ವೈದ್ಯರ ಸಲಹೆ ಪಡೆಯದೆ ಪೋಷಕಾಂಶ ಪೂರಕಗಳನ್ನು ಸೇವಿಸದಿರಿ

Update: 2019-08-09 18:45 GMT

ವೈದ್ಯರ ಸಲಹೆ ಪಡೆಯದೆ ಔಷಧಿ ಅಂಗಡಿಗಳಿಂದ ಪೋಷ ಕಾಂಶಗಳ ಪೂರಕಗಳನ್ನು ಸೇವಿಸುವುದು ಆರೋಗ್ಯದ ಮೆಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಬಲ್ಲುದು. ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪೂರಕಗಳು ಹಾಗೂ ಅಪಧಮನಿ ಕಾಠಿಣ್ಯದ ನಡುವಿನ ನಂಟನ್ನು ಸಾಬೀತುಗೊಳಿಸಿದೆ.
 ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇವೆರಡೂ ನಮ್ಮ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ. ಇವು ಮೂಳೆಗಳನ್ನು ಆರೋಗ್ಯಯುತವಾಗಿಸಿ, ಅವುಗಳನ್ನು ಸದೃಢಗೊಳಿಸುತ್ತವೆ. ಶರೀರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿದ್ದರೆ ಮೂಳೆಗಳು ದುರ್ಬಲಗೊಳ್ಳುತ್ತವೆ ಮತ್ತು ಮೂಳೆ ಮುರಿತದ ಅಪಾಯವು ಹೆಚ್ಚುತ್ತದೆ. ಇಂತಹ ಸಂದರ್ಭಗಳಲ್ಲಿ ಡೇರಿ ಉತ್ಪನ್ನಗಳು ಮತ್ತು ಸಸ್ಯಾಧಾರಿತ ಆಹಾರ ಕ್ರಮ ಇವೆರಡು ಪೋಷಕಾಂಶಗಳ ಅತ್ಯುತ್ತಮ ಮೂಲಗಳೆಂದು ಪರಿಗಣಿಸಲಾಗಿದೆ. ಕೆಲವೊಮ್ಮೆ ಆಹಾರದ ಮೂಲಕ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ನೀಗದಿದ್ದರೆ ವೈದ್ಯರು ಇವುಗಳ ಪೂರಕಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಆದರೆ ಈಗ ತಕರಾರಿರು ವುದು ಇಲ್ಲಿಯೇ, ಏಕೆಂದರೆ ಇವೆರಡನ್ನೂ ಒಟ್ಟಿಗೆ ಸೇವಿಸಿದರೆ ಹೃದಯಾಘಾತವುಂಟಾಗುವ ಸಾಧ್ಯತೆ ಇರಬಹುದು ಎಂದು ಅಧ್ಯಯನವು ಬೆಟ್ಟು ಮಾಡಿದೆ.
‘ದಿ ಏನಲ್ಸ್ ಆಫ್ ಇಂಟರ್‌ನ್ಯಾಷನಲ್ ಮೆಡಿಸಿನ್ ಜರ್ನಲ್’ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒಟ್ಟಿಗೆ ಸೇವಿಸಿದರೆ ಹೃದಯಾಘಾತವುಂಟಾಗುವ ಅಪಾಯ ಹೆಚ್ಚಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
♦ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮ
 ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಪೂರಕಗಳು ಹೃದಯದ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಅಧ್ಯಯನ ತಂಡವು 16 ವಿವಿಧ ಪೋಷಕಾಂಶ ಪೂರಕಗಳು ಮತ್ತು ಎಂಟು ಆಹಾರಕ್ರಮ ಬದಲಾವಣೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒಟ್ಟಿಗೆ ಸೇವಿಸಿದರೆ ಹೃದಯಾಘಾತದ ಅಪಾಯವು ಶೇ.17ರಷ್ಟು ಹೆಚ್ಚುತ್ತದೆ ಎನ್ನುವುದನ್ನು ಅಧ್ಯಯನದ ಫಲಿತಾಂಶಗಳು ಬೆಟ್ಟು ಮಾಡಿವೆ.
♦  ಅಪಧಮನಿಗಳು ಸಂಕುಚಿತಗೊಳ್ಳುತ್ತವೆ
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒಟ್ಟಿಗೆ ಸೇವಿಸಿದರೆ ಅಪಧಮನಿ ಕಾಠಿಣ್ಯವುಂಟಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಈ ಸ್ಥಿತಿಯಲ್ಲಿ ಅಪಧಮನಿಗಳ ಭಿತ್ತಿಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಸಂಗ್ರಹಗೊಂಡು ಅವು ಸಂಕುಚಿತಗೊಳ್ಳುತ್ತವೆ.
ವಾಂತಿ, ತೀವ್ರ ಆತಂಕ ಮತ್ತು ಖಿನ್ನತೆ, ಅಪಧಮನಿಗಳಲ್ಲಿ ತಡೆಯಿಂದಾಗಿ ಎದೆನೋವು, ಶರೀರದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಬವಳಿ ಬಂದಂತಾಗುವುದು ಮತ್ತು ನಿಶ್ಶಕ್ತಿ ಇವು ಅಪಧಮನಿ ಕಾಠಿಣ್ಯ ಸ್ಥಿತಿಯ ಲಕ್ಷಣಗಳಾಗಿವೆ.
♦ ಸಕಾಲಿಕ ರೋಗನಿರ್ಧಾರ ಮುಖ್ಯ
ಸೂಕ್ತ ಚಿಕಿತ್ಸೆಗಾಗಿ ಅನಾರೋಗ್ಯದ ಮೂಲ ಕಾರಣವನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಅಪಧಮನಿ ಕಾಠಿಣ್ಯ ಪ್ರಕರಣಗಳಲ್ಲಿ ಈ ಕೆಳಗಿನ ವಿಧಾನಗಳಲ್ಲಿ ರೋಗನಿರ್ಧಾರವನ್ನು ಕೈಗೊಳ್ಳಬಹುದು.
ಹೃದಯ ಸಮಸ್ಯೆಗಳ ಪ್ರಕರಣದಲ್ಲಿ ರಕ್ತಪರೀಕ್ಷೆಗಳು ರಕ್ತದಲ್ಲಿ ಸಕ್ಕರೆ, ಕೊಬ್ಬು ಮತ್ತು ಪ್ರೋಟಿನ್ ಪ್ರಮಾಣವನ್ನು ನಿರ್ಧರಿಸಲು ನೆರವಾಗುತ್ತವೆ. ರಕ್ತದಲ್ಲಿಯ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ ಅಪಧಮನಿ ಕಾಠಿಣ್ಯದ ಸಾಧ್ಯತೆಗಳಿರುತ್ತವೆ. ಇದರ ಜೊತೆಗೆ ದೈಹಿಕ ತಪಾಸಣೆ, ಅಲ್ಟ್ರಾಸೌಂಡ್ ಇತ್ಯಾದಿಗಳನ್ನೂ ವೈದ್ಯರು ನಡೆಸುತ್ತಾರೆ.
ಅಪಧಮನಿ ಕಾಠಿಣ್ಯಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೊಬ್ಬು ಹೆಚ್ಚಿರುವ ಮತ್ತು ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು,ನಿಯಮಿತ ವ್ಯಾಯಾಮ,ಧೂಮ್ರಪಾನ ವರ್ಜನೆ ಇತ್ಯಾದಿಗಳು ಇಂತಹ ಬದಲಾವಣೆಗಳಲ್ಲಿ ಸೇರಿವೆ.

 

Writer - -ಎನ್‌ಕೆ

contributor

Editor - -ಎನ್‌ಕೆ

contributor

Similar News