲೆಯ ಮೇಲೆ ಕೈಯಿಟ್ಟು ಸುಶ್ಮಾ ಆಶೀರ್ವದಿಸುತ್ತಿರುವ ಭಾವಚಿತ್ರ ಮಾಧ್ಯಮಗಳಲ್ಲಿ ರಾರಾಜಿಸತೊಡಗಿದ್ದವು.

ಸುಶ್ಮಾ ಸ್ವರಾಜ್ ಅವರಿಗೆ ಕರ್ನಾಟಕದ ಜೊತೆಗಿರುವ ನಂಟು ‘ಬಳ್ಳಾರಿ ಚುನಾವಣೆ’ ಮಾತ್ರವಲ್ಲ. ಬಳ್ಳಾರಿಯನ್ನು ದೋಚಿದ ಹಣದ ಪಾಲಲ್ಲೂ ಅವರಿಗೆ ನಂಟಿತ್ತು ಎನ್ನುವುದು ಕಹಿ ಸತ್ಯ. ಆ ಮೂಲಕ ಬಿಜೆಪಿಯ ತಿಜೋರಿಯನ್ನು ತುಂಬಿದ ‘ಹೆಗ್ಗಳಿಕೆ’ಯನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ. ಸಂಘಪರಿವಾರದ ಸಿದ್ಧಾಂತದ ತಳಹದಿಯಲ್ಲಿ ಬೆಳೆದು ಬಂದವರಾದರೂ, ಉಮಾಭಾರತಿಯಂತೆ, ಅಪ್ರಬುದ್ಧರಾಗಿ ವೇದಿಕೆಗಳಲ್ಲಿ ಎಂದೂ ಮಾತನಾಡಿದವರಲ್ಲ. ಕೋಮು ಹಿಂಸೆಯನ್ನೇ ತನ್ನ ರಾಜಕೀಯ ವ್ಯಕ್ತಿತ್ವವನ್ನಾಗಿಸಿಕೊಂಡು ಬೆಳೆದವರಲ್ಲ. ಬಹುಶಃ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದ ಅನುಭವ ಈ ನಿಟ್ಟಿನಲ್ಲಿ ಅವರಿಗೆ ನೆರವಾಗಿರಬಹುದು. ಪ್ರಖರ ವಾಗ್ಮಿಯಾಗಿದ್ದ ಸುಶ್ಮಾ ಅವರನ್ನು ‘ಗಯ್ಯಾಳಿ’ ಎಂದು ಕರೆದವರೂ ಇದ್ದಾರೆ. ಆದರೆ ಸಚಿವ ಸ್ಥಾನದಲ್ಲಿ ಕುಳಿತಿದ್ದಾಗ ಅದನ್ನು ಅತ್ಯಂತ ಘನತೆಯಿಂದ ನಿರ್ವಹಿಸಲು ಪ್ರಯತ್ನಿಸಿದ್ದಾರೆ. ತನ್ನ ಮಿತಿಯಲ್ಲಿ ರಾಜಧರ್ಮವನ್ನು ಪಾಲಿಸಿದ್ದಾರೆ. ಅಧಿಕಾರದಲ್ಲಿದ್ದಾಗ ತಳೆಯಬೇಕಾಗಿರುವ ವಿವೇಕ, ತಾಳ್ಮೆ, ಪ್ರಬುದ್ಧತೆಯ ಅರಿವು ಅವರಿಗೆ ಚೆನ್ನಾಗಿಯೇ ಇತ್ತು. ಈ ಕಾರಣದಿಂದಲೇ, ಸುಶ್ಮಾ ಅವರಿಗೆ ಬಿಜೆಪಿಯೊಳಗೆ ಮಾತ್ರವಲ್ಲ, ಬಿಜೆಪಿಯ ಹೊರಗೂ ದೊಡ್ಡ ಸಂಖ್ಯೆಯ ಆತ್ಮೀಯ ಬಳಗವಿತ್ತು. ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ‘ವಿದೇಶಾಂಗ ಸಚಿವ’ ಸ್ಥಾನವನ್ನು ನಿರ್ವಹಿಸಿದರಾದರೂ, ಅದಾಗಲೇ ತಾನು ರಾಜಕೀಯವಾಗಿ ಅಪ್ರಸ್ತುತವಾಗಿರುವುದನ್ನು ಕಂಡುಕೊಂಡಿದ್ದರು.

‘ವಿದೇಶಾಂಗ ನೀತಿ’ ಎನ್ನುವುದೇ ಇಲ್ಲದ ಸರಕಾರವೊಂದಕ್ಕೆ ತಾನು ‘ವಿದೇಶಾಂಗ ಸಚಿವ’ಳಾಗಿದ್ದೇನೆ ಎನ್ನುವುದು ಅವರಿಗೆ ಸ್ಪಷ್ಟವಾಗಿತ್ತು. ಮೋದಿ ಮತ್ತು ಶಾ ಅವರ ರಾಜಕೀಯ ನಡೆಗಳನ್ನ್ನು ಅವರು ಸೂಕ್ಷ್ಮವಾಗಿ ಗಮನಿಸಿದವರು. ವಿಶೇಷವೆಂದರೆ, ನರೇಂದ್ರ ಮೋದಿಯವರ ವಾಚಾಳಿತನದ ರಾಜಕೀಯದ ಮುಂದೆ ಸುಶ್ಮಾ ಸ್ವರಾಜ್ ಅವರ ವೌನ ಹಲವು ಅರ್ಥಗಳನ್ನು, ಧ್ವನಿಗಳನ್ನು ಸ್ಫುರಿಸುತ್ತಿತ್ತು. ವಿದೇಶಾಂಗ ಸಚಿವರಾಗಿದ್ದರೂ, ತಮ್ಮ ಸ್ಥಾನದಿಂದ ಅವರು ಹೇಳಿಕೆಗಳನ್ನು ನೀಡಿದ್ದೇ ಇಲ್ಲ. ಅವರ ಅಧಿಕಾರಾವಧಿಯ ಕೊನೆಯ ಐದು ವರ್ಷಗಳನ್ನು ಮಾನವೀಯ ಸ್ಪಂದನೆಗಳಿಗೆ ಸೀಮಿತಗೊಳಿಸಿದರು. ರಾಯಭಾರಿ ಕಚೇರಿ ನಿಭಾಯಿಸಬಹುದಾದ ಕೆಲಸಗಳನ್ನು ವಿದೇಶಾಂಗ ಸಚಿವೆಯಾಗಿ ಸುಶ್ಮಾ ಮಹತ್ವ ನೀಡಿ ನಿರ್ವಹಿಸಿದರು.

ನೆರೆಯ ಪಾಕಿಸ್ತಾನದಲ್ಲಿ ಸಿಲುಕಿಕೊಂಡ ನಾಗರಿಕರಿಗೆ ನೆರವು, ಪಾಸ್‌ಪೋರ್ಟ್ ಸಮಸ್ಯೆಗಳನ್ನು ಎದುರಿಸುತ್ತಿದ್ದವರಿಗೆ ಸ್ಪಂದನೆ ಇಂತಹ ಸಣ್ಣ ಪುಟ್ಟ ಕೆಲಸಗಳನ್ನೇ ಮಾಡುತ್ತಾ ಎಲ್ಲರ ಪ್ರೀತಿಯನ್ನು ಗಳಿಸಿದರು. ಟ್ವಿಟರ್‌ಗಳಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರೂ ಅದಕ್ಕೆ ಪ್ರತಿಕ್ರಿಯಿಸುವ ಹೃದಯ ವೈಶ್ಯಾಲ್ಯತೆಯನ್ನು ತೋರಿಸಿದರು. ಬಹುಶಃ ಮೋದಿಯ ಸರಕಾರದೊಳಗೆ ಇದ್ದೂ, ಇಲ್ಲದವರಂತೆ ತಮ್ಮನ್ನು ತೊಡಗಿಸಿಕೊಂಡರು. ತನ್ನ ಆರೋಗ್ಯ ಮಾತ್ರ ಅಲ್ಲ, ದೇಶದ ರಾಜಕೀಯ ಆರೋಗ್ಯವೇ ಸಂಪೂರ್ಣ ಕೆಟ್ಟಿರುವುದು ಅವರಿಗೆ ಸ್ಪಷ್ಟವಾದ ಕಾರಣದಿಂದಲೇ ಇರಬೇಕು ಕಳೆದ ಲೋಕಸಭಾ ಚುನಾವಣೆಯಿಂದ ದೂರ ಉಳಿದರು. ಅಷ್ಟೇ ಅಲ್ಲ, ಯಾವುದೇ ರಾಜಕೀಯ ಹುದ್ದೆಗಳನ್ನು ಸ್ವೀಕರಿಸಲು ನಿರಾಕರಿಸಿದರು. ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಗಿರುವುದನ್ನು ಸುಶ್ಮಾ ಸ್ವಾಗತಿಸಿದ್ದಾರೇನೋ ನಿಜ. ಆದರೆ ಇದರ ಪರಿಣಾಮಗಳೇನು ಎನ್ನುವುದನ್ನು ಅರಿತುಕೊಂಡವರಂತೆ, ‘ಅವುಗಳನ್ನು ನೋಡಲು ನಾನಿರಲಾರೆ’ ಎಂದು ಇದೀಗ ಅವರು ತಮ್ಮ ವಿದಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News