ನಾಳೆ ಅಭಿನಂದನ್ ವರ್ಧಮಾನ್ ಗೆ ವೀರ್ ಚಕ್ರ ಪ್ರದಾನ

Update: 2019-08-14 18:59 GMT

 ಹೊಸದಿಲ್ಲಿ, ಆ. 14: ಬಾಲಕೋಟ್ ದಾಳಿಯ ಬಳಿಕ ಭಾರತದ ವಾಯು ಪಡೆ ಹಾಗೂ ಪಾಕಿಸ್ತಾನದ ವಾಯುಪಡೆ ನಡುವೆ ಪೆಬ್ರವರಿ 27ರಂದು ನಡೆದ ವೈಮಾನಿಕ ಘರ್ಷಣೆ ಸಂದರ್ಭ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಭಾರತದ ಮೂರನೇ ಅತ್ಯುಚ್ಛ ಯುದ್ಧಕಾಲದ ಪದಕ ವೀರಚಕ್ರವನ್ನು ಸ್ವಾತಂತ್ರ ದಿನಾಚರಣೆಯಂದು ಪ್ರಧಾನ ಮಾಡಲಾಗುವುದು.

2018 ನವೆಂಬರ್‌ನಲ್ಲಿ ಕುಲ್ಗಾಂವ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಪ್ರಕಾಶ್ ಜಾಧವ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಡೆಪ್ಯುಟಿ ಕಮಾಂಡೆಂಟ್ ಹರ್ಷಪಾಲ್ ಸಿಂಗ್ ಅವರಿಗೆ ಕೀರ್ತಿ ಚಕ್ರ ಪ್ರದಾನಿಸಲಾಗುವುದು. ಇತರ 14 ಸಿಬ್ಬಂದಿಗೆ ಶೌರ್ಯಚಕ್ರ ಪ್ರಧಾನ ಮಾಡಲಾಗುವುದು. ಫೆಬ್ರವರಿ 27ರ ವೈಮಾನಿಕ ಘರ್ಷಣೆಯ ಸಂದರ್ಭ ಯುದ್ಧ ವಿಮಾನ ನಿಯಂತ್ರಕನ ಪಾತ್ರ ನಿರ್ವಹಿಸಿದ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆಯ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೆ ‘ಯುದ್ಧ ಸೇವಾ ಪದಕ’ ಪ್ರಧಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಐವರು ಪೈಲೆಟ್‌ಗಳಿಗೆ ವಾಯು ಸೇನಾ ಪದಕ

ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಫೆಬ್ರವರಿ 26ರಂದು ಬಾಲಕೋಟದಲ್ಲಿರುವ ಜೈಶ್ ಎ ಮುಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಭಾರತೀಯ ವಾಯು ಪಡೆಯ ಐವರು ಪೈಲೆಟ್‌ಗಳಿಗೆ ವಾಯು ಸೇನಾ ಪದಕ ನೀಡಲಾಗುತ್ತಿದೆ. ಭಾರತೀಯ ವಾಯು ಪಡೆಯ ಐವರು ಪೈಲೆಟ್‌ಗಳಾದ ವಿಂಗ್ ಕಮಾಂಡರ್ ಅಮಿತ್ ರಂಜನ್, ಸ್ಕ್ವಾಡ್ರನ್ ಲೀಡರ್ ರಾಹುಲ್ ಬಸೊಯಾ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಹಾಗೂ ಶಶಾಂಕ್ ಸಿಂಗ್ ಅವರಿಗೆ ವಾಯು ಸೇನಾ ಪದಕ (ಶೌರ್ಯ ಪ್ರಶಸ್ತಿ) ನೀಡಲಾಗುತ್ತಿದೆ. ಭಾರತೀಯ ವಾಯು ಪಡೆಯ ಈ ಎಲ್ಲರೂ ಮಿರಾಜ್-2000 ಯುದ್ಧ ವಿಮಾನದ ಪೈಲೆಟ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News