‘ಯುಎಪಿಎ’ಗೆ ತಿದ್ದುಪಡಿ ಬೇಕಿತ್ತೇ?

Update: 2019-08-08 18:32 GMT

ಭಾಗ-1

ವ್ಯಕ್ತಿಯೊಬ್ಬನ ವಿರುದ್ಧ ವಿಚಾರಣೆ ನಡೆಸಿ ಯಾವುದೇ ಪುರಾವೆ ಇಲ್ಲದಾಗಲೂ ಆತನಿಗೆ ಭಯೋತ್ಪಾದಕನೆಂಬ ಹಣೆಪಟ್ಟಿ ಅಂಟಿಸಿ ಆತನನ್ನು ಶಿಕ್ಷಿಸುವ ಅಧಿಕಾರವನ್ನು ಈ ತಿದ್ದುಪಡಿ ಕೇಂದ್ರ ಸರಕಾರಕ್ಕೆ ನೀಡುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಇದು ಶಿಕ್ಷೆಯ ಒಂದು ಹೆಚ್ಚುವರಿ ಕಾನೂನಿನ ರೂಪವಾಗಿದೆ.

ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸದೆ ಭಯೋತ್ಪಾದಕನೆಂದು ಘೋಷಿಸುವ ಅಧಿಕಾರವನ್ನು ಸರಕಾರಿ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ನೀಡಬಹುದೇ?
ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಅನ್‌ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್) ಅಥವಾ ಯುಎಪಿಎಗೆ ತಿದ್ದುಪಡಿ ತರುವ ಮೂಲಕ ನರೇಂದ್ರ ಮೋದಿ ಸರಕಾರ ಅದನ್ನೇ ಮಾಡಲು ಹೊರಟಿದೆ. ಈ ತಿದ್ದುಪಡಿಗಳು ಹೆಚ್ಚಿನ ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಅಂಗೀಕೃತವಾಗಿ ಈಗ ರಾಜ್ಯಸಭೆಯಲ್ಲೂ ಅಂಗೀಕೃತವಾಗಿವೆ.
ಯುಎಪಿಎಗೆ ತಿದ್ದುಪಡಿ ತರುವ ಮಸೂದೆಯು ಒಂದು ಸಂಕ್ಷಿಪ್ತ ಚರ್ಚೆಯ ಬಳಿಕ ಅಂಗೀಕೃತವಾಗಿದೆ. ಯುಎಪಿಎ ಮೊದಲ ಬಾರಿಗೆ 1967ರಲ್ಲಿ ಅಂಗೀಕೃತವಾಗಿತ್ತು. ಅದರ ಮೂಲ ರೂಪದಲ್ಲಿ ಅದು ಯಾವುದೇ ಸಂಘಟನೆಯನ್ನು ಕಾನೂನು ವಿರೋಧಿ/ಅಕ್ರಮ ಎಂದು ಘೋಷಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿತ್ತು. ಅಲ್ಲದೆ ಅದು ಕಾನೂನು ವಿರೋಧಿ ಚಟುವಟಿಕೆಗಳು ಎಂದರೆ ಏನು ಎಂದು ಕೂಡ ವ್ಯಾಖ್ಯಾನಿಸಿತ್ತು. 2004ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಭಯೋತ್ಪಾದನೆಯನ್ನು ಒಂದು ಅಪರಾಧವೆಂದು ವ್ಯಾಖ್ಯಾನಿಸಿ, ಸಂಘಟನೆಗಳನ್ನು ಭಯೋತ್ಪಾದಕವೆಂದು ಘೋಷಿಸಿ ಅವುಗಳನ್ನು ನಿಷೇಧಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿತ್ತು ಅಲ್ಲದೆ ಪೊಲೀಸರಿಗೆ ವಿಚಾರಣೆ ನಡೆಸಲು ಇನ್ನಷ್ಟು ಅಧಿಕಾರಗಳನ್ನು ನೀಡಿತ್ತು ಹಾಗೂ ಬಂಧಿತ ವ್ಯಕ್ತಿ ಅಮಾಯಕನೆಂದು ನ್ಯಾಯಾಲಯಕ್ಕೆ ಮನವರಿಕೆ ಆದಲ್ಲಿ ಮಾತ್ರ ಆತನಿಗೆ ಜಾಮೀನು ನೀಡಲು ಸಾಧ್ಯವಾಗುವಂತೆ ಮಾಡಿತು. ಅಂದರೆ ಬಂಧಿತ ವ್ಯಕ್ತಿಗೆ ಸುಲಭವಾಗಿ ಜಾಮೀನು ಸಿಗದಂತೆ ನೋಡಿಕೊಳ್ಳಲಾಯಿತು.
ಈಗ ಬಂದಿರುವ ಹೊಸ ಮಸೂದೆಯು ಕಾನೂನಿಗೆ ಎರಡು ಮುಖ್ಯ ಅಂಶಗಳನ್ನು ಸೇರಿಸಿದೆ. ಮೊದಲನೆಯದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯದ ಪೊಲೀಸರ ಅಧಿಕಾರ ವ್ಯಾಪ್ತಿಯೊಳಗೆ ಬರುವ ಮೊಕದ್ದಮೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಷ್ಟ್ರೀಯ ವಿಚಾರಣಾದಳಕ್ಕೆ (ಎನ್‌ಐಎ) ಅದು ಅವಕಾಶ ಮಾಡಿಕೊಡುತ್ತದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಆ ಮೂಲಕ ಕೇಂದ್ರ ಸರಕಾರದ ಕೈಯಲ್ಲಿ ಇನ್ನಷ್ಟು ಅಧಿಕಾರವನ್ನು ಕೇಂದ್ರೀಕರಿಸುತ್ತದೆ ಆದರೆ ಭಾರತದ ಪ್ರಜಾಪ್ರಭುತ್ವಕ್ಕೆ ಮಾರಣಾಂತಿಕ ಹೊಡೆತ ನೀಡಿರುವ ಅಂಶ ಎರಡನೆಯದು: ಈಗ ಮಾಡಲಾಗಿರುವ ತಿದ್ದುಪಡಿಗಳು ಕೇವಲ ಸಂಘಟನೆಗಳನ್ನಷ್ಟೇ ಅಲ್ಲ ವ್ಯಕ್ತಿಗಳನ್ನು ಕೂಡ ಭಯೋತ್ಪಾದಕರೆಂದು ಘೋಷಿಸುವ ಹಕ್ಕನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ.
ಭಯೋತ್ಪಾದಕರೆಂದು ಘೋಷಿಸಲ್ಪಡುವ ಕುರಿತು ಭಯ ಪಡಬೇಕಾದವರು ಭಯೋತ್ಪಾದಕರು ಮಾತ್ರ, ಇನ್ಯಾರೂ ಅಲ್ಲ ಎಂದು ವಾದಿಸಲು ಅಮಿತ್ ಶಾ ಅವರು ಲೋಕಸಭೆಯಲ್ಲಿ ತನ್ನ ತೀರ್ಮಾನವನ್ನು, ಉಪಸಂಹಾರವನ್ನು ಸಮರ್ಥಿಸುವ ತರ್ಕವನ್ನು ಬಳಸಿದರು.
‘‘ವ್ಯಕ್ತಿಯೊಬ್ಬ ಅಥವಾ ಒಬ್ಬಳು ಭಯೋತ್ಪಾದಕ ಕೆಲಸದಲ್ಲಿ ತೊಡಗಿದ್ದರೆ ಅಥವಾ ಭಯೋತ್ಪಾದನಾ ಕೃತ್ಯದಲ್ಲಿ ಭಾಗವಹಿಸಿದರೆ ಅಂಥವರನ್ನು ಓರ್ವ ಭಯೋತ್ಪಾದಕ/ಕಿ ಎಂದು ಘೋಷಿಸಲು ಸರಕಾರಕ್ಕೆ ಅಧಿಕಾರ ನೀಡುವ ಅವಕಾಶ ಯುಎಪಿಎದಲ್ಲಿದೆ. ಈ ಬಗ್ಗೆ ಎರಡು ಅಭಿಪ್ರಾಯಗಳಿರಲು ಸಾಧ್ಯವೇ? ವ್ಯಕ್ತಿಯೊಬ್ಬ ಒಂದು ಭಯೋತ್ಪಾದಕ ಕೃತ್ಯ ಎಸಗಿದರೆ ಅಥವಾ ಅದರಲ್ಲಿ ಭಾಗವಹಿಸಿದರೆ, ಆತನನ್ನು ಓರ್ವ ಭಯೋತ್ಪಾದಕ ಎಂದು ಘೋಷಿಸಬಾರದೇ?
ಹಾಗೆಯೇ ಯಾವ ವ್ಯಕ್ತಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಲು ಅಥವಾ ಸಿದ್ಧತೆ ನಡೆಸಲು ನೆರವಾಗುತ್ತಾನೋ, ಆತ ಕೂಡ ಭಯೋತ್ಪಾದಕನೆಂದೇ ಘೋಷಿಸಲ್ಪಡಬೇಕು.
ಯಾವ ವ್ಯಕ್ತಿ ಭಯೋತ್ಪಾದನೆಗೆ ಹಣ ಸಂಗ್ರಹಿಸಿ ಸಂಪನ್ಮೂಲ ಒದಗಿಸುತ್ತಾನೋ, ಆತನನ್ನು ಕೂಡ ಭಯೋತ್ಪಾದಕನೆಂದು ಘೋಷಿಸಬೇಕೆಂದು ನಾನು ಹೇಳುತ್ತೇನೆ.
ಇನ್ನು ಯುವಜನತೆಯ ಮನಸ್ಸಿನಲ್ಲಿ ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನಾ ಸಿದ್ಧಾಂತವನ್ನು ನೆಡಲು ಪ್ರಯತ್ನಿಸುವವರು ಕೆಲವರಿದ್ದಾರೆ. ಸರ್, ಭಯೋತ್ಪಾದನೆಯ ಉದಯಕ್ಕೆ ಕೋವಿಗಳು ಕಾರಣವಾಗುವುದಲ್ಲ; ಭಯೋತ್ಪಾದನೆಯ ಮೂಲ ಬೇರು ಇರುವುದು ಅದನ್ನು ಹರಡಲು ಮಾಡುವ ಪ್ರಚಾರದಲ್ಲಿ, ಕೊಡಲಾಗುವ ಸನ್ನಿಯಲ್ಲಿ. ಅಂತಹ ಎಲ್ಲ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಿದಲ್ಲಿ ಸಂಸತ್ತಿನ ಯಾವುದೇ ಸದಸ್ಯರು ಅದನ್ನು ವಿರೋಧಿಸುತ್ತಾರೆಂದು ನನಗೆ ಅನಿಸುವುದಿಲ್ಲ.’’
ಶಾ ಅವರ ತರ್ಕ, ವಾದ ಸಂಪೂರ್ಣವಾಗಿ ಸುಳ್ಳು ಮತ್ತು ಎರಡು ಸರಳ ಪ್ರಶ್ನೆಗಳನ್ನು ಎತ್ತಿದಾಗ ಈ ವಾದ ಮುರಿದು ಬೀಳುತ್ತದೆ. 1. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವುದರ ಉದ್ದೇಶವೇನು? 2. ‘ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನೆ ಸಿದ್ಧಾಂತ’ ಎಂದರೇನೆಂದು ವ್ಯಾಖ್ಯಾನಿಸುವವರು ಯಾರು ಮತ್ತು ಯುವ ಜನತೆಯ ಮನಸ್ಸಿನಲ್ಲಿ ಇವುಗಳನ್ನು ನೆಡುವ, ಸ್ಥಾಪಿಸುವ ಚಟುವಟಿಕೆಗಳು ಯಾವುವು?
 ಯುಎಪಿಎ ಯಾವುದನ್ನು ಭಯೋತ್ಪಾದನಾ ಚಟುವಟಿಕೆ ಎಂದು ವ್ಯಾಖ್ಯಾನಿಸುತ್ತದೋ, ಅದರಲ್ಲಿ ತೊಡಗುವವನನ್ನು ಬಂಧಿಸಿ ವಿಚಾರಣೆಗೊಳಪಡಿಸಲು, ಶಿಕ್ಷಿಸಲು ಈಗ ಇರುವ ಯುಎಪಿಎಯ ಕಾಯ್ದೆಯಲ್ಲಿಯೇ ಸರಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ಸಂಸತ್ತಿಗೆ ಜ್ಞಾಪಿಸಲು ಶಾರವರು ಮರೆತರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈಗಾಗಲೇ ಇರುವ ಕಾಯ್ದೆಯ ನಾಲ್ಕನೇ ಅಧ್ಯಾಯದ ಅಡಿಯಲ್ಲಿ ಪೊಲೀಸರಿಗೆ ಆತನನ್ನು ಬಂಧಿಸುವ ಕಾನೂನು ರೀತ್ಯ ಸಂಪೂರ್ಣ ಅಧಿಕಾರ ಇದೆ. ಆತನ ಮೇಲೆ ಹೊರಿಸಿದ ಆಪಾದನೆಯನ್ನು ಸಮರ್ಥಿಸಲು ಅವರ ಬಳಿ ಪ್ರಬಲ ಪುರಾವೆ ಇದೆ ಎಂದಾದಲ್ಲಿ ವಿಚಾರಣಾ ನ್ಯಾಯಾಲಯವು ಆತನ ವಿಚಾರಣೆ ನಡೆಸಿ ಖಂಡಿತವಾಗಿಯೂ ಆತನನ್ನು ಜೈಲಿಗೆ ಕಳಿಸುತ್ತದೆ.
ಹಾಗಾದರೆ ಶಾರವರು ಯಾಕಾಗಿ ಹೊಸ ತಿದ್ದುಪಡಿಗಳನ್ನು, ಉಪಕ್ರಮವನ್ನು ತರುತ್ತಿದ್ದಾರೆ? ಅದಕ್ಕೆ ಉತ್ತರ (ಈ ಉತ್ತರ ಎಲ್ಲರನ್ನೂ ಚಿಂತೆಗೀಡು ಮಾಡುವಂತಹ ಉತ್ತರ) ಏನೆಂದರೆ ವ್ಯಕ್ತಿಯೊಬ್ಬನ ವಿರುದ್ಧ ವಿಚಾರಣೆ ನಡೆಸಿ ಯಾವುದೇ ಪುರಾವೆ ಇಲ್ಲದಾಗಲೂ ಆತನಿಗೆ ಭಯೋತ್ಪಾದಕನೆಂಬ ಹಣೆಪಟ್ಟಿ ಅಂಟಿಸಿ ಆತನನ್ನು ಶಿಕ್ಷಿಸುವ ಅಧಿಕಾರವನ್ನು ಈ ತಿದ್ದುಪಡಿ ಕೇಂದ್ರ ಸರಕಾರಕ್ಕೆ ನೀಡುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಇದು ಶಿಕ್ಷೆಯ ಒಂದು ಹೆಚ್ಚುವರಿ ಕಾನೂನಿನ (ಎಕ್‌ಸ್ಟ್ರಾ-ಲೀಗಲ್) ರೂಪವಾಗಿದೆ.
(ಮುಂದುವರಿಯುವುದು)
ಕೃಪೆ: thewire.in

Writer - ಸಿದ್ಧಾರ್ಥ ವರದರಾಜನ್

contributor

Editor - ಸಿದ್ಧಾರ್ಥ ವರದರಾಜನ್

contributor

Similar News

ಜಗದಗಲ
ಜಗ ದಗಲ