ವಿಧಿ 370: ವಿಭಿನ್ನ ಧ್ವನಿಗಳು

Update: 2019-08-10 19:05 GMT

‘‘ಸಂಸತ್ತಿನಲ್ಲಿ ಅಸಾಮಾನ್ಯ ವೇಗದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿವೆ’’ ಎಂದಿರುವ ಕರಣ್‌ಸಿಂಗ್ ತನ್ನ ಹೇಳಿಕೆಯಲ್ಲಿ 370ನೇ ವಿಧಿಯನ್ನು ನೇರವಾಗಿ ಉಲ್ಲೇಖಿಸಲಿಲ್ಲವಾದರೂ, ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಕ್ರಮವನ್ನು ಬೆಂಬಲಿಸಿರುವ ಹಲವಾರು ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದಾರೆ

ವಿಧಿ 370ರ ರದ್ದತಿ ಮತ್ತು ಜಮ್ಮು ಹಾಗೂ ಕಾಶ್ಮೀರದ ಪುನರ್ ರಚನೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿಗೆ ವಿರುದ್ಧವಾದ ಧ್ವನಿಗಳು ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ ಕೇಳಿಬಂದಿವೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್‌ರವರ ಪುತ್ರ ಡಾ. ಕರಣ್‌ಸಿಂಗ್ ತಾನು ಈಗ ಕಾಶ್ಮೀರದಲ್ಲಿ ಆಗಿರುವ ಬೆಳವಣಿಗೆಗಳನ್ನು ಸಾರಾ ಸಗಟಾಗಿ ಖಂಡಿಸುವುದನ್ನು ಒಪ್ಪುವುದಿಲ್ಲ; ವಿಧಿ 370ರ ರದ್ದು ಪಡಿಸುವಿಕೆಯಲ್ಲಿ ಹಲವು ಇತ್ಯಾತ್ಮಕ ಅಂಶಗಳಿವೆ ಎಂದಿದ್ದಾರೆ.

ಡಾ. ಕರಣ್‌ಸಿಂಗ್ ಜಮ್ಮು ಮತ್ತು ಕಾಶ್ಮೀರದ ಸರ್ದಾರ್-ಇ-ರಿಯಾಸತ್ ಹಾಗೂ ಮೊತ್ತ ಮೊದಲು ರಾಜ್ಯಪಾಲರಾಗಿದ್ದವರು. ‘‘ಸಂಸತ್ತಿನಲ್ಲಿ ಅಸಾಮಾನ್ಯ ವೇಗದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿವೆ’’ ಎಂದಿರುವ ಕರಣ್‌ಸಿಂಗ್ ತನ್ನ ಹೇಳಿಕೆಯಲ್ಲಿ 370ನೇ ವಿಧಿಯನ್ನು ನೇರವಾಗಿ ಉಲ್ಲೇಖಿಸಲಿಲ್ಲವಾದರೂ, ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಕ್ರಮವನ್ನು ಬೆಂಬಲಿಸಿರುವ ಹಲವಾರು ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದಾರೆ:

‘‘ಜಮ್ಮು ಹಾಗೂ ಕಾಶ್ಮೀರ ಮತ್ತು ಲಡಾಕ್ ಕೂಡ ಸೇರಿದಂತೆ ದೇಶವ್ಯಾಪಿಯಾಗಿ ಸರಕಾರದ ಕ್ರಮಕ್ಕೆ ಸಂಸತ್ತಿನಲ್ಲಿ ಸಂಪೂರ್ಣ ಬೆಂಬಲ ದೊರಕಿರುವಂತೆ ಕಾಣುತ್ತದೆ. ಈಗ ಆಗಿರುವ ಬೆಳವಣಿಗೆಗಳ ಸಂಪೂರ್ಣ ಖಂಡನೆಗೆ, ವೈಯಕ್ತಿಕವಾಗಿ, ನನ್ನ ಸಹಮತವಿಲ್ಲ. ಈ ಬೆಳವಣಿಗೆಗಳಲ್ಲಿ ಹಲವು ಒಳ್ಳೆಯ ಅಂಶಗಳಿವೆ.’’

35ಎ ವಿಧಿಯ ರದ್ದು ಪಡಿಸುವಿಕೆಯನ್ನು ಕೂಡ ಕರಣಸಿಂಗ್ ಸ್ವಾಗತಿಸಿದ್ದಾರೆ. ‘‘ಈ ವಿಧಿಯಲ್ಲಿ ಇದ್ದ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕಾಗಿತ್ತು. ಅದೇ ರೀತಿಯಾಗಿ, ಪಶ್ಚಿಮ ಪಾಕಿಸ್ತಾನದಿಂದ ಬಂದ ಲಕ್ಷಗಟ್ಟಲೆ ನಿರಾಶ್ರಿತರಿಗೆ ಮತದಾನದ ಹಕ್ಕು ನೀಡಿಕೆ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿಗಳ ನೀಡಿಕೆ ಕೂಡ ಬಹಳ ಸಮಯದಿಂದ ಬಾಕಿ ಉಳಿದಿತ್ತು. ಇದು ಇನ್ನು ಸಾಧ್ಯವಾಗಲಿರುವುದು ಸ್ವಾಗತಾರ್ಹ’’ ಎಂದಿದ್ದಾರೆ ಕರಣಸಿಂಗ್.

‘‘ಹೊಸತಾಗಿ ರಾಜ್ಯದ ಗಡಿಗಳ ವಿಂಗಡಣೆಯಾಗಲಿದೆ. ಇದರಿಂದಾಗಿ ಮೊತ್ತ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ನಡುವೆ ರಾಜಕೀಯ ಅಧಿಕಾರದ ಒಂದು ಹೊಸ ಹಂಚಿಕೆಯಾಗಲಿದೆ. ಲಡಾಕ್ ಒಂದು ಕೇಂದ್ರಾಡಳಿತ ಪ್ರದೇಶವಾಗಲಿರುವುದು ಕೂಡ ಸ್ವಾಗತಾರ್ಹವೇ. ನಿಜ ಹೇಳಬೇಕೆಂದರೆ ನಾನು ಆಗಿನ್ನೂ ಜಮ್ಮು ಮತ್ತು ಕಾಶ್ಮೀರದ ಸರ್ದಾರ್-ಇ-ರಿಯಾಸತ್ ಆಗಿದ್ದಾಗಲೇ, 1965ರಲ್ಲಿ ಇದನ್ನು ಸೂಚಿಸಿದ್ದೆ. ಆಗ ನಾನು ಜಮ್ಮು ಮತ್ತು ಕಾಶ್ಮೀರದ ಪುನರ್‌ರಚನೆಯನ್ನು ಸಾರ್ವಜನಿಕವಾಗಿಯೇ ಪ್ರಸ್ತಾಪಿಸಿದ್ದೆ.’’

ಕರಣ್ ಸಿಂಗ್ ಕಾಶ್ಮೀರದಲ್ಲಿ ರಾಜಕೀಯ ಸಂವಾದದ ಮುಂದುವರಿಕೆಯ ಮಹತ್ವವನ್ನೂ ಒತ್ತಿ ಹೇಳಿದ್ದಾರೆ: ‘‘ಎರಡು ಮುಖ್ಯ ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಿ ಬದಿಗೆ ತಳ್ಳಿಬಿಡುವುದು ಸರಿಯಲ್ಲ, ನ್ಯಾಯೋಚಿತವಲ್ಲ. ಆ ಪಕ್ಷಗಳ ಕಾರ್ಯಕರ್ತರು ದಶಕಗಳ ಕಾಲದಿಂದ ಭಾರೀ ತ್ಯಾಗಗಳನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ ಆ ಎರಡು ಪಕ್ಷಗಳು ಕೂಡ ರಾಷ್ಟ್ರೀಯ ಪಕ್ಷಗಳ ಮಿತ್ರಪಕ್ಷಗಳಾಗಿದ್ದ ಪಕ್ಷಗಳಾಗಿವೆ.’’

ಕರಣ್ ಸಿಂಗ್‌ರವರು ನ್ಯಾಯಬದ್ಧವಾದ ರಾಜಕೀಯ ಪಕ್ಷಗಳ ನಾಯಕರನ್ನು ಆದಷ್ಟು ಬೇಗನೆ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಅಲ್ಲದೆ ಆ ನಾಯಕರ ಜತೆ ವಿಶಾಲ ನೆಲೆಯಲ್ಲಿ ಒಂದು ರಾಜಕೀಯ ಸಂವಾದವನ್ನೂ ಆರಂಭಿಸಬೇಕು; ಇಂತಹ ಸಂವಾದ ಕಾಶ್ಮೀರದ ನಾಗರಿಕ ಸಮಾಜದೊಂದಿಗೂ ನಡೆಯಬೇಕು; ಇದೀಗ ಅಲ್ಲಿ ತೀವ್ರ ಸ್ವರೂಪದಲ್ಲಿ ಬದಲಾಗಿರುವ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಸಂವಾದ ನಡೆಸಬೇಕಾಗಿದೆ. ಎಂದು ಕರಣ್‌ಸಿಂಗ್ ಹೇಳಿದ್ದಾರೆ. 370ನೇ ವಿಧಿಯ ರದ್ದತಿ ಬಗ್ಗೆ ಕಾಂಗ್ರೆಸ್ ಪಕ್ಷದ ಇತರ ಕೆಲವು ನಾಯಕರಿಂದಲೂ ಭಿನ್ನ ಧ್ವನಿಗಳು ಕೇಳಿ ಬಂದಿವೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಚುನಾವಣಾ ಕ್ಷೇತ್ರವಾದ ರಾಯ್‌ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿಸಿಂಗ್ 370ನೇ ವಿಧಿಯ ರದ್ದತಿಯನ್ನು ಬೆಂಬಲಿಸಿ ಮಾತಾಡಿದ್ದಾರೆ. ಈ ವಿಧಿಯ ರದ್ದತಿಯು ಜಮ್ಮು ಕಾಶ್ಮೀರವನ್ನು ದೇಶದೊಂದಿಗೆ ಬೆಸೆಯುವ ರಾಷ್ಟ್ರೀಯ ಭಾವೈಕ್ಯಕ್ಕೆ ನೆರವಾಗುತ್ತದೆ ಎಂದಿರುವ ಅದಿತಿ ಸಿಂಗ್ ಇದೇನಿದ್ದರೂ ತನ್ನ ‘ವೈಯಕ್ತಿಕ’ ಅಭಿಪ್ರಾಯ ಎಂದಿದ್ದಾರಾದರೂ ಗಡಿ ರಾಜ್ಯದ ಜನತೆಯ ಧ್ವನಿಯನ್ನು ದಮನಿಸಲು ಪ್ರಯತ್ನಿಸುವುದರ ವಿರುದ್ಧ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅದಿತಿ ಸಿಂಗ್‌ರವರ ನಿಲುವು ರಾಹುಲ್ ಗಾಂಧಿಯವರ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂಬುದು. 370ನೇ ವಿಧಿ ರದ್ದಾದ ಒಂದು ದಿನದ ಬಳಿಕ ತನ್ನ ವೌನ ಮುರಿದಿದ್ದ ರಾಹುಲ್ ಗಾಂಧಿಯವರು ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಅದು ಅಸಾಂವಿಧಾನಿಕ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಅದಿತಿ ಸಿಂಗ್ ರವರ ತಂದೆ ಅಖಿಲೇಶ್ ಸಿಂಗ್ ರಾಯ್‌ಬರೇಲಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾದವರು. ಅದಿತಿ ಸಿಂಗ್ 2017ರ ಅಸೆಂಬ್ಲಿ ಚುನಾವಣೆಯಲ್ಲಿ 90,000ಕ್ಕೂ ಹೆಚ್ಚು ಮತಗಳ ಅಂತರದಿಂದ ರಾಯ್‌ಬರೇಲಿ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. ಇಷ್ಟು ಮಾತ್ರವಲ್ಲದೆ, ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿಯವರು ಚುನಾಯಿತರಾಗಿ ಗೆಲುವು ಸಾಧಿಸುವುದರಲ್ಲೂ ಅದಿತಿಸಿಂಗ್ ತುಂಬ ಮುಖ್ಯವಾದ ಪಾತ್ರವಹಿಸಿದ್ದರು.

ಕೃಪೆ: ನ್ಯೂ ಇಂಡಿಯ ಎಕ್ಸ್‌ಪ್ರೆಸ್. ಕಾಮ್ ಮತ್ತು ಡೆಕ್ಕನ್ ಹೆರಾಲ್ಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News