ಉಗ್ರರನ್ನು ಸೃಷ್ಟಿಸುವುದಕ್ಕಾಗಿಯೇ ಒಂದು ಕಾಯ್ದೆ

Update: 2019-08-11 18:35 GMT

ನಾಗರಿಕನೊಬ್ಬನನ್ನು ಉಗ್ರನೆಂದು ಗುರುತಿಸುವ ಮೂಲಕ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಿಲ್ಲ. ಕಾನೂನು ವ್ಯವಸ್ಥೆ, ಉಗ್ರವಾದಿಯೊಬ್ಬನನ್ನು ನಾಗರಿಕ ಸಮಾಜಕ್ಕೆ ಅರ್ಹನನ್ನಾಗಿಸುವ ಕೆಲಸವನ್ನು ಮಾಡಬೇಕು. ಓರ್ವನನ್ನು ಉಗ್ರನೆಂದೋ, ಭಯೋತ್ಪಾದಕನೆಂದೋ ಗುರುತಿಸಿ ಆತನ ವಿರುದ್ಧ ಕಠಿಣ ಕಾಯ್ದೆಗಳನ್ನು ಜಡಿದು ಸಮಾಜವನ್ನು ಶಾಂತಿಯ ಕಡೆಗೆ ಕೊಂಡೊಯ್ಯಬಹುದು ಎನ್ನುವುದು ಮೂರ್ಖತನದ ಪರಮಾವಧಿ. ನಾಗರಿಕ ಸಮಾಜದಲ್ಲಿ ನಮ್ಮ ನಿಮ್ಮಂತೆ ಬದುಕುವ ಓರ್ವನನ್ನು ಉಗ್ರವಾದಿಯೆಂದು ಗುರುತಿಸುವ ಮೊದಲು ಕಾನೂನು ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ನಮ್ಮ ನ್ಯಾಯ ವ್ಯವಸ್ಥೆ ‘ಸಾವಿರ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಆದರೆ ಒಬ್ಬ ನಿರಪರಾಧಿ ಶಿಕ್ಷಿಸಲ್ಪಡಬಾರದು’ ಎನ್ನುವ ತಳಹದಿಯ ಮೇಲೆ ನಿಂತಿದೆ. ನ್ಯಾಯಾಲಯ ಒಬ್ಬನನ್ನು ತಪ್ಪಿತಸ್ಥನೆಂದು ಘೋಷಿಸುವವರೆಗೆ ಆತ ಆರೋಪಿಯಷ್ಟೇ ಆಗಿರುತ್ತಾನೆ. ಇಂತಹ ಸಂದರ್ಭದಲ್ಲಿ, ಯಾವುದೇ ವಿಚಾರಣೆಯಿಲ್ಲದೆ ತನಿಖಾ ಸಂಸ್ಥೆಗಳೇ ಓರ್ವನನ್ನು ಉಗ್ರನೆಂದು ಘೋಷಿಸಿ ವಿಚಾರಣೆಗೊಳಪಡಿಸಿದರೆ? ಸದ್ಯ ಜಾರಿಗೆ ಬಂದಿರುವ ಭಯೋತ್ಪಾದನಾ ಚಟುವಟಿಕೆಗಳ (ಪ್ರತಿಬಂಧಕಾ) ತಿದ್ದುಪಡಿ ಕಾಯ್ದೆಯು, ಈ ದೇಶದ ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸದೆಯೇ ನಾಗರಿಕನೊಬ್ಬನನ್ನು ಉಗ್ರನಾಗಿ ಪರಿವರ್ತಿಸಲು ಪರವಾನಿಗೆಯನ್ನು ನೀಡಲು ಹೊರಟಿದೆ. ಈ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ನಾಗರಿಕರನ್ನು ಭಯೋತ್ಪಾದಕರೆಂದು ಘೋಷಿಸಬಹುದಾಗಿದೆ.

ಈ ಮೂಲಕ, ದೇಶದೊಳಗೆ ಉಗ್ರರ ದಮನದ ಬದಲಿಗೆ, ಉಗ್ರರ ಸಂಖ್ಯೆಯನ್ನು ಸರಕಾರ ಹೆಚ್ಚಿಸಲು ಮುಂದಾಗಿದೆ. ಮೂಲ ಯುಎಪಿಎ ಕಾಯ್ದೆಯು ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವ ಮತ್ತು ಆ ಸಂಘಟನೆಯ ಸದಸ್ಯರು ಮತ್ತು ಸಕ್ರಿಯ ಬೆಂಬಲಿಗರ ಮೇಲೆ ಕಾನೂನು ಕ್ರಮ ಜರುಗಿಸಲು ಬೇಕಾದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಕೊಡುತ್ತಿತ್ತು. ಹೀಗೆ ಘೋಷಿಸುವುದಕ್ಕೆ ಪೂರ್ವಭಾವಿಯಾಗಿ ಯಾವುದೇ ಪ್ರಕ್ರಿಯೆಗಳನ್ನು ಜರುಗಿಸಬೇಕಿಲ್ಲವಾದರೂ, ಸಂಘಟನೆ ಅಥವಾ ಸಂಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳ ಭಯೋತ್ಪಾದಕ ಪಟ್ಟಿಯನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಹಾಲಿ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಲಾಗುವ ಪುನರಾವಲೋಕನ ಸಮಿತಿಯ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಭಯೋತ್ಪಾದಕ ಚಟುವಟಿಕೆಗಳನ್ನು ವ್ಯಕ್ತಿಗಳು ನಡೆಸುತ್ತಾರೆಯೇ ವಿನಃ ಸಂಘಟನೆಗಳಲ್ಲ ಎಂದು ಸರಕಾರವು ರಾಜ್ಯಸಭೆಗೆ ತಿಳಿಸಿದೆ. ಹೀಗಾಗಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸದಿದ್ದರೆ ಅವರು ಕಾನೂನಿನಲ್ಲಿರುವ ಲೋಪಗಳನ್ನು ಬಳಸಿಕೊಂಡು ಮತ್ತೊಂದು ಸಂಘಟನೆಯನ್ನು ರಚಿಸಿಕೊಂಡು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ ಎಂದು ಕೂಡಾ ಸರಕಾರ ಹೇಳಿದೆ.

ಆದರೆ ಈ ತಿದ್ದುಪಡಿಯಾಗುವ ಮುಂಚೆಯೂ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದ ವ್ಯಕ್ತಿಗಳನ್ನು ಮತ್ತು ಅವರ ಸಕ್ರಿಯ ಬೆಂಬಲಿಗರನ್ನು ಶಿಕ್ಷಿಸುವ ಅವಕಾಶವಿತ್ತು. ಹೀಗಿರುವಾಗ ವಿಶೇಷವಾಗಿ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಘೋಷಿಸುವುದು ಯಾವ ಉದ್ದೇಶವನ್ನು ಈಡೇರಿಸಬಲ್ಲದೆನ್ನುವುದು ಪ್ರಶ್ನಾರ್ಹವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಬಿಡಿವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತದೆ. ಭಾರತವು ವಿಶ್ವಸಂಸ್ಥೆಯ ಸನ್ನದುಗಳಿಗೆ ಪಾಲುದಾರ ದೇಶನಾಗಿರುವುದರಿಂದ ನಮ್ಮ ದೇಶವೂ ಕೂಡಾ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವ ಕಾಯ್ದೆಯನ್ನು ಜಾರಿಗೆ ತರಲೇ ಬೇಕಿದೆಯೆಂಬುದು ಸರಕಾರವು ಕೊಡುತ್ತಿರುವ ಮತ್ತೊಂದು ಕಾರಣ. ಇದು ಒಂದು ಅರೆಬರೆ ಕಾರಣವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತಿರುವುದು ನಿಜವಾದರೂ, ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕರೆಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಏಕೆ ಕೊಡಲಾಗಿದೆಯೆಂಬುದನ್ನೇನೂ ಅದು ವಿವರಿಸುವುದಿಲ್ಲ.

ಇಲ್ಲಿ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸಲು ಆ ವ್ಯಕ್ತಿಯು ಯಾವುದಾದರೂ ಭಯೋತ್ಪಾದಕ ಕಾಯ್ದೆಯಡಿ ಶಿಕ್ಷೆಗೂ ಗುರಿಯಾಗಿರಬೇಕಿಲ್ಲ ಅಥವಾ ಅವನ ಮೇಲೆ ಭಯೋತ್ಪಾದಕ ಕಾಯ್ದೆಯಡಿ ವಿಚಾರಣೆಯೂ ನಡೆಯುತ್ತಿರಬೇಕಿಲ್ಲ. ಇದಷ್ಟೇ ಅಲ್ಲ, ಒಬ್ಬನನ್ನು ಭಯೋತ್ಪಾದಕನೆಂದು ಘೋಷಿಸಲು ಅಳವಡಿಸಲಾಗಿರುವ ಪ್ರಕ್ರಿಯೆಗಳು ಕೂಡ ಪ್ರಶ್ನಾರ್ಹವಾಗಿವೆ. ನಮ್ಮ ಸಂವಿಧಾನವು ಕೆಲವು ಮೂಲಭೂತ ಹಕ್ಕುಗಳನ್ನು ಈ ದೇಶದ ನಾಗರಿಕರಿಗೆ ನೀಡಿದೆ. ಈ ಕಾಯ್ದೆಯ ಮೂಲಕ, ಆ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಈಗಾಗಲೇ ಭಯೋತ್ಪಾದನೆಗಳ ಹುಸಿ ಆರೋಪಗಳ ಮೇಲೆ ಮುಸ್ಲಿಂ ಯುವಕರು ದಶಕಗಳಿಂದ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಕಾನೂನನ್ನು ಎಲ್ಲ ಉಗ್ರವಾದಿ ವ್ಯಕ್ತಿಗಳ ಮೇಲೂ ಬಳಸಲಾಗುತ್ತದೆ ಎಂದು ನಿರೀಕ್ಷಿಸಿದರೆ ತಪ್ಪಾಗುತ್ತದೆ. ವ್ಯಕ್ತಿಯೊಬ್ಬನನ್ನು ಉಗ್ರನೆಂದು ಕರೆಯಲು ಅತ್ಯಾತುರವಾಗಿರುವ ಸರಕಾರವೇ, ಸಂಜೋತಾ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಸ್ಫೋಟಗಳಲ್ಲಿ ಬಂಧಿತರಾಗಿರುವ ಕೇಸರಿ ಉಗ್ರರ ಪರವಾಗಿ ವಕಾಲತು ವಹಿಸುತ್ತದೆ. ಈ ದೇಶದ ಗೃಹ ಸಚಿವರೇ, ಅವರನ್ನು ಸಮರ್ಥಿಸಿ ಮಾತನಾಡುತ್ತಾರೆ. ಅಷ್ಟೇ ಅಲ್ಲ, ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟಗಳ ತನಿಖೆಯ ಸಂದರ್ಭದಲ್ಲಿ ಎನ್‌ಐಎ ಆರೋಪಗಳನ್ನು ಸಡಿಲಗೊಳಿಸಿದೆ. ಅವರ ಬಿಡುಗಡೆಗೆ ಪೂರಕವಾಗಿ ಕೆಲಸ ಮಾಡಿದ ಆರೋಪಗಳು ಕೇಳಿ ಬರುತ್ತಿವೆ. ಹಾಗಿದ್ದರೆ, ಸರಕಾರ ಈ ಕಾನೂನನ್ನು ಬಳಸಿ ಯಾರನ್ನು ಉಗ್ರರೆಂದು ಕರೆಯಲು ಅತ್ಯಾತುರವಾಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ.

ಈ ಕಾನೂನನ್ನು ಅನುಮೋದಿಸಲಾದ ಪರಿಯೂ ಅಷ್ಟೇ ಕಳವಳಕಾರಿಯಾಗಿದೆ. ಈ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ 8ಕ್ಕೆ ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್ 2ಕ್ಕೆ ಮಂಡಿಸಲಾಯಿತು. ಈ ಮಸೂದೆಯ ಬಗ್ಗೆ ಗಂಭೀರ ಪರಿಶೀಲನೆಯಾಗಲೀ, ಚರ್ಚೆಯಾಗಲೀ ನಡೆಯಲೇ ಇಲ್ಲ. ಲೋಕಸಭೆಯಲ್ಲಿ ತನಗಿರುವ ಬಹುಮತ ಹಾಗೂ ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷಗಳಿಂದ ಸಿಗುತ್ತಿರುವ ಬೆಂಬಲವನ್ನು ಆಧರಿಸಿ ಸಂಸತ್ತಿನಲ್ಲಿ ಒಂದಾದ ಮೇಲೊಂದರಂತೆ ಮಸೂದೆಗಳು ಅನುಮೋದನೆಗೊಳ್ಳುತ್ತಿರುವ ರೀತಿಯಲ್ಲೇ ಈ ಮಸೂದೆಯೂ ಅನುಮೋದಿಸಲ್ಪಟ್ಟಿತು. ಹೀಗಾಗಿ ಸಂಸತ್ತಿನ ಅನುಮೋದನೆ ಎಂಬುದು ಈಗ ಕೇವಲ ಒಂದು ಔಪಚಾರಿಕತೆಯಾಗಿಬಿಟ್ಟಿದೆ ಹಾಗೂ ಈ ಬಾರಿ ಸಂಸತ್ತು ಯಶಸ್ವಿಯಾಗಿ ನಡೆಯಿತು. ತನ್ನ ಉದ್ದೇಶವನ್ನು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧಿಸಿತು ಎಂಬ ಹೆಗ್ಗಳಿಕೆಗಳು ಈ ಪ್ರಕ್ರಿಯೆಗಳ ಅಗತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.

2019ರ ಚುನಾವಣಾ ಫಲಿತಾಂಶಗಳ ನಂತರ ದಿಕ್ಕೆಟ್ಟಿರುವ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಈ ಮಸೂದೆಯ ಬಗ್ಗೆ ಸಾಂಕೇತಿಕ ವಿರೋಧವನ್ನಷ್ಟೇ ವ್ಯಕ್ತಪಡಿಸಿದವು. ಇದು ಭಾರತದಲ್ಲಿ ಪ್ರಜಾತಂತ್ರವು ನಮ್ಮ ಊಹೆಗಿಂತ ಹೆಚ್ಚು ಹದಗೆಟ್ಟಿದೆಯೆಂಬುದನ್ನು ಸೂಚಿಸುತ್ತಿದೆ. ಒಂದಂತೂ ಸತ್ಯ. ಮೊತ್ತ ಮೊದಲು ಈ ಕಾನೂನನ್ನು ಬಳಸಿ, ಕಾಶ್ಮೀರದ ನಾಗರಿಕರನ್ನು ಉಗ್ರರೆಂದು ಕರೆದು ಜೈಲಿಗಟ್ಟುವ ಕೆಲಸ ಆರಂಭವಾಗುತ್ತದೆ. 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು, ಈ ಕಾನೂನನ್ನು ಅವಸರವಸರವಾಗಿ ಜಾರಿಗೊಳಿಸಿರುವುದರ ಗುರಿ ಇದೇ ಆಗಿದೆ. ಕಾಶ್ಮೀರದಲ್ಲಿ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿದವರೆಲ್ಲ ಉಗ್ರರಾಗಿ ಬಿಂಬಿತರಾಗುತ್ತಾರೆ. ಈ ಮೂಲಕ, ಇಡೀ ಕಾಶ್ಮೀರವನ್ನೇ ಸರಕಾರ ಉಗ್ರರ ನೆಲೆಯಾಗಿಸಲು ಹೊರಟಿದೆ. ಜೊತೆಗೆ ಕಾಶ್ಮೀರ ಸೇರಿದಂತೆ ದೇಶಾದ್ಯಂತ ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ಧ್ವನಿಯೆತ್ತಿದವರನ್ನು ಮಟ್ಟ ಹಾಕುವುದಕ್ಕೂ ಈ ಕಾನೂನನ್ನು ಸರಕಾರ ಯಾವುದೇ ಸಂಕೋಚವಿಲ್ಲದೆ ಬಳಸುತ್ತದೆ. ಒಟ್ಟಿನಲ್ಲಿ, ಈ ಕಾಯ್ದೆ ದೇಶದಲ್ಲಿ ಉಗ್ರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆಯೇ ಹೊರತು, ಇಳಿಸುವ ಗುರಿಯನ್ನಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News