“ಇದು ಯಾವ ರೀತಿಯ ಅಪೀಲು?”: 370ನೇ ವಿಧಿ ರದ್ದತಿ ಕುರಿತ ಅರ್ಜಿಯ ಬಗ್ಗೆ ಸಿಜೆಐ ಪ್ರಶ್ನೆ

Update: 2019-08-16 08:25 GMT

ಹೊಸದಿಲ್ಲಿ, ಆ.16: “ಇದು ಯಾವ ರೀತಿಯ ಅಪೀಲು ?, ನೀವು ಯಾವುದರ ವಿರುದ್ಧ ಅಪೀಲು ಸಲ್ಲಿಸಿದ್ದೀರಿ ?, ನಿಮ್ಮ ಕೋರಿಕೆಯೇನು?''… ಇಂತಹ ಪ್ರಶ್ನೆಗಳನ್ನು ಕೇಳಿದವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ವಕೀಲ ಹಾಗೂ ಹೋರಾಟಗಾರ ಎಂ ಎಲ್ ಶರ್ಮ ಅವರು ಸಲ್ಲಿಸಿರುವ ಅಪೀಲಿಗೆ ಇಂದು ಮುಖ್ಯ ನ್ಯಾಯಮೂರ್ತಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರಲ್ಲದೆ, “ಈ ಅಪೀಲಿಗೆ ಅರ್ಥವಿಲ್ಲ, ನಿಮ್ಮ ಅಪೀಲನ್ನು ಅರ್ಧ ಗಂಟೆ ಓದಿದೆ ಏನೂ ಅರ್ಥವಾಗಿಲ್ಲ'' ಎಂದು ಹೇಳಿದ್ದಾರೆ.

ಅಪೀಲು ಸಲ್ಲಿಸಿದ್ದ ಶರ್ಮ ತಾವು  ತಿದ್ದುಪಡಿಗೊಳಿಸಿ ಮತ್ತೊಮ್ಮೆ ಅಪೀಲು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸರಕಾರದ ಕ್ರಮವನ್ನು ಪ್ರಶ್ನಿಸಿ ಏಳು ಇತರ ಅಪೀಲುಗಳೂ ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿದ್ದು, ಒಬ್ಬ ಅಪೀಲುದಾರ ಶಕೀಲ್ ಶಬೀರ್ ಅವರ ಅಪೀಲನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಇನ್ನಷ್ಟೇ  ದೃಢೀಕರಿಸಬೇಕಿದೆ ಎಂಬ ಮಾಹಿತಿ ನೀಡಲಾಯಿತು.

``ಇಂತಹ ಒಂದು ಪ್ರಕರಣದಲ್ಲಿ ಈ ರೀತಿ ದೋಷಪೂರಿತ ಅಪೀಲುಗಳನ್ನು ಏಕೆ ಸಲ್ಲಿಸುತ್ತೀರಿ?'' ಎಂದೂ ಗೊಗೊಯಿ ಪ್ರಶ್ನಿಸಿದ್ದಾರೆ.

ವಿಚಾರಣೆಯನ್ನು ಮುಂದೂಡಿದ ನ್ಯಾಯಮೂರ್ತಿಗಳು ಕಾಶ್ಮೀರದಲ್ಲಿ ಮಾಧ್ಯಮದ ಮೇಲಿರುವ ನಿರ್ಬಂಧಗಳನ್ನು  ಕೈಗೆತ್ತಿಕೊಳ್ಳುವುದಾಗಿ  ಹೇಳಿದರೂ  ಈ ವಿಚಾರಕ್ಕೆ ಇನ್ನೂ ಸ್ವಲ್ಪ ಹೆಚ್ಚಿನ ಸಮಯ ನೀಡಲು ಬಯಸುವುದಾಗಿ ತಿಳಿಸಿದರು.

ನಿರ್ಬಂಧಗಳನ್ನು ತೆರವುಗೊಳಿಸಬೇಕೆಂದು ವಕೀಲೆ ವೃಂದಾ ಗ್ರೋವರ್ ಆಗ್ರಹಿಸಿದಾಗ ``ದೂರವಾಣಿ ಸಂಪರ್ಕಗಳನ್ನು ಇಂದು ಸಂಜೆ ಪುನರ್ ಸ್ಥಾಪಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ, ನೀವು ಕಾಯಬಹುದು'' ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News