ಹೊಟ್ಟೆಯ ಕಾಯಿಲೆಗಳ 5 ಎಚ್ಚರಿಕೆಯ ಸಂಕೇತಗಳ ಬಗ್ಗೆ ತಿಳಿದುಕೊಳ್ಳಿ

Update: 2019-08-08 14:50 GMT

ಬೆಳಿಗ್ಗೆ ಮಲವಿಸರ್ಜನೆಯ ಕಾರ್ಯ ಸುಸೂತ್ರವಾಗಿ ಆಗದಿದ್ದರೆ ಮತ್ತು ಹೊಟ್ಟೆ ನೋಯುತ್ತಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಮಲಬದ್ಧತೆಯ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಆದರೆ ಹಲವೊಮ್ಮೆ ಈ ಲಕ್ಷಣಗಳು ಇತರ ಗಂಭೀರ ಉದರದ ಕಾಯಿಲೆಗಳನ್ನೂ ಸೂಚಿಸುತ್ತವೆ.

ಮಲವಿಸರ್ಜನೆಯಲ್ಲಿ ತೊಂದರೆ ಮತ್ತು ಹೊಟ್ಟೆನೋವು ಅಪರೂಪಕ್ಕೆ ಕಾಣಿಸಿಕೊಂಡರೆ ಅದಕ್ಕೆ ನೀವು ಸೇವಿಸಿರುವ ಆಹಾರ ಕಾರಣವಾಗಿರಬಹುದು. ಆದರೆ ಇದು ದಿನನಿತ್ಯದ ಕರ್ಮವಾದರೆ ಅದು ಇತರ ಕಾಯಿಲೆಗಳ ಲಕ್ಷಣವಾಗಿರಬಹುದು.

ಮಲವಿಸರ್ಜನೆಯ ಸಂದರ್ಭದಲ್ಲಿ ಅತಿಯಾದ ಒತ್ತಡವನ್ನು ಹಾಕಬೇಕಾಗುತ್ತಿದ್ದರೆ,ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತಿದ್ದರೆ,ದಿನಕ್ಕೆ ಹಲವಾರು ಬಾರಿ ಟಾಯ್ಲೆಟ್‌ಗೆ ಹೋಗುತ್ತಿದ್ದರೆ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಮಲಬದ್ಧತೆ

 ಮಲಬದ್ಧತೆಯಿದ್ದಾಗ ವ್ಯಕ್ತಿಯು ಶೌಚಕ್ಕೆ ತೆರಳಿದಾಗ ಹೊಟ್ಟೆಯು ಸಂಪೂರ್ಣವಾಗಿ ಸ್ವಚ್ಛವಾಗುವುದಿಲ್ಲ. ಮಲಬದ್ಧತೆಯು ಕರುಳಿನ ಅನಿಯಮಿತ ಚಲನವಲನಗಳಿಗೆ ಕಾರಣವಾಗುತ್ತದೆ ಮತ್ತು ವ್ಯಕ್ತಿಗೆ ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲಿ ಕುಳಿತಿದ್ದರೂ ಪೂರ್ತಿ ಮಲವಿಸರ್ಜನೆಯಾದ ತೃಪ್ತಿ ಸಿಗುವುದಿಲ್ಲ. ಮಲಬದ್ಧತೆಯು ದೀರ್ಘಕಾಲದವರೆಗೆ ಮುಂದುವರಿದರೆ ವ್ಯಕ್ತಿಯು ಹಲವಾರು ಗಂಭೀರ ಉದರ ರೋಗಗಳಿಂದ ಬಳಲುತ್ತಿರಬಹುದು. ಆದ್ದರಿಂದ ಈ ಸ್ಥಿತಿಯನ್ನು ಕಡೆಗಣಿಸಬಾರದು. ಮಲಬದ್ಧತೆಯ ಪ್ರಕರಣಗಳಲ್ಲಿ ಹೆಚ್ಚು ನಾರು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು. ನಾರು ಮಲವನ್ನು ಮೃದುವಾಗಿಸುತ್ತದೆ ಮತ್ತು ಕರುಳಿನ ಚಲನೆಯಲ್ಲಿ ಸಮಸ್ಯೆಗಳಿರುವುದಿಲ್ಲ.

► ಜೀರ್ಣಾಂಗ ಕ್ರಿಯೆಯಲ್ಲಿ ಅಸಮತೋಲನ

ತೀವ್ರ ಹೊಟ್ಟೆ ನೋವು ಅಥವಾ ಕರುಳಿನ ಚಲನೆಯ ಸಂದರ್ಭದಲ್ಲಿ ಚುಚ್ಚಿದಂತಹ ನೋವು,ಆಗಾಗ್ಗೆ ಅಪಾನವಾಯು ಬಿಡುಗಡೆ,ಹೊಟ್ಟೆಯುಬ್ಬರ,ದಿನಕ್ಕೆ ಒಮ್ಮೆಯೂ ಮಲವಿಸರ್ಜನೆಯಾಗದಿರುವುದು ಇತ್ಯಾದಿಗಳೆಲ್ಲ ಇರಿಟೇಬಲ್ ಬೊವೆಲ್ ಸಿಂಡ್ರೋಮ್(ಐಬಿಎಸ್) ಅನ್ನು ಸೂಚಿಸುತ್ತವೆ. ಇದನ್ನು ಸರಳವಾಗಿ ಜೀರ್ಣಾಂಗ ಕ್ರಿಯೆಯಲ್ಲಿ ಅಸಮತೋಲನ ಅಥವಾ ಅಸಾಧಾರಣ ಕರುಳಿನ ಕ್ರಿಯೆಯಿಂದ ಉಂಟಾಗುವ ಸಮಸ್ಯೆ ಎಂದು ಹೇಳಬಹುದು. ಈ ಸಮಸ್ಯೆಯಿದ್ದಾಗ ವ್ಯಕ್ತಿಯು ಮಲವಿಸರ್ಜನೆ ಸಂದರ್ಭ ಹೆಚ್ಚಿನ ಒತ್ತಡವನ್ನು ಹಾಕಬೇಕಾಗುತ್ತದೆ ಮತ್ತು ಇದರಿಂದಾಗಿ ಹೊಟ್ಟೆಯಲ್ಲಿ ತೀವ್ರ ಸೆಳೆತ ಉಂಟಾಗುತ್ತದೆ. ಮಲಬದ್ಧತೆಯ ಮನೆ ಮದ್ದುಗಳು ಪರಿಹಾರ ನೀಡದಿದ್ದರೆ ವೈದ್ಯರ ಬಳಿ ತೆರಳುವುದು ಅಗತ್ಯವಾಗುತ್ತದೆ.

► ಮೂಲವ್ಯಾಧಿ

ಕೆಲವೊಮ್ಮೆ ಮೂಲವ್ಯಾಧಿಯಿಂದಾಗಿ ವ್ಯಕ್ತಿಯು ಮಲವಿಸರ್ಜನೆ ಸಂದರ್ಭದಲ್ಲಿ ತೀವ್ರ ನೋವನ್ನು ಅನುಭವಿಸುತ್ತಾನೆ ಮತ್ತು ಹೊಟ್ಟೆಯು ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಗುದದ್ವಾರಲ್ಲಿ ದೊಡ್ಡ ದದ್ದು ಅಥವಾ ಗಡ್ಡೆಗಳು ಕಾಣಿಸಿಕೊಂಡಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಮೂಲವ್ಯಾಧಿಯಿದ್ದಾಗ ಮಲದಲ್ಲಿ ರಕ್ತ ಹೋಗುವ ಸಮಸ್ಯೆಯೂ ಇರುತ್ತದೆ.

► ಕರುಳಿನ ಕ್ಯಾನ್ಸರ್

ಉದರದ ಕ್ಯಾನ್ಸರ್ ಗಂಭೀರ ಮತ್ತು ಅಪಾಯಕಾರಿ ರೋಗವಾಗಿದೆ. ಆದರೆ ಆರಂಭಿಕ ಹಂತದ ಲಕ್ಷಣಗಳು ಅತ್ಯಂತ ಸಾಮಾನ್ಯವಾಗಿವೆ. ಸರಿಯಾಗಿ ಮಲ ವಿಸರ್ಜನೆಯಾಗದಿರುವುದು,ಮಲದಲ್ಲಿ ರಕ್ತ,ಆಗಾಗ್ಗೆ ಹೊಟ್ಟೆ ನೋವು, ಮಲವಿಸರ್ಜನೆ ವೇಳೆ ಹೊಟ್ಟೆಯಲ್ಲಿ ಸೆಳೆತ ಇತ್ಯಾದಿಗಳು ಈ ಲಕ್ಷಣಗಳಾಗಿವೆ.

► ಉರಿಯೂತವನ್ನುಂಟು ಮಾಡುವ ರೋಗಗಳು

  ಇಂತಹ ರೋಗಿಗಳಲ್ಲಿ ಕರುಳಿನಲ್ಲಿ ಸಣ್ಣ ಗುಂಡಿಗಳು ಅಥವಾ ಗುಳ್ಳೆಗಳುಂಟಾಗುತ್ತವೆ ಮತ್ತು ಇದರಿಂದಾಗಿ ತೀವ್ರ ನೋವನ್ನು ಅನುಭವಿಸಬೇಕಾಗುತ್ತದೆ. ಈ ರೋಗವಿದ್ದಾಗ ಸರಿಯಾಗಿ ಮಲವಿಸರ್ಜನೆಯಾಗುವುದಿಲ್ಲ ಮತ್ತು ಮಲವಿಸರ್ಜನೆ ಸಂದರ್ಭ ರಕ್ತಸ್ರಾವವೂ ಉಂಟಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News