ಎನ್‌ಆರ್‌ಸಿ: ಮರುದೃಢೀಕರಣ ಪುನರಾರಂಭ ಕೋರಿದ್ದ ಕೇಂದ್ರದ ಅರ್ಜಿಗೆ ಸುಪ್ರೀಂ ತಿರಸ್ಕಾರ

Update: 2019-08-13 18:06 GMT

ಹೊಸದಿಲ್ಲಿ, ಆ.13: ಮಾದರಿ ದೃಢೀಕರಣಕ್ಕಾಗಿ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯ ಪುನರಾರಂಭಕ್ಕೆ ಅನುಮತಿ ಕೋರಿ ಕೇಂದ್ರ ಮತ್ತು ಅಸ್ಸಾಂ ರಾಜ್ಯ ಸರಕಾರಗಳು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ. ವಿಶೇಷವಾಗಿ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಎನ್‌ಆರ್‌ಸಿಯಲ್ಲಿ ತಪ್ಪಾಗಿ ಸೇರ್ಪಡೆಯಾಗಿರುವ ಮತ್ತು ಬಿಟ್ಟುಹೋಗಿರುವ ಹೆಸರುಗಳನ್ನು ಪತ್ತೆಹಚ್ಚಲು ಮರು ದೃಢೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಅನುಮತಿಯನ್ನು ಕೋರಿದ್ದವು.

 2004,ಡಿ.3ರ ನಂತರ ಜನಿಸಿರುವವರ ಹೆತ್ತವರ ಪೈಕಿ ಯಾರೇ ಆದರೂ ಶಂಕಾಸ್ಪದ ಮತದಾರರಾಗಿದ್ದರೆ ಅಥವಾ ನ್ಯಾಯಾಧಿಕರಣದಿಂದ ವಿದೇಶಿ ಎಂದು ಘೋಷಿಸಲ್ಪಟ್ಟಿದ್ದರೆ ಅಥವಾ ಮೇಲ್ಮನವಿಯನ್ನು ಸಲ್ಲಿಸಿದ್ದರೆ ಅಂತಹವರ ಹೆಸರುಗಳನ್ನು ಎನ್‌ಆರ್‌ಸಿಯಲ್ಲಿ ಸೇರಿಸುವಂತಿಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯಿ ಮತ್ತು ನ್ಯಾ.ಆರ್.ಎಫ್.ನರಿಮನ್ ಅವರನ್ನೊಳಗೊಂಡ ಪೀಠವು ಹೇಳಿದೆ. ಅಂತಿಮ ಅಸ್ಸಾಂ ಎನ್‌ಆರ್‌ಸಿಯಿಂದ ಹೆಸರುಗಳನ್ನು ತೆಗೆಯಲಾಗಿರುವವರ ಪಟ್ಟಿಯನ್ನು ಆ.31ರಂದು ಕೇವಲ ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು ಎಂದು ಅದು ಅತ್ಯಂತ ಸ್ಪಷ್ಟವಾಗಿ ತಿಳಿಸಿದೆ.

ಸೇರ್ಪಡೆಗೊಂಡಿರುವ ಹೆಸರುಗಳ ಪೂರಕ ಪಟ್ಟಿಯ ಮುದ್ರಿತ ಪ್ರತಿಗಳನ್ನು ಸಂಬಂಧಿಸಿದ ಜಿಲ್ಲಾ ಅಧಿಕಾರಿಗಳಿಗೆ ಒದಗಿಸಬೇಕು ಮತ್ತು ಅಕ್ರಮ ವಲಸಿಗರ (ನ್ಯಾಯಾಧಿಕರಣಗಳಿಂದ ನಿರ್ಣಯ) ಕಾಯ್ದೆಯಡಿ ಆದೇಶಗಳನ್ನು ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ಪೀಠವು ಎತ್ತಿ ಹಿಡಿದಿದೆ.

ಆಧಾರ್ ದತ್ತಾಂಶದಂತೆ ಅಸ್ಸಾಂ ಎನ್‌ಆರ್‌ಸಿ ದತ್ತಾಂಶಗಳ ಸುರಕ್ಷತೆಗಾಗಿ ಸೂಕ್ತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಎನ್‌ಆರ್‌ಸಿಗಾಗಿ ನಡೆಸಲಾದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಸ್ಸಾಂ ವಿಧಾನಸಭೆಯಲ್ಲಿ ಮತ್ತು ಹೊರಗೆ ಮಾಡಲಾದ ಟೀಕೆಗಳನ್ನು ತಳ್ಳಿಹಾಕಿದ ಮು.ನ್ಯಾ.ಗೊಗೊಯಿ ಅವರು ‘ ನಮ್ಮ ಆದೇಶಗಳು ಮತ್ತು ತೀರ್ಪುಗಳ ಬಗ್ಗೆ ಯಾರೇನು ಹೇಳುತ್ತಾರೆ ಎಂಬ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಗದಿಯಂತೆ ಎನ್‌ಆರ್‌ಸಿ ಅಂತಿಮಗೊಳ್ಳುವುದರ ಮೇಲೆ ನಮ್ಮ ನಿಗಾವನ್ನು ನಾವು ಮುಂದುವರಿಸುತ್ತೇವೆ ’ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಮತ್ತು ಅಂತಿಮ ಎನ್‌ಆರ್‌ಸಿ ಆ.31ರೊಳಗೆ ಸಿದ್ಧವಾಗಬೇಕು ಅಥವಾ ಅದಕ್ಕೂ ಮೊದಲು ಅದನ್ನು ಸಲ್ಲಿಸಬಹುದು,ಆದರೆ ಆ.31ರ ನಂತರವಲ್ಲ ಎಂದು ಪೀಠವು ಪುನರುಚ್ಚರಿಸಿತು.

ಜು.23ರಂದು ಶೇ.20ರಷ್ಟು ಮಾದರಿ ಮರುದೃಢೀಕರಣಕ್ಕೆ ಅನುಮತಿಯನ್ನು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅಂತಿಮ ಎನ್‌ಆರ್‌ಸಿಗೆ ಗಡುವನ್ನು ಆ.31ಕ್ಕೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News