ರಾಷ್ಟ್ರದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹರಣ

Update: 2019-08-15 05:25 GMT

ಹೊಸದಿಲ್ಲಿ: ದೇಶದ ಎಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

ಬಿಗಿಭದ್ರತೆಯಲ್ಲಿ ಕೆಂಪುಕೋಟೆಗೆ ಆಗಮಿಸಿದ ಮೋದಿ, ಮೊದಲಿಗೆ ಯೋಧರಿಂದ ಗೌರವ ವಂದನೆ ಸ್ವೀಕರಿಸಿದರು. ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಮಂದಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮೋದಿ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರದ ಜನತೆಗೆ ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾಬಂಧನದ ಶುಭ ಹಾರೈಸಿ ಮೋದಿ ಭಾಷಣ ಆರಂಭಿಸಿದರು. ಸ್ವಾತಂತ್ರ್ಯ ಯೋಧರ ತ್ಯಾಗ- ಬಲಿದಾನಗಳನ್ನು ಸ್ಮರಿಸಿಕೊಂಡರು.

ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಕೇವಲ ಹತ್ತು ವಾರದ ಅವಧಿಯಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವುದಾಗಿ ಘೋಷಿಸಿದ ಅವರು, ಸರ್ದಾರ್ ಪಟೇಲ್ ಅವರ ಕನಸು ನನಸುಗೊಳಿಸುವ ಸಲುವಾಗಿ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿ ರದ್ದುಪಡಿಸಿರುವುದಾಗಿ ಘೋಷಿಸಿದರು.

2019-2024ರ ಅವಧಿ ದೇಶದ ಜನತೆಯ ನಿರೀಕ್ಷೆಗಳನ್ನು ಈಡೇರಿಸುವ ಸಮಯ ಎಂದು ಬಣ್ಣಿಸಿದರು. ಮುಸ್ಲಿಂ ಮಹಿಳೆಯರ ಸಂಕಷ್ಟವನ್ನು ಕಂಡು ತ್ರಿವಳಿ ತಲಾಖ್ ರದ್ದು ಮಾಡಿದ್ದಾಗಿ ಸಮರ್ಥಿಸಿಕೊಂಡರು. ಸತಿಪದ್ಧತಿ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆಯಂಥ ಪಿಡುಗುಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ತ್ರಿವಳಿ ತಲಾಖ್ ಬಗ್ಗೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದರು.

ಕಣಿವೆ ರಾಜ್ಯದಲ್ಲಿ ಅನಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಒಂದು ದೇಶಕ್ಕೆ ಒಂದೇ ಸಂವಿಧಾನ ಎಂಬ ಆಶಯವನ್ನು ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು. ರಾಜಕೀಯ ಬರುತ್ತದೆ ಹೋಗುತ್ತದೆ; ಆದರೆ ದೇಶದ ಹಿತಾಸಕ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News