×
Ad

ದಕ್ಷಿಣ ಭಾರತದಲ್ಲಿ ಮುಂದುವರಿದ ಮಳೆ: ಮೃತರ ಸಂಖ್ಯೆ ಕನಿಷ್ಠ 50ಕ್ಕೆ ಏರಿಕೆ

Update: 2019-08-10 23:50 IST

ಹೊಸದಿಲ್ಲಿ, ಆ. 10: ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಶನಿವಾರ ಕೂಡ ಮುಂದುವರಿದಿದೆ. ಇದರಿಂದಾಗಿ ಈ ರಾಜ್ಯಗಳಲ್ಲಿ ಹಲವೆಡೆ ಪ್ರವಾಹ ಸೃಷ್ಟಿಯಾಗಿದೆ. ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಕಳೆದ ಒಂದು ವಾರದಲ್ಲಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ.

ಕಾಸರಗೋಡು, ಕಣ್ಣೂರು, ವಯನಾಡಿನಲ್ಲಿ ರೆಡ್ ಅಲರ್ಟ್

ಕೇರಳದ ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ರವಿವಾರದ ವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಹಲವು ಭಾಗಗಳು ಜಲಾವೃತವಾಗಿವೆ. ಕೆಲವೆಡೆ ಭೂಕುಸಿತ ಸಂಭವಿಸಿದೆ. ಮಲಪ್ಪುರ ಜಿಲ್ಲೆಯ ಕವಳಪ್ಪಾರದಲ್ಲಿ ಇನ್ನೊಂದು ಭೂಕುಸಿತ ಸಂಭವಿಸಿದ್ದು, ಈಗಾಗಲೇ ನಡೆಸುತ್ತಿದ್ದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶನಿವಾರ ಮತ್ತೆ 5 ಮೃತದೇಹಗಳು ಪತ್ತೆಯಾಗಿದೆ. 42 ಕುಟುಂಬಗಳ 62 ಮಂದಿ ಸದಸ್ಯರು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊತುಕಲ್ಲು ಪಂಚಾಯತ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ವಯನಾಡ್ ಜಿಲ್ಲೆಯ ಪುತುಮಲೆಯಲ್ಲಿ ಗುರುವಾರ ಸಂಭವಿಸಿದ ಭೂಕುಸಿತದ ಅವಶೇಷಗಳ ಅಡಿಯಲ್ಲಿ 40ಕ್ಕೂ ಅಧಿಕ ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನೆರೆ ನೀರು ಇಳಿಯುತ್ತಿದ್ದು, ರವಿವಾರ ವಿಮಾನಗಳ ಸಂಚರ ಪುನರಾರಂಭವಾಗಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ತಮಿಳುನಾಡು: 2,500ಕ್ಕೂ ಅಧಿಕ ಸಂತ್ರಸ್ತರ ಸ್ಥಳಾಂತರ

ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಮುಂದುವರಿದಿದ್ದು, ನೀಲಗಿರಿ ಜಿಲ್ಲೆಯಿಂದ 2,500ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಇಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ ಇದುವರೆಗೆ 5 ಮಂದಿ ಮೃತಪಟ್ಟಿದ್ದಾರೆ. ಪಾಲಕ್ಕಾಡು ಜಿಲ್ಲೆಯಲ್ಲಿ ಹಳಿಗಳು ಜಲಾವೃತವಾಗಿರುವು ದರಿಂದ 20ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News