ಮೂರು ಸೇನೆಗಳ ಸಮನ್ವಯತೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ(ಸಿಡಿಎಸ್) ನೇಮಕ: ಪ್ರಧಾನಿ ಮೋದಿ

Update: 2019-08-15 15:46 GMT

ಹೊಸದಿಲ್ಲಿ, ಆ.15: ದೇಶದ ಮೂರೂ ಸೇನಾಪಡೆಗಳ ಮಧ್ಯೆ ಸಂವಹನ, ಸಮನ್ವಯತೆ ಸಾಧಿಸಲು ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಮುಖ್ಯ ಸೇನಾಧಿಕಾರಿ) ನೇಮಕಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಮುಖ್ಯ ಸೇನಾಧಿಕಾರಿ ಮೂರೂ ಸೇನಾಪಡೆಗಳ ಮಧ್ಯೆ ಸಹಕ್ರಿಯತೆಯನ್ನು ಖಾತರಿಪಡಿಸುವ ಜೊತೆಗೆ ಭದ್ರತೆಗೆ ಎದುರಾಗುವ ಸವಾಲನ್ನು ಪರಿಹರಿಸುವಲ್ಲಿ ಸಶಸ್ತ್ರ ಪಡೆಗಳಿಗೆ ಪರಿಣಾಮಕಾರಿ ನಾಯಕತ್ವ ಒದಗಿಸುತ್ತಾರೆ. ಇದರಿಂದ ದೇಶದ ರಕ್ಷಣಾ ಪಡೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

1999ರ ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಸಿಡಿಎಸ್ ನೇಮಕಕ್ಕೆ ಶಿಫಾರಸು ಮಾಡಲಾಗಿತ್ತು. ಮುಖ್ಯ ಸೇನಾಧಿಕಾರಿ ಭೂಸೇನೆ, ನೌಕಾಸೇನೆ ಹಾಗೂ ವಾಯುದಳದ ಮುಖ್ಯಸ್ಥರಿಗಿಂತ ಹಿರಿಯ ಅಧಿಕಾರಿಯಾಗಿರುತ್ತಾರೆ. ರಕ್ಷಣೆ ಹಾಗೂ ವ್ಯೂಹಾತ್ಮಕ ವಿಷಯಗಳಿಗೆ ಸಂಬಂಧಿಸಿ ಇವರು ಪ್ರಧಾನಿಗೆ ಹಾಗೂ ರಕ್ಷಣಾ ಸಚಿವರಿಗೆ ಸಲಹೆ ನೀಡುವ ಏಕೈಕ ಸಲಹೆಗಾರರಾಗಿರುತ್ತಾರೆ. ದೇಶದ ಭದ್ರತೆಗೆ ಕೈಗೊಳ್ಳಬೇಕಾದ ಸಮಗ್ರ ವಿಧಾನ ರೂಪಿಸುವುದು ಹಾಗೂ ಮೂರೂ ಪಡೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಮನ್ವಯತೆ ಸಾಧಿಸುವುದು ಇವರ ಮುಖ್ಯ ಕರ್ತವ್ಯವಾಗಿರುತ್ತದೆ. ಮುಖ್ಯ ಸೇನಾಧಿಕಾರಿ ದೇಶದ ಭದ್ರತೆಯ ವಿಷಯದಲ್ಲಿ ದೀರ್ಘಾವಧಿಯ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಪಡೆಗಳ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ಮೂರೂ ರಕ್ಷಣಾ ಪಡೆಗಳ ಮಧ್ಯೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಅತ್ಯಗತ್ಯದ ಸುಧಾರಣೆ ಇದಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News