ಎಲ್ಲ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ: ಭಾರತಕ್ಕೆ ಅಮೆರಿಕ ಸಂಸದರ ಕರೆ

Update: 2019-08-08 15:59 GMT

ವಾಶಿಂಗ್ಟನ್, ಆ. 8: ‘ತನ್ನ ಎಲ್ಲ ನಾಗರಿಕರ’ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವಂತೆ ಅಮೆರಿಕದ ಇಬ್ಬರು ಪ್ರಭಾವಿ ಸಂಸದರು ಬುಧವಾರ ಭಾರತಕ್ಕೆ ಕರೆ ನೀಡಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿ ಉಂಟಾಗಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.

ಅದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಶಾಸನ ಸಭೆಗೆ ಮಾಡಲಾಗಿರುವ ಬದಲಾವಣೆಯನ್ನು ತಾನು ನಿಕಟವಾಗಿ ಗಮನಿಸುತ್ತಿದ್ದೇನೆ ಹಾಗೂ ಅಲ್ಲಿ ಮಾಡಲಾಗುತ್ತಿರುವ ಬಂಧನಗಳಿಂದ ಕಳವಳಗೊಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತ ಪುನರುಚ್ಚರಿಸಿದೆ.

‘‘ಶಾಸಕಾಂಗದ ಸ್ವಾತಂತ್ರ್ಯ, ಮಾಹಿತಿ ಪಡೆಯುವ ಸ್ವಾತಂತ್ರ ಹಾಗೂ ಸಮಾನ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಉತ್ತೇಜಿಸುವುದು ಸೇರಿದಂತೆ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುವ ಅವಕಾಶವೊಂದು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯಾಗಿ ಭಾರತಕ್ಕೆ ಈಗ ಎದುರಾಗಿದೆ’’ ಎಂದು ಹೌಸ್ ವಿದೇಶ ವ್ಯವಹಾರಗಳ ಸಮಿತಿ ಅಧ್ಯಕ್ಷ ಎಲಿಯಟ್ ಎಂಗೆಲ್ ಮತ್ತು ಸೆನೆಟ್ ವಿದೇಶ ಸಂಬಂಧಗಳ ಸಮಿತಿ ಅಧ್ಯಕ್ಷ ರಾಬರ್ಟ್ ಮೆನೆಂಡೇಝ್ ಕಾಶ್ಮೀರ ಕುರಿತ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇವರಿಬ್ಬರೂ ಡೆಮಾಕ್ರಟಿಕ್ ಪಕ್ಷದವರಾಗಿದ್ದು, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಹಿಂದಿನಿಂದಲೂ ಒತ್ತು ನೀಡುತ್ತಾ ಬಂದವರಾಗಿದ್ದಾರೆ.

► ಪಾಕಿಸ್ತಾನಕ್ಕೂ ಎಚ್ಚರಿಕೆ

ಭಾರತಕ್ಕೆ ಕಿವಿಮಾತು ಹೇಳಿರುವಂತೆಯೇ, ಈ ಇಬ್ಬರು ಸಂಸದರು ಪಾಕಿಸ್ತಾನಕ್ಕೂ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ಭಾರತಕ್ಕೆ ನುಗ್ಗುವುದಕ್ಕೆ ಬೆಂಬಲ ನೀಡುವುದು ಸೇರಿದಂತೆ ಯಾವುದೇ ಪ್ರತೀಕಾರಾತ್ಮಕ ಕ್ರಮಗಳಿಂದ ದೂರವಿರುವಂತೆ ಹಾಗೂ ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧ ನೈಜ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News