ಯುವ ಜನತೆಗೆ ಸ್ವಾತಂತ್ರ್ಯ ಹೋರಾಟದ ಅರಿವೇ ಇಲ್ಲ: ಸ್ವಾತಂತ್ರ್ಯ ಹೋರಾಟಗಾರ ಬಿ.ಶ್ರೀಕಂಠಯ್ಯ ಬೇಸರ

Update: 2019-08-15 05:13 GMT

ರಾಜ್ಯದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಹಿಂದೆ ವರ್ಷಕ್ಕೊಮ್ಮೆ ರಾಜಭವನಕ್ಕೆ ಕರೆದು ಚಹಾ ಕೂಟ ಏರ್ಪಡಿಸಿ ಗೌರವ ಕೊಡುತ್ತಿದ್ದರು. ಆದರೆ ಈಗ ಬೇಕಾದವರನ್ನು ಮಾತ್ರ ಆಹ್ವಾನಿಸಿ ಔತಣ ಕೊಡುತ್ತಿದ್ದಾರೆ ಎಂದು ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರ 91 ವರ್ಷ ಪ್ರಾಯದ ಬಿ.ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿನ ಹೋರಾಟಕ್ಕು ಈಗಿನ ಹೋರಾಟಕ್ಕೂ ಬಹಳ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಬಹಳ ಗೌರವಿತ್ತು. ಈಗಿನವರಿಗೆ ಅದರ ಅರಿವೇ ಇಲ್ಲ, ಹಿಂದೆ ರಾಜ್ಯ ಸರಕಾರ ನಮ್ಮನ್ನು ವರ್ಷಕ್ಕೊಮ್ಮೆ ರಾಜಭವನಕ್ಕೆ ಕರೆದು ರಾಜ್ಯಪಾಲರ ನೇತೃತ್ವದಲ್ಲಿ ಚಹ ಕೂಟ ಏರ್ಪಡಿಸಿ ಔತಣ ಕೂಟ ಕೊಟ್ಟು ಗೌರವಿಸುತ್ತಿದ್ದರೂ, ಬರುಬರುತ್ತು ಅದನ್ನು ಕಡೆಗಣಿಸಿದ್ದಾರೆ ಎಂದರು.

ಮೈಸೂರು ಜಿಲ್ಲೆ ನಂಜನ ಗೂಡು ನಗರದ ವಾಸಿಯಾದ ಇವರು 15.07.1929 ರಲ್ಲಿ ಜನಿಸಿದರು. ಸ್ವಾತಂತ್ರ್ಯೋತ್ಸವದ ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ಗಾಂಧೀಜಿಯವರನ್ನು ಹತ್ತಿರದಿಂದ ಕಂಡವರು. ಸ್ವಾತಂತ್ರ್ಯಕ್ಕಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಕೆಚ್ಚೆದೆಯಿಂದ ಹೋರಾಟ ಮಾಡಿದ್ದೇವೆ. ನಮ್ಮಲ್ಲಿ ಪ್ರಾಮಾಣಿಕತೆ, ಬದ್ದತೆ ಇತ್ತು.ನಾವು ಹೋರಾಟ ಮಾಡುತ್ತೇವೆ ಎಂದರೆ ಆಗಿನ ಬ್ರಿಟಿಷರ ಆಡಳಿತದಲ್ಲಿದ್ದ ಅಧಿಕಾರಿಗಳು ಭಯಭೀಳುತ್ತಿದ್ದರು. 1947 ರಲ್ಲಿ ಒಮ್ಮೆ ಒಂದು ತಿಂಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದೇನೆ ಎಂದರು.

► ಸ್ವಾತಂತ್ರ್ಯ ಬರುವುದಕ್ಕು ಮುಂಚೆ ಭಾರತ ಹೇಗಿತ್ತು?
ಸರಕಾರಿ ಅಧಿಕಾರಿಗಳ ಆಡಳಿತ, ಅಧಿಕಾರಿಗಳದ್ದೇ ದರ್ಬಾರು, ನಾವು ಯಾರನ್ನೂ ನಮ್ಮ ಕೆಲಸ ಮಾಡಿಕೊಡಿ ಎಂದು ಕೇಳುವಂತಿಲ್ಲ, ಅವರು ಏನು ಮಾಡುತ್ತಾರೆ ಅದನ್ನು ಒಪ್ಪಿಕೊಳ್ಳಬೇಕಿತ್ತು. ಆ ಸಂದರ್ಭದಲ್ಲಿ ನಾವು ಬೀದಿ ಬೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡಿಕೊಂಡು ಜನರನ್ನು ಸಂಘಟಿಸುವ ಪ್ರಯತ್ನವನ್ನು ಮಾಡುತ್ತಿದ್ದೆವು. ನಮಗೆ ಸ್ಥಳೀಯ ಆಡಳಿತ ಮಂಡಳಿ ಅಧಿಕಾರದಲ್ಲಿದ್ದರೂ ಅಧಿಕಾರಿಗಳೇ ನಿರ್ವಹಣೆ ಮಾಡುತ್ತಿದ್ದರು. ಆಗ ಎಲ್ಲರಿಗೂ ಮತದಾನದ ಹಕ್ಕು ಇರಲಿಲ್ಲ, ಕಂದಾಯ ಕಟ್ಟುವವರಿಗೆ ಮಾತ್ರ ಮತದಾನದ ಹಕ್ಕಿತ್ತು.

►ಆಗಿನ ಹೋರಾಟಕ್ಕೂ ಈಗಿನ ಹೋರಾಟಕ್ಕೂ ಏನು ವ್ಯತ್ಯಾಸ?
ಆಗಿನ ಹೋರಾಟ ಎಂದರೆ ಪ್ರಾಮಾಣಿಕತೆ ಬದ್ಧತೆ ಇತ್ತು. ನಮ್ಮಲ್ಲಿ ಯಾರು ನಾಯಕತ್ವ ವಹಿಸಿಕೊಳ್ಳುತ್ತಾರೊ ಅವರು ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತಾಸಕ್ತಿಗನುಗುಣವಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ನಾಯಕತ್ವ ವಹಿಸಿರುವ ವ್ಯಕ್ತಿ ಕರೆ ನೀಡಿದರೆ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕಿಳಿಯುತ್ತಿದ್ದೆವು. ಆದರೆ ಈಗಿನ ಹೋರಾಟ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ. ಹೋರಾಟ ಎಂದರೆ ಒಂದು ರೀತಿಯಲ್ಲಿ ವ್ಯವಹಾರವಾಗಿದೆ.

►ಸ್ವಾತಂತ್ರ್ಯ ಹೋರಾಟಗಾರರನ್ನು ಸರಕಾರ ಹೇಗೆ ಗೌರವಿಸುತ್ತಿದೆ? 
ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಹಿಂದೆ ಬಹಳ ಗೌರವಿತ್ತು. ನಮ್ಮನ್ನು ಯಾವುದೇ ಸರಕಾರಿ ಸಭೆ ಸಮಾರಂಭಗಳಿಗೆ ಆಹ್ವಾನಿಸುತ್ತಿದ್ದರು. ನಾವು ಬಂದು ಹೋಗುವವರೆಗೂ ನಮ್ಮನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಆಗಾಗ್ಗೆ ದೇಶದ ರಾಷ್ಟ್ರಪತಿಗಳ ಬಳಿಗೆ ಕರೆದುಕೊಂಡು ಹೋಗಿ ಚಹ ಕೂಟ ಏರ್ಪಡಿಸಿ ಗೌರವಿಸುತ್ತಿದ್ದರು. ಪ್ರತಿ ವರ್ಷ ರಾಜಭವನಕ್ಕೆ ಕರೆದು ಚಹ ಕೂಟ ಏರ್ಪಡಿಸಿ ರಾಜ್ಯದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆದು ಗೌರವ ನೀಡುತ್ತಿದ್ದರು, ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅದು ಸಹ ನಿಂತುಹೋಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಮಗೆ ನೀಡುವ ಗೌರವ ಧನವನ್ನು ಹೆಚ್ಚಳ ಮಾಡಲಾಯಿತು. ನಮ್ಮನ್ನು ಗುರುತಿಸುವ ವೇಳೆ ಮೂರು ತಿಂಗಳ ಒಳಗೆ ಜೈಲುವಾಸ ಅನುಭವಿಸಿರುವವರಿಗೆ ರಾಜ್ಯ ಸರಕಾರದ ಗೌರವ ಧನ, ಆರು ತಿಂಗಳು ಜೈಲು ವಾಸ ಅನುಭವಿಸಿರುವವರಿಗೆ ಕೇಂದ್ರ ಸರಕಾರದ ಗೌರವ ಧನ ಎಂದು ವಿಂಗಡಣೆ ಮಾಡಿ ನೀಡಲಾಗುತ್ತಿದೆ.

►ನೀವು ಗಾಂಧೀಜಿಯವರನ್ನು ಹತ್ತಿರದಿಂದ ಕಂಡೀದ್ದೀರ?

ನಾನು ಇನ್ನೂ ಸಣ್ಣ ಹುಡುಗ. 1934-35 ರಲ್ಲಿ ನಂಜನಗೂಡಿಗೆ ಪ್ರಥಮ ಬಾರಿಗೆ ಬಂದಿದ್ದರು. ನಮ್ಮ ಅಣ್ಣ ಎನ್.ರಾಚಯ್ಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಜೊತೆ ಅಲ್ಲಲ್ಲಿ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದೆ. ಆಗ ನಮಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮೊದಲಿಯರ್ ರಾಮಸ್ವಾಮಿ ಮತ್ತು ಅವರ ಪತ್ನಿ ಹೇಳುತಿದ್ದರು. ನಾಗಮ್ಮ ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬಂದು ಭಾಷಣೆ ಮಾಡಿದರು. ನಂತರ ಬದನವಾಳು ಗ್ರಾಮಕ್ಕೆ ತೆರಳಿದರು. ಅಲ್ಲಿಂದ ತಗಡೂರು ರಾಮಚಂದ್ರರಾಯರ ಬಳಿಗೆ ಹೋಗಿದ್ದರು. ಆ ಸಮಯದಲ್ಲಿ ನೋಡಿದ್ದೆ. ನಂತರ 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಾದ ಸಂದರ್ಭದಲ್ಲಿ ನಾನು ಹೋಗಿದ್ದೆ. ಆಗ ಅವರ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶ ಲಭಿಸಿತ್ತು.

►ಸ್ವಾತಂತ್ರ್ಯಹೋರಾಟಗಾರರೆಲ್ಲ ಎಲ್ಲಿ ಸೇರುತ್ತಿದ್ದಿರಿ?

ನಾವು ಮೈಸೂರಿನ ಟೌನ್ ಹಾಲ್‌ನಲ್ಲಿ ಎಲ್ಲರೂ ಸೇರಿ ಹೋರಾಟದ ರೂಪು ರೇಷೆಗಳನ್ನು ತಯಾರು ಮಾಡುತ್ತಿದ್ದೆವು. ನಂಜನಗೂಡಿನಿಂದ ನಾವು ಸುಮಾರು 150 ರಿಂದ 160 ಮಂದಿ ಹೋರಾಟಗಾರರಿದ್ದೆವು. ಬಹಳ ಕೆಚ್ಚೆದೆಯಿಂದು ಯಾವುದಕ್ಕೂ ಹೆದರದೆ ಹೋರಾಟ ಮಾಡುತ್ತಿದ್ದೆವು. ನಾವು ಮೈಸೂರಿನಲ್ಲಿ ಸಭೆ ಸೇರಿದೆವು ಎಂದರೆ ಏನೋ ನಡೆಯುತ್ತಿದೆ ಎಂದು ಅಧಿಕಾರಿಗಳು ಭಯಬೀಳುತ್ತಿದ್ದರು. ಹೌದು 1947 ರಲ್ಲಿ ಸ್ವಾತಂತ್ರ್ಯ ಬಂದರೂ ಮೈಸೂರು ಪ್ರಾಂತ್ಯದಲ್ಲಿ ಇನ್ನೂ ಸ್ವಾತಂತ್ರ್ಯ ಲಭಿಸಿರಲಿಲ್ಲ, ಆರ್ಕಾಟ್ ರಾಮಸ್ವಾಮಿಯವರದೇ ದರ್ಬಾರು ಆಗಿತ್ತು. ಆಗ ಮೈಸೂರು ಸೇರಿದಂತೆ ಎಲ್ಲಾ ಕಡೆಗಳಲ್ಲು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು, ಆ ಸಂದರ್ಭದಲ್ಲಿ ನಂಜನಗೂಡಿನ ತಾಲೂಕು ಆಫೀಸ್ ಮುಂಭಾಗ ಎಸ್.ನಾರಾಯಣರಾಯರು, ಕೆ.ವಿ.ಗೌಡರು, ಹೆಜ್ಜಿಗೆ ಲಿಂಗಣ್ಣ, ಎಚ್.ಮಾದಪ್ಪ, ಸೇರಿದಂತೆ ಹಲವಾರು ಮಂದಿ ಹೋರಾಟ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ನಮ್ಮನ್ನು ಬಂಧಿಸಿ ಮೈಸೂರು ಕಾರಾಗೃಹದಲ್ಲಿ ಒಂದು ತಿಂಗಲ ಕಾಲ ಇರಿಸಲಾಗಿತ್ತು.

► ಸ್ವಾತಂತ್ರ್ಯ ನಂತರ ಭಾರತ ಹೇಗಿದೆ?

ಈಗಿನ ಆಡಳಿತ ಕಂಡರೆ ಬೇಸರವಾಗುತ್ತಿದೆ. ಈ ಹಿಂದೆ ಜವಹಾರ್‌ಲಾಲ್ ನೆಹರು, ಇಂದಿರಾ ಗಾಂಧಿ ಸಾಮಾನ್ಯರ ಏಳಿಗೆಗಾಗಿ ಕಂಕಣ ಬದ್ಧರಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ದುಡ್ಡಿರುವವರಿಗೆ ಒಂದು ಇಲ್ಲದಿರುವವರಿಗೆ ಒಂದು ಎಂಬಂತಾಗಿದೆ. ನಾನು 20 ವರ್ಷ ಪುರಸಭಾ ಸದಸ್ಯನಾಗಿ ಉಪಾಧ್ಯಕ್ಷನಾಗಿ ಆಡಳಿತ ನಡೆಸಿದ್ದೇನೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಧರ್ಮದರ್ಶಿಯಾಗಿದ್ದೆ. ಆದರೆ ಈಗ ಚುನಾವಣೆ ಎಂದರೆ ಕಷ್ಟವಾಗುತ್ತಿದೆ.

Writer - ನೇರಳೆ ಸತೀಶ್‌ ಕುಮಾರ್

contributor

Editor - ನೇರಳೆ ಸತೀಶ್‌ ಕುಮಾರ್

contributor

Similar News