ಅಂಬೇಡ್ಕರ್ ಮತ್ತು ಕಾಶ್ಮೀರ- ಹಲವಾರು ಮಿಥ್ಯೆಗಳು

Update: 2019-08-09 18:47 GMT

ಭಾರತದ ಜನರ ಮೇಲೆ ತಾನು ನಡೆಸುವ ಘನಘೋರ ಆಕ್ರಮಣಗಳಿಗೆಲ್ಲ ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ. ಮೋದಿ ಸರಕಾರ 2016ರಲ್ಲಿ ನೋಟು ನಿಷೇಧ ಮಾಡಿದಾಗಲೂ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿತ್ತು. ಈಗ ಆರ್ಟಿಕಲ್ 370 ಅನ್ನು ರದ್ದುಗೊಳಿಸಿ, ಕಾಶ್ಮೀರದ ಮೇಲೆ ಮಾಡಿರುವ ಬರ್ಬರ ರಾಜಕೀಯ ದಾಳಿಗೆ ಅಂಬೇಡ್ಕರ್ ಅವರ ದೃಷ್ಟಿಕೋನವೂ ಪ್ರೇರಣೆ ಎಂದು ಹೇಳುವಷ್ಟು ಧಾರ್ಷ್ಟ್ಯವನ್ನು ಆರೆಸ್ಸೆಸ್-ಬಿಜೆಪಿ ತೋರುತ್ತಿದೆ. ಮೊನ್ನೆ ಮೋದಿಯವರು ಮಾಡಿದ ಭಾಷಣದಲ್ಲೂ ಇಂಥದ್ದೇ ಸುಳ್ಳುಗಳನ್ನು ಉದುರಿಸಿದ್ದಾರೆ.


ಬಿಜೆಪಿ ಹೆಸರಿನ ಮತ್ತು ಆರೆಸ್ಸೆಸ್ ಮತ್ತು ಅಂಬಾನಿಗಳಿಂದ ನಿರ್ದೇಶಿತವಾದ ಮೋದಿ-ಶಾ ಸರಕಾರವು ಕಾಶ್ಮೀರದೊಂದಿಗೆ ಭಾರತವನ್ನು ಬೆಸೆಯಲೆಂದು ರೂಪಿಸಲಾಗಿದ್ದ ಆರ್ಟಿಕಲ್ 370ಅನ್ನು ರದ್ದುಗೊಳಿಸಿದೆ. ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸಿದ್ದಲ್ಲದೆ ಅದಕ್ಕಿದ್ದ ರಾಜ್ಯದ ಸ್ಥಾನವನ್ನು ಕಸಿದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರಕಾರವು ಕಾಶ್ಮೀರಿಗಳಿಗೆ ಮಾಡುತ್ತಾ ಬಂದಿದ್ದ ಗಾಯವನ್ನು ಬಿಜೆಪಿ ಸರಕಾರ ಇನ್ನಷ್ಟು ಬಗೆದು ಕಾಶ್ಮೀರದ ಹೃದಯಕ್ಕೆ ಆಳವಾಗಿ ಇರಿದಿದೆ. ಆದರೂ ಈ ಕ್ರಮದಿಂದ ಅಲ್ಲಿ ಶಾಂತಿ ನೆಲಸಲಿದೆ ಮತ್ತು ಅಭಿವೃದ್ಧಿ ಆಗಲಿದೆ ಎಂದು ಬೊಗಳೆ ಬಿಡುತ್ತಿರುವ ಮೋದಿ ಸರಕಾರ ತಾನು ಮಾಡಿರುವ ಈ ಬರ್ಬರ ಕೊಲೆಗೆ ಸುಂದರ ಹೊದಿಕೆಯನ್ನು ಹೊದಿಸಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ ಈ ಆರ್ಟಿಕಲ್ 370ರಿಂದಲೇ ಕಾಶ್ಮೀರದಲ್ಲಿ ನಿರುದ್ಯೋಗ, ಭಯೋತ್ಪಾದನೆ, ಅನಭಿವೃದ್ಧಿ ಎಲ್ಲವೂ ಸಂಭವಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ವಾಸ್ತವವೆಂದರೆ, ಆರ್ಟಿಕಲ್ 370 ಇದ್ದರೂ ಕಾಶ್ಮೀರ ಹಲವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗಿಂತ ಮುಂದಿದೆ.

ಆರ್ಟಿಕಲ್ 370 ಇಲ್ಲದಿದ್ದರೂ, ಬಿಜೆಪಿ ಆಡಳಿತವೇ ಇದ್ದರೂ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಂಡ್ ಇನ್ನಿತರ ರಾಜ್ಯಗಳು ಅಭಿವೃದ್ಧಿಯಲ್ಲಿ ಕಾಶ್ಮೀರಕ್ಕಿಂತ ಬಹಳ ಹಿಂದೆ ಇದೆ. ಹೀಗಾಗಿ ಆರ್ಟಿಕಲ್ 370ಕ್ಕೂ ಕಾಶ್ಮೀರದ ಆರ್ಥಿಕ ಸಮಸ್ಯೆಗಳಿಗೂ ಯಾವ ಸಂಬಂಧವೂ ಇಲ್ಲ. ಹಾಗೆ ನೋಡಿದರೆ ಆರ್ಟಿಕಲ್ 370 ಕಾಶ್ಮೀರಕ್ಕೆ ವಿಶೇಷ ರಾಜಕೀಯಾಧಿಕಾರ ವನ್ನಾದರೂ ಕೊಡಬೇಕಿತ್ತು. ವಿದೇಶಾಂಗ, ರಕ್ಷಣೆ ಮತ್ತು ಸಂಪರ್ಕದ ವಿಷಯಗಳನ್ನು ಬಿಟ್ಟು ಭಾರತ ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿರುವ ಯಾವುದೇ ಬಾಬತ್ತಿನ ಬಗ್ಗೆ ಶಾಸನ ರೂಪಿಸುವ ಸರ್ವಾಧಿಕಾರ ಕಾಶ್ಮೀರದ ಶಾಸನಸಭೆಗೆ ದಕ್ಕಬೇಕಿತ್ತು. ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. ಕಾಂಗ್ರೆಸ್ ಸರಕಾರವೂ 1953 ರಿಂದ ಮಾಡುತ್ತಾ ಬಂದ ವಂಚನೆಯಿಂದಾಗಿ ಏಳನೇ ಶೆಡ್ಯೂಲಿನಲ್ಲಿ ಕೇಂದ್ರದ ಪಟ್ಟಿಯಲ್ಲಿರುವ 97 ವಿಷಯಗಳಲ್ಲಿ 94 ವಿಷಯಗಳು ಈಗಾಗಲೇ ಕಾಶ್ಮೀರಕ್ಕೆ ಅನ್ವಯವಾಗುತ್ತಿದೆ. ಸಮವರ್ತಿ ಪಟ್ಟಿಯಲ್ಲಿರುವ 47 ವಿಷಯಗಳಲ್ಲಿ 27 ರಲ್ಲಿ ಕೇಂದ್ರದ ಶಾಸನವೇ ಕಾಶ್ಮೀರಕ್ಕೂ ವರ್ತಿಸುತ್ತದೆ. ಹಾಗೆಯೇ ಭಾರತದ ಸಂವಿಧಾನದಲ್ಲಿರುವ 395 ಕಲಮುಗಳಲ್ಲಿ 260 ಕಲಮುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿವೆ. ಬಾಕಿ 135 ಕಲಮುಗಳು ಈಗಾಗಲೇ ಕಾಶ್ಮೀರದ ಸಂವಿಧಾನದಲ್ಲಿದ್ದವು. ಹೀಗಾಗಿ ಕಾಶ್ಮೀರದಲ್ಲಿದ್ದದ್ದು ಪ್ರಾಣವನ್ನು ಕಳೆದುಕೊಂಡ ಆರ್ಟಿಕಲ್ 370 ಮಾತ್ರ. ಈಗ ಬಿಜೆಪಿ ಆ ಅಸ್ಥಿಪಂಜರವನ್ನು ಹೊಡೆದು ಪುಡಿ ಮಾಡಿದೆ. ಅಷ್ಟು ಮಾತ್ರವಲ್ಲ ಭಾರತದ ಬೇರೇ ಯಾವ ರಾಜ್ಯಗಳೂ ಅನುಭವಿಸದಷ್ಟು ಮಿಲಿಟರಿ ದಮನವನ್ನು ಹೇರುವಂಥ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ

1958ರಿಂದಲೂ ಕಾಶ್ಮೀರದಲ್ಲಿ ಜಾರಿಯಲ್ಲಿದೆ. ಭಾರತದ ಬೇರೆ ಯಾವ ಸಾಮಾನ್ಯ ರಾಜ್ಯಗಳೂ ಅನುಭವಿಸದಷ್ಟು ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ಕಾಶ್ಮೀರ ಅನುಭವಿಸಿದೆ. ಹೀಗಾಗಿ ಆರ್ಟಿಕಲ್ 370 ರದ್ದಾದ ತಕ್ಷಣ ಇವೆಲ್ಲ ಏನೂ ಬದಲಾಗುವುದಿಲ್ಲ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ್ದರ ಹಿಂದಿನ ಉದ್ದೇಶ ದೇಶವು ಆರ್ಥಿಕ ಕುಸಿತದಿಂದ ಆಕ್ರೋಶಗೊಳ್ಳುತ್ತಿರುವ ಸಂದರ್ಭದಲ್ಲಿ ಮಹತ್ತರವಾದದ್ದನ್ನು ಸಾಧಿಸಿದ ಭ್ರಮಯೆನ್ನು ಬಿತ್ತುವುದೇ ಆಗಿದೆ. ಹಾಗೆಯೇ ಆಝಾದಿಯ ಹಂಬಲ ಹೊತ್ತಿರುವ ಕಾಶ್ಮೀರಗಳಿಗೆ ಮತ್ತಷ್ಟು ಅಪಮಾನ ಮಾಡಿ ಮತ್ತಷ್ಟು ದಬ್ಬಾಳಿಕೆಯ ಮೂಲಕ ಅವರ ಸ್ವಾಭಿಮಾನವನ್ನು ದಮನಿಸುವುದೇ ಆಗಿದೆ. ಹೀಗಾಗಿ ಆರ್ಟಿಕಲ್ 370 ರದ್ದತಿ ಮತ್ತು ವಿಭಜೀಕರಣಗಳು ಈಗಾಗಲೇ ದಮನ, ದಬ್ಬಾಳಿಕೆ, ಸಾಲು ಕೊಲೆ, ಪ್ರಭುತ್ವ ಭಯೋತ್ಪಾದನೆ ಮತ್ತು ಅಪಮಾನಗಳಿಂದ ಕ್ರುದ್ಧರಾಗಿರುವ ಕಾಶ್ಮೀರಿಗಳನ್ನು ಇನ್ನಷ್ಟು ಉದ್ವಿಘ್ನಗೊಳಿಸಲಿದೆ. ಬರಲಿರುವ ದಿನಗಳು ಇನ್ನಷ್ಟು ರಕ್ತಸಿಕ್ತವಾಗಲಿದೆ. ಆ ರಕ್ತವು ಭಾರತೀಯರೆಲ್ಲರ ಕೈಗಳಿಗೂ ಅಂಟಿಕೊಳ್ಳಲಿದೆ. ಅದಕ್ಕೆಂದೇ ಇರಬೇಕು, ಭಾರತದ ಜನರ ಮೇಲೆ ತಾನು ನಡೆಸುವ ಘನಘೋರ ಆಕ್ರಮಣಗಳಿಗೆಲ್ಲ ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ. ಮೋದಿ ಸರಕಾರ 2016ರಲ್ಲಿ ನೋಟು ನಿಷೇಧ ಮಾಡಿದಾಗಲೂ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿತ್ತು. ಈಗ ಆರ್ಟಿಕಲ್ 370 ಅನ್ನು ರದ್ದುಗೊಳಿಸಿ, ಕಾಶ್ಮೀರದ ಮೇಲೆ ಮಾಡಿರುವ ಬರ್ಬರ ರಾಜಕೀಯ ದಾಳಿಗೆ ಅಂಬೇಡ್ಕರ್ ಅವರ ದೃಷ್ಟಿಕೋನವೂ ಪ್ರೇರಣೆ ಎಂದು ಹೇಳುವಷ್ಟು ಧಾರ್ಷ್ಟ್ಯವನ್ನು ಆರೆಸ್ಸೆಸ್-ಬಿಜೆಪಿ ತೋರುತ್ತಿದೆ. ಮೊನ್ನೆ ಮೋದಿಯವರು ಮಾಡಿದ ಭಾಷಣದಲ್ಲೂ ಇಂಥದ್ದೇ ಸುಳ್ಳುಗಳನ್ನು ಉದುರಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅವರು ಮೂರು ಸುಳ್ಳುಗಳನ್ನು ಹೇಳುತ್ತಿದ್ದಾರೆ: 1. ಅಂಬೇಡ್ಕರ್‌ಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡಲು ಇಷ್ಟವಿರಲಿಲ್ಲ. ಆರ್ಟಿಕಲ್ 370 ರದ್ದು ಮಾಡುವುದು ಸರ್ದಾರ್ ಪಟೇಲ್ ಮತ್ತು ಅಂಬೇಡ್ಕರ್ ಇಬ್ಬರ ಕನಸೂ ಆಗಿತ್ತು. 2. ಆದ್ದರಿಂದಲೇ ಅಂಬೇಡ್ಕರ್ ಅವರು 370ನೇ ವಿಧಿಯನ್ನು ರಚಿಸಲು ಒಪ್ಪಿರಲಿಲ್ಲ ಮತ್ತು ತಮ್ಮ ಸಹಾಯ ಕೇಳಿ ಬಂದಿದ್ದ ಶೇಕ್ ಅಬ್ದುಲ್ಲಾರನ್ನು ಗದರಿಸಿ ಕಳಿಸಿದ್ದರು.

3. ಅಂಬೇಡ್ಕರ್ ಅವರು ಆರೆಸ್ಸೆಸ್ಸಿಗರ ರೀತಿಯಲ್ಲೇ ಮುಸ್ಲಿಂ ವಿರೋಧಿ, ಕಾಶ್ಮೀರ ಪ್ರತ್ಯೇಕತಾ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ದೇಶಭಕ್ತರಾಗಿದ್ದರು.

ಇತಿಹಾಸ ಗೊತ್ತಿಲ್ಲದವರು ಮತ್ತು ಚರಿತ್ರೆ ತಿರುಚುವ ದುರುದ್ದೇಶ ಉಳ್ಳವರು ಮಾತ್ರ ಹೀಗೆ ಹೇಳಲು ಸಾಧ್ಯ. ಹೀಗಾಗಿ ಕನ್ನಡಕಗಳನ್ನು ಕಳಚಿಟ್ಟು ಚರಿತ್ರೆಯನ್ನು ಅರಿಯೋಣ.

ಆರ್ಟಿಕಲ್ 370 ಮತ್ತು ಭಾರತದ ಸರ್ವಸಮ್ಮತಿ:
ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅವರ ನೇರಾಳ್ವಿಕೆಯಲ್ಲಿದ್ದ ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಗೊಂಡವು. ಮತ್ತು ಉಳಿದ 480 ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ತಾನ ಸೇರುವ ಅಥವಾ ತಟಸ್ಥವಾಗುಳಿಯುವ ಅವಕಾಶವನ್ನು ನೀಡಲಾಗಿತ್ತು. ಆದರೆ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರು. ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಂ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹೇರುತ್ತಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನದ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು. ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜಾ ಹರಿಸಿಂಗ್ ನಡುವೆ ಸೇರ್ಪಡೆ ಒಪ್ಪಂದವಾಯಿತು. ಅದರ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೇ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು ಹಾಗೂ ಆ ಸೇರ್ಪಡೆ ಒಪ್ಪಂದದ ತಾತ್ಪರ್ಯವೂ ಆಗಿತ್ತು. ಭಾರತ ಸರಕಾರವು ರಾಜಾ ಹರಿಸಿಂಗ್ ಜೊತೆ ಈ ಒಪ್ಪಂದ ಮಾಡಿಕೊಳ್ಳುವಾಗ ಅಂಬೇಡ್ಕರ್ ಅವರೂ ಭಾರತ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. ಅವರು ಈ ಒಪ್ಪಂದದ ಬಗ್ಗೆ ಯಾವ ಆಕ್ಷೇಪಣೆಯನ್ನೂ ಮಾಡಿರಲಿಲ್ಲ. ಅಷ್ಟು ಮಾತ್ರವಲ್ಲ. ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಆಗ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಇನ್ನು ಇಂದು ಬಿಜೆಪಿ ಆರಾಧಿಸುವ ಸರ್ದಾರ್ ವಲ್ಲಭಭಾಯಿ ಪಟೇಲರೇ ಆ ಮಾತುಕತೆಯ ಒಟ್ಟಾರೆ ಉಸ್ತುವಾರಿ ವಹಿಸಿದ್ದರು.

ಆ ನಂತರದಲ್ಲಿ ಈ ಒಪ್ಪಂದವನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಕಾಶ್ಮೀರದ ರಾಜನಿಂದ ಕಾಶ್ಮೀರದ ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಮತ್ತು ಇತರರು ಹಾಗೂ ಭಾರತ ಪ್ರಭುತ್ವದ ಕಡೆಯಿಂದ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾದ ಗೋಪಾಲ್‌ಸ್ವಾಮಿ ಅಯ್ಯಂಗಾರ್. ಇದರ ಬಹುಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು. ಆರ್ಟಿಕಲ್‌ನ ರಚನೆಯನ್ನು ಸಾಂವಿಧಾನಿಕವಾಗಿ ಮಾನ್ಯವಾಗಿಸುವ ಪ್ರಕ್ರಿಯೆಯ ಭಾಗವಾಗಿ 1949ರ ಮೇ ತಿಂಗಳಲ್ಲಿ ಭಾರತದ ಸಂವಿಧಾನ ಸಭೆಗೆ ಕಾಶ್ಮೀರದ ಪ್ರತಿನಿಧಿಗಳಾಗಿ ಶೇಕ್ ಅಬ್ದುಲ್ಲಾ, ಮಿರ್ಝಾ ಮುಹಮ್ಮದ್ ಅಫ್ಝಲ್ ಬೇಗ್, ಮೌಲಾನ ಮುಹಮ್ಮದ್ ಸೈಯದ್ ಮಸೂದಿ ಮತ್ತು ಮೋತಿ ರಾಂ ಬಾಗ್ಡಾ ಅವರನ್ನು ಸೇರಿಸಿಕೊಳ್ಳಲಾಯಿತು. (Article 370- A Constitutional History Of Jammu And Kasmir- A.G. Noorani)

 ಒಪ್ಪಿತ ಕರಡನ್ನು ಗೋಪಾಲ್‌ಸ್ವಾಮಿ ಅಯ್ಯಂಗಾರ್ ಅವರು 1949ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂಬೇಡ್ಕರ್ ಅವರು ಆ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಮಾಡಲಿಲ್ಲ. ಅಷ್ಟು ಮಾತ್ರವಲ್ಲ ಅಂದು ಸಭೆಯಲ್ಲಿದ್ದ ಶ್ಯಾಂ ಪ್ರಸಾದ್ ಮುಖರ್ಜಿ, ವಲ್ಲಭಬಾಯಿ ಪಟೇಲರಾದಿಯಾಗಿ ಯಾರೂ ಅರ್ಧ ಸಾಲಿನ ತಿದ್ದುಪಡಿಯನ್ನೂ ಹೇಳಲಿಲ್ಲ. ಅಂದು ಭಾರತದ ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆ ಮಾಡಬೇಕಿದ್ದರಿಂದ ಈ ಆರ್ಟಿಕಲ್ ಸೇರ್ಪಡೆ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ! (ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: http://164.100.47.194/loksabha/writereaddata/cadebatefiles/C17101949.html)

ಶೇಕ್ ಅಬ್ದುಲ್ಲಾರನ್ನು ಗದರಿದರೆಂಬ ಆರೆಸ್ಸೆಸ್ ಪುಕಾರು:

ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಆರ್ಟಿಕಲ್ 370 ರಚನೆ ಮಾಡಲು ಒಪ್ಪಿರಲಿಲ್ಲವೆಂಬ ಹಾಗೂ ಶೇಕ್ ಅಬ್ದುಲ್ಲಾ ಅವರನ್ನು ಗದರಿ ಕಳಿಸಿದರೆಂಬ ಪುಕಾರು ಎಲ್ಲಿಂದ ಹುಟ್ಟಿಕೊಂಡಿತು? ಇದರ ಬಗ್ಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯಲ್ಲಾಗಲೀ ಅಥವಾ ಅಂಬೇಡ್ಕರ್ ಅವರ ಬರಹ ಭಾಷಣಗಳ ಇಡೀ 17 ಸಂಪುಟಗಳಲ್ಲಾಗಲೀ ಅಥವಾ ಅವರ ಸಹಚರರ ಬರಹಗಳಲ್ಲಾಗಲೀ ಎಲ್ಲೂ ಉಲ್ಲೇಖವಿಲ್ಲ. ಇದರ ಬಗ್ಗೆ ಪ್ರಥಮ ಬಾರಿ ಉಲ್ಲೇಖವಾಗುವುದು 1991ರಲ್ಲಿ ಆರೆಸ್ಸೆಸ್‌ನ ಮುಖವಾಣಿಯಾದ ‘ತರುಣ್ ಭಾರತ್’ ಪತ್ರಿಕೆಯ ಸಂಪಾದಕೀಯದಲ್ಲಿ. ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರಾದ ಬಲರಾಜ್ ಮುಧೋಕ್ ಅವರು ಈ ರೀತಿ ಎಲ್ಲೋ ಹೇಳಿದ್ದನ್ನು ಉಲ್ಲೇಖಿಸಿ ಆ ಸಂಪಾದಕೀಯವನ್ನು ಬರೆಯಲಾಗಿತ್ತು. ಆದರೆ ಅದು ತನ್ನ ಪ್ರತಿಪಾದನೆಗೆ ಯಾವುದೇ ಪುರಾವೆಯನ್ನು ಒದಗಿಸುವುದಿಲ್ಲ. ಆ ನಂತರ ಈ ಸುಳ್ಳನ್ನು ಪದೇಪದೇ ಹೇಳುತ್ತಾ ಈಗ ಅದೇ ಸತ್ಯವೇನೋ ಎಂಬಂತಾಗಿಬಿಟ್ಟಿದೆ. ಈ ಹಿಂದೆಯೂ ಇದೇ ರೀತಿ ಅಂಬೇಡ್ಕರ್ ಅವರನ್ನು ತಮ್ಮವರನ್ನಾಗಿಸಿ ಕೊಳ್ಳುವ ಪ್ರಕ್ರಿಯೆಯಲ್ಲಿ ಗಾಂಧಿ ಕೊಲೆ ಪ್ರಕರಣದಲ್ಲಿ ನಿಂದಿತರಾಗಿದ್ದ ಸಾವರ್ಕರ್ ಅವರ ವಕೀಲರನ್ನು ಅಂಬೇಡ್ಕರ್ ಅವರು ಖಾಸಗಿಯಾಗಿ ಭೇಟಿಯಾಗಿ ಸಾವರ್ಕರ್‌ಗೆ ತಮ್ಮ ಬೆಂಬಲವನ್ನು ತಿಳಿಸಿದ್ದರು ಎಂಬ ಪುಕಾರನ್ನು ಆರೆಸ್ಸೆಸ್ ಬಣವು ಹರಿಬಿಟ್ಟಿತ್ತು. ಇದನ್ನು ಮೊದಲು ಮಲ್ಗಾಂವ್ಕರ್ ಎನ್ನುವ ಮರಾಠಿ ಬರಹಗಾರರೊಬ್ಬರು ತಮ್ಮ ಕಲ್ಪನಾ ಲಹರಿಯ ಬರಹದಲ್ಲಿ ತೇಲಿಬಿಟ್ಟಿದ್ದರು. ಆ ನಂತರ ದೇಶದ ಗೃಹಮಂತ್ರಿಯಾಗಿದ್ದಾಗ ಅಡ್ವ್ವಾಣಿಯವರು ಮಲ್ಗಾಂವ್ಕರ್ ಅವರ ಬರಹವನ್ನು ಉಲ್ಲೇಖಿಸಿ ಒಂದು ಭಾಷಣದಲ್ಲಿ ಮಾತನಾಡಿದ್ದರು. ಆ ನಂತರ ಲಕ್ಷ ಲಕ್ಷ ಸಾರಿ ಬಿಜೆಪಿಯ ಬಾಯಿಗಳು ಅದನ್ನೇ ಪುನರುಚ್ಚರಿಸುತ್ತಾ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನವನ್ನು ಮುಂದುವರಿಸಿವೆ.

ಅಂಬೇಡ್ಕರ್ ಮತ್ತು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರ:
ಇನ್ನು ಅಂಬೇಡ್ಕರ್ ಅವರಿಗೆ ಕಾಶ್ಮೀರದ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂದು ಅರ್ಥ ಮಾಡಿಕೊಳ್ಳಲು ನೇರವಾಗಿ ಅವರ ಬರಹಗಳಿಗೆ ಮೊರೆ ಹೋಗಬೇಕು. ಅಂಬೇಡ್ಕರ್ ಅವರು ಪ್ರಜಾತಂತ್ರವಾದಿಯಾಗಿದ್ದು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಕ್ಕಿನ ಪರವಾಗಿದ್ದವರು. ದೇಶದೊಳಗೆ ಊಳಿಗಮಾನ್ಯ ಶಕ್ತಿಗಳಿಗೆ ಹೆಚ್ಚಿಗೆ ಅಧಿಕಾರ ಕೊಡುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹಾಗೂ ಭಾಷಾವಾರು ಪ್ರಾಂತಗಳ ಬಗ್ಗೆ ಅವರಿಗೆ ತಕರಾರಿತ್ತು. ಆದರೆ ದೇಶಗಳ ನಡುವಿನ ರಾಷ್ಟ್ರೀಯತಾ ವಿಮೋಚನಾ ಪ್ರಶ್ನೆಯು ಎದುರಾದಾಗ ಅವರು ಸದಾ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಪರವಾಗಿದ್ದರು. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರ Pakistan Or The Partition Of India ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು! ಆ ಪುಸ್ತಕದಲ್ಲಿ ಅವರು ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸುತ್ತಾರೆ.

ಅವರ ಪ್ರಕಾರ ಒಟ್ಟಾಗಿ ಬದುಕಬೇಕೆಂಬ ರಾಜಕೀಯ ಬಯಕೆ ಇದ್ದಾಗ ಮಾತ್ರ ಒಂದು ರಾಷ್ಟ್ರೀಯತೆ ಜನ್ಮ ತಾಳುತ್ತದೆ ಮತ್ತು ಅಂತಹ ಭಾವನೆ ಮೂಡಲು ಹಲವು ಬಗೆಯ ಏಕರೂಪತೆಗಳು ಅಗತ್ಯವಿದ್ದರೂ ರಾಜಕೀಯ ಬಯಕೆ ಅತ್ಯಗತ್ಯ. ಎರಡು ಭಿನ್ನ ರಾಷ್ಟ್ರೀಯತೆಗಳು ಒಟ್ಟಾಗಿ ಬದುಕಬೇಕೆಂದರೆ ರಾಜಕೀಯ ಸಮಾನಾಧಿಕಾರ ಹಂಚಿಕೊಳ್ಳುವ ವ್ಯವಸ್ಥೆ ಇರಬೇಕು. ಹಾಗಾಗಲಿಲ್ಲವೆಂದರೆ ಬೇರ್ಪಟ್ಟು ಬೇರೆಬೇರೆ ರಾಷ್ಟ್ರಪ್ರಭುತ್ವಗಳನ್ನು ರಚಿಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರೀಯತೆಗೆ ಮತ್ತೊಂದು ರಾಷ್ಟ್ರೀಯತೆ ಅಧೀನವಾಗಿ ಬದುಕುವುದು ಸಾಧ್ಯವೇ ಇಲ್ಲ ಎಂಬುದು ಅವರ ನಿಶ್ಚಿತ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಅವರು ದೇಶ ವಿಭಜನೆ ಅನಿವಾರ್ಯ ಎಂದು ಹೇಳುತ್ತಾರೆ ಮತ್ತು ಅದೇ ಪುಸ್ತಕದಲ್ಲಿ ಹಿಂದೂ ರಾಷ್ಟ್ರ ಜಾರಿಗೆ ಬಂದರೆ ಪ್ರಜಾತಂತ್ರವು ನಾಶಗೊಳ್ಳುತ್ತದೆ ಎಂದು ಬಹಳ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸುತ್ತಾರೆ. ಹಾಗೂ ಅದೇ ಸಮಯದಲ್ಲಿ ಮುಸ್ಲಿಂ ಕೋಮುವಾದಿಗಳು ತಮಗೆ ಅನುಕೂಲವಿದ್ದಾಗ ಮಾತ್ರ ಪ್ರಜಾತಂತ್ರವನ್ನು ಮತ್ತು ಸ್ವನಿರ್ಣಯಾಧಿಕಾರವನ್ನು ಬಳಸಿಕೊಳ್ಳುವ ಅವಕಾಶವಾದವನ್ನು ಬಲವಾದ ಮಾತಿನಿಂದ ಖಂಡಿಸುತ್ತಾರೆ. ಅದರ ಜೊತೆಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರವು ಯಾವಾಗಲೂ ಒಂದೇ ರೀತಿಯಲ್ಲಿ ಚಲಾವಣೆಯಾಗಬೇಕಿಲ್ಲವೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ಸೂಚಿಸುವ ಪರಿಹಾರ:

ಅಂಬೇಡ್ಕರ್ ಅವರು ಹೇಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಿನ್ನೆಲೆಯಲ್ಲಿ ದೇಶವಿಭಜನೆಯ ಬಗ್ಗೆ ತೀರ್ಮಾನಕ್ಕೆ ಬರುತ್ತಾರೋ ಅದೇ ಹಿನ್ನೆಲೆಯಲ್ಲಿ ಕಾಶ್ಮೀರದ ಬಗ್ಗೆಯೂ ಖಚಿತವಾದ ನಿಲುವನ್ನೇ ತೆಗೆದುಕೊಳ್ಳುತ್ತಾರೆ. ಸ್ವನಿರ್ಣಯಾಧಿಕಾರ ನೆಲೆಯ ಜೊತೆಜೊತೆಗೆ ಭಾರತ ಮತ್ತು ಪಾಕಿಸ್ತಾನಗಳೆಂಬ ಈ ಎರಡು ಯುವ ದೇಶಗಳ ನಡುವೆ ಇರಬೇಕಾದ ಶಾಂತಿಯುತ ಸಂಬಂಧ, ಅನಗತ್ಯವಾಗಿ ಹೆಚ್ಚುತ್ತಿರುವ ರಕ್ಷಣಾ ವೆಚ್ಚದಂಥ ದೃಷ್ಟಿಕೋನಗಳೂ ಸಹ ಕಾಶ್ಮೀರ ಸಮಸ್ಯೆಗೆ ಅವರು ಸೂಚಿಸುವ ಪರಿಹಾರಗಳ ರಾಜತಾಂತ್ರಿಕ ನೆಲೆಗಳಾಗಿವೆ.

 ಇದರ ಬಗ್ಗೆ ಅವರು ಸಂಸತ್ತಿನಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ತಾವು ಸಂಪುಟಕ್ಕೆ ಕೊಟ್ಟ ರಾಜೀನಾಮೆ ಪತ್ರದಲ್ಲಿ, 1952ರ ಎಸ್.ಸಿ.ಎಫ್.ನ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರಿಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. 1951ರಲ್ಲಿ ತಮ್ಮ ಸಂಪುಟ ಸಚಿವರ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಾರೆ. ತಾವು ರಾಜೀನಾಮೆ ನೀಡಲು ಸರಕಾರವು ಹಿಂದೂ ಕೋಡ್ ಬಿಲ್, ಒಬಿಸಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಗಳ ಜೊತೆಗೆ ಭಾರತದ ತಪ್ಪುವಿದೇಶಾಂಗ ನೀತಿಯಿಂದ ಭಾರತದ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸುತ್ತಾ ಹೇಗೆ ಭಾರತ ಸರಕಾರದ ತಪ್ಪು ಕಾಶ್ಮೀರ ನೀತಿಯೂ ಕಳವಳಕಾರಿಯಾಗಿದೆ ಎಂದು ವಿವರಿಸುತ್ತಾರೆ. ಅದರ ಭಾಗವಾಗಿಯೇ ಕಾಶ್ಮೀರ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ತಮ್ಮ ನಿಲುವನ್ನೂ ಪ್ರತಿಪಾದಿಸುತ್ತಾರೆ:

‘‘ಪಾಕಿಸ್ತಾನದ ಜೊತೆಗೆ ನಮ್ಮ ಜಗಳವು ನಮ್ಮ ತಪ್ಪು ವಿದೇಶಾಂಗ ನೀತಿಯ ಭಾಗವಾಗಿದ್ದು ನನಗೆ ಅದರ ಬಗ್ಗೆ ತೀವ್ರ ಅಸಮಾಧಾನವಿದೆ. ಎರಡು ಕಾರಣಗಳಿಂದ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ- ಒಂದು ಕಾಶ್ಮೀರ, ಮತ್ತೊಂದು ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಾಶ್ಮೀರಕ್ಕಿಂತ ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ ಅಸಹನೀಯವಾಗಿದೆ ಎಂದು ತಿಳಿಯುತ್ತದೆ. ಆದ್ದರಿಂದ ನಾವು ಪೂರ್ವ ಬಂಗಾಳದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಆದರೂ ನಾವು ನಮ್ಮೆಲ್ಲಾ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಾಗಿದ್ದರೂ ನಾವು ಒಂದು ವಿಷಯವಲ್ಲದ ವಿಷಯದ ಮೇಲೆ ಹೊಡೆದಾಡುತ್ತಿದ್ದೇವೆ ಎಂದು ನನಗೆ ಭಾಸವಾಗುತ್ತದೆ. ಬಹಳಷ್ಟು ಸಮಯ ನಾವು ಯಾರು ಸರಿ ಮತ್ತು ಯಾರು ತಪ್ಪುಎಂದು ಕಾದಾಡುತ್ತಿದ್ದೇವೆ. ಆದರೆ ನಿಜವಾದ ವಿಷಯ ಯಾರು ಸರಿ ಅಥವಾ ತಪ್ಪುಎಂಬುದಲ್ಲ. ಬದಲಿಗೆ ಯಾವುದು ಸರಿ ಎಂಬುದೇ ಆಗಿದೆ. ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಅದಾಗಿದ್ದಲ್ಲಿ ಕಾಶ್ಮೀರವನ್ನು ವಿಭಜೀಕರಿಸುವುದೇ ಅದಕ್ಕೆ ಸರಿಯಾದ ಪರಿಹಾರ ಎಂದು ನಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ನಾವು ಭಾರತ ವಿಭಜನೆಯ ಸಂದರ್ಭದಲ್ಲಿ ಮಾಡಿದಂತೆ ಕಾಶ್ಮೀರದ ಮುಸ್ಲಿಂ ಭಾಗಗಳನ್ನು ಪಾಕಿಸ್ತಾನಕ್ಕೆ ಕೊಟ್ಟು ಹಿಂದೂ ಮತ್ತು ಬೌದ್ಧ ಭಾಗಗಳನ್ನು ಭಾರತಕ್ಕೆ ಪಡೆದುಕೊಳ್ಳಬೇಕು. ಕಾಶ್ಮೀ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News