ಕ್ರಿಕೆಟ್ ಚೆಂಡು ಬಡಿದು ಮೃತಪಟ್ಟ ಅಂಪೈರ್

Update: 2019-08-15 17:54 GMT

ಲಂಡನ್, ಆ.15: ಗಂಭೀರ ಗಾಯಗೊಂಡಿದ್ದ ಹಿರಿಯ ಕ್ರಿಕೆಟ್ ಅಂಪೈರ್ ಜಾನ್ ವಿಲಿಯಮ್ಸ್(80 ವರ್ಷ) ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳು ವೇಲ್ಸ್‌ನಲ್ಲಿ ಪೆಂಬ್ರೊಕ್ ಹಾಗೂ ನರ್ಬರ್ತ್ ನಡುವೆ ನಡೆದಿದ್ದ ಡಿವಿಜನ್-2 ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಲಿಯಮ್ಸ್ ತಲೆಗೆ ಚೆಂಡು ಬಡಿದು ಗಂಭೀರ ಗಾಯವಾಗಿತ್ತು.

 ‘‘ಅಂಪೈರ್ ಜಾನ್ ವಿಲಿಯಮ್ಸ್‌ಗೆ ಸಂಬಂಧಿಸಿ ಇಂದು ಬೆಳಗ್ಗೆ ದುಃಖದ ಸುದ್ದಿ ಲಭಿಸಿದೆ. ಜಾನ್ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದು, ಈ ಸಂದರ್ಭದಲ್ಲಿ ಕುಟುಂಬಿಕರು ಅವರ ಬಳಿ ಇದ್ದರು’’ ಎಂದು ಪೆಂಬ್ರೊಕ್‌ಶೈರ್ ಕ್ರಿಕೆಟ್ ಪ್ರಕಟನೆಯಲ್ಲಿ ತಿಳಿಸಿದೆ.

   ಜು.13ರಂದು ನಡೆದ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಪೈರ್ ವಿಲಿಯಮ್ಸ್ ತಲೆಗೆ ಚೆಂಡು ಬಡಿದ ಘಟನೆ ನಡೆದ ತಕ್ಷಣ ಆ ಪಂದ್ಯವನ್ನು ರದ್ದುಪಡಿಸಲಾಗಿತ್ತು. ಗಾಯಗೊಂಡಿದ್ದ ಅಂಪೈರ್‌ಗೆ ಆರಂಭದಲ್ಲಿ ಕಾರ್ಡಿಫ್‌ನಲ್ಲಿರುವ ವೇಲ್ಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಗಸ್ಟ್ 2 ರಂದು ಕಾರ್ಡಿಫ್‌ನಿಂದ ವಿಥಿಬುಶ್ ಆಸ್ಪತ್ರೆಗೆ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News