ದಕ್ಷಿಣ ಭಾರತದಲ್ಲಿ ಪ್ರವಾಹ ಭೀತಿ: ಮಳೆಗೆ 20 ಮಂದಿ ಬಲಿ

Update: 2019-08-09 03:55 GMT

ತಿರುವನಂತಪುರ: ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಕಳೆದ ಕೆಲ ದಿನಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಳೆ ಸಂಬಂಧಿ ದುರಂತಗಳಲ್ಲಿ 20 ಮಂದಿ ಬಲಿಯಾಗಿದ್ದಾರೆ.

ಧಾರಾಕಾರ ಮಳೆ, ಬಲವಾದ ಗಾಳಿ ಹಾಗೂ ಭೂಕುಸಿತದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ತಮಿಳುನಾಡಿನಲ್ಲಿ ಮೂರು ಹಾಗೂ ಕೇರಳದಲ್ಲಿ ಎಂಟು ಮಂದಿ ಮಳೆ ಸಂಬಂಧಿ ದುರಂತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹಪೀಡಿತ ಪ್ರದೇಶಗಳ 44 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಕಳೆದ ಕೆಲ ದಿನಗಳಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಒಂಬತ್ತು ಮಂದಿ ಬಲಿಯಾಗಿದ್ದಾರೆ.

ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಒಂದು ದೇವಸ್ಥಾನ, ಒಂದು ಚರ್ಚ್, ಹಲವು ಮನೆಗಳು ಹಾಗೂ ಕೆಲ ವಾಹನಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡಿವೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಾಸಕ ಸಿ.ಕೆ.ಶ್ರೀಧರನ್ ಹೇಳಿದ್ದಾರೆ.

ಪಟ್ಟಣಂತಿಟ್ಟ, ಅಳಪ್ಪುರ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಯಲ್ಲಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರಿಂದಾಗಿ ಕೊಚ್ಚಿನ್‌ಗೆ ಆಗಮಿಸುವ ವಿಮಾನಗಳನ್ನು ಬೇರೆಡೆಗೆ ನಿರ್ದೇಶಿಸಲಾಗಿದೆ.

ಆಂಧ್ರ ಸಿಎಂ ವೈ.ಎಸ್.ಜಗನ್ಮೋಹನ ರೆಡ್ಡಿಯವರು ಪ್ರವಾಹಪೀಡಿತ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲ್ಲಾವರಂ ಹಾಗೂ ದೇವಿಪಟ್ಣಂ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸರ್ ಅರ್ಥೂರ್ ಕಾಟನ್ ಬ್ಯಾರೇಜ್‌ನಲ್ಲಿ ನೀರು ಅಪಾಯದ ಮಟ್ಟ ಮೀರಿದೆ.
ತಮಿಳುನಾಡಿನ ನೀಲಗಿರಿ ಹಾಗೂ ಕೊಯಮತ್ತೂರು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಸಿ ತಾಣ ನೀಲಗಿರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 82 ಸೆಂಟಿಮೀಟರ್ ಮಳೆ ಬಿದ್ದಿದ್ದು, ಇದು ಇತಿಹಾಸದಲ್ಲೇ ಗರಿಷ್ಠ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News