ಕೇರಳ, ಕರ್ನಾಟಕದಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ

Update: 2019-08-09 05:55 GMT

ಬೆಂಗಳೂರು, ಆ.9: ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಿಂದಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಪಾರಿ ಹಾನಿ, ಸಾವು ನೋವು ಸಂಭವಿಸಿದೆ. ಈ ಎರಡು ರಾಜ್ಯಗಳಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ.

ಕೇರಳದಲ್ಲಿ 23 ಮಂದಿ ಮತ್ತು ಕರ್ನಾಟಕದಲ್ಲಿ 9 ಮಂದಿ ಮಳೆ, ಪ್ರವಾಹದಿಂದಾಗಿ ಸಾವಿಗೀಡಾಗಿದ್ದಾರೆ.

ಕರ್ನಾಟಕದಿಂದ ಮೈಸೂರು ಮತ್ತು ಕೊಡಗು ಮೂಲಕ  ಕೇರಳ ರಾಜ್ಯವನ್ನು ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ.  ಕೇರಳದ ವಯನಾಡು, ಇಡುಕ್ಕಿ, ಮಲಪ್ಪುರಂ ಮತ್ತು ಕೋಝಿಕ್ಕೋಡ್ ನಲ್ಲಿ ರೆಡ್ ಆಲರ್ಟ್ ಘೋಷಿಸಲಾಗಿದೆ.ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಸಂಕಷ್ಟಕ್ಕೆ ಸಿಲುಕಿರುವ 22,165 ಮಂದಿಯನ್ನು     ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ 315 ಪರಿಹಾರ ಕೇಂದ್ರಗಳಿಗೆ ಸೇರಿಸಿದೆ.

ಕೊಚ್ಚಿ ಅಂತರ್ ರಾಷ್ಟ್ರೀಯ ನಿಲ್ದಾಣದಿಂದ ಸಂಚರಿಸುವ ಎಲ್ಲ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ, ಪರಿಹಾರ ಕಾರ್ಯಗಳ ಪ್ರಗತಿಯ  ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. 

ಕರ್ನಾಟಕದಲ್ಲಿ ಮಳೆಯ ಭಾರಿ ಹಾನಿಯನ್ನುಂಟು ಮಾಡಿದೆ.ಅರ್ಧ ಭಾಗ ನೀರಿನಿಂದಾವೃತವಾಗಿದೆ. ಉತ್ತರ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ  ಇದೀಗ ಉತ್ತರ ಕನ್ನಡ, ಶಿವಮೊಗ್ಗ , ಚಿಕ್ಕಮಗಳೂರಿಗೂ ಲಗ್ಗೆ ಇಟ್ಟಿದೆ.   ಕೊಡಗಿನಲ್ಲಿ ವ್ಯಾಪಕ ಮಳೆಯಾಗಿದೆ. ಮುಳುಗಿದ ಮನೆಯಲ್ಲಿ ಸಿಲುಕೊಂಡು ಎರಡು ದಿನ ರಾತ್ರಿ ಕಳೆದಿದ್ದ ತಾಯಿ ಮತ್ತು ಮಗನನ್ನು ರಾಫ್ಟಿಂಗ್ ಸಿಬ್ಬಂದಿ ರಕ್ಷಿಸಿದ್ದಾರೆ.

ಬಾಗಲಕೋಟೆಯಲ್ಲಿ 63 ಹಳ್ಳಿಗಳು ಜಲಾವೃತಗೊಂಡಿವೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಯಲ್ಲಾಪುರದ ಬೆಡ್ತಿ ಸೇತುವೆಗೆ ಹಾನಿಯಾಗಿದೆ. ಸೇತುವೆ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.ಮಲಪ್ರಭಾ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿದೆ. ಗೋವನಕೊಪ್ಪ, ಮಣ್ನೇರಿ, ಖ್ಯಾಡ, ಹೆಬ್ಬಳ್ಳಿ ಗ್ರಾಮಗಳಿಗೆ ನೀರು ನುಗ್ಗಿದೆ. ಹೊಲದಲ್ಲಿನ ಬೆಳೆ ನೀರಿನಲ್ಲಿ ಬೆಳೆ ಕೊಚ್ಚಿ ಹೋಗಿದೆ. ಬಾಗಲಕೋಟೆಯ ಬಾದಾಮಿ, ಹುನಗುಂದ ತಾಲೂಕಿನ ಗ್ರಾಮಗಳಿಗೆ ಮಲಪ್ರಭಾ ನದಿ  ಪ್ರವಾಹ ಹಾನಿಯನ್ನುಂಟು ಮಾಡಿದೆ. 

ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರೂಗಿ ಗ್ರಾಮದ 19 ಜನರಲ್ಲಿ 7 ಮಂದಿಯನ್ನು ಸೇನಾ ಹೆಲಿಕಾಪ್ಟರ್ ಮೂಲಕ  ರಕ್ಷಣೆ  ಮಾಡಲಾಗಿದೆ.ಉಳಿದ 12 ಜನರ ರಕ್ಷಣೆಗಾಗಿ ಕಾರ್ಯ ಮುಂದುವರಿದಿದೆ. ರೂಗಿ ಗ್ರಾಮದ ಮಲ್ಲವ್ವ, ಶಿವಪ್ಪ, ಸವಿತಾ, ರವಿ, ನಾಲವ್ವ, ಬಾಲವ್ವ  ಇವರನ್ನು ರಕ್ಷಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News