ಅಸ್ತಮಾ ರೋಗಿಗಳು ಶೀತಜ್ವರವನ್ನು ಕಡೆಗಣಿಸಬಾರದು,ಏಕೆ ಗೊತ್ತೇ?

Update: 2019-08-16 13:31 GMT

ಅಸ್ತಮಾ ರೋಗಿಗಳಿಗೆ ಇನ್‌ಫ್ಲುಯೆಂಝಾ (ಫ್ಲು) ಅಥವಾ ಶೀತಜ್ವರ ಉಂಟಾದರೆ ಅದನ್ನೆಂದೂ ಕಡೆಗಣಿಸಬಾರದು, ಏಕೆಂದರೆ ಫ್ಲು ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ,ವಿಶೇಷವಾಗಿ ಉಸಿರಾಟದ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅದು ಕೇವಲ ಉಸಿರಾಟ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದಿಲ್ಲ, ಶ್ವಾಸಕೋಶಗಳಿಗೂ ತೀವ್ರ ಹಾನಿಯನ್ನುಂಟು ಮಾಡುತ್ತದೆ.

► ಫ್ಲು ಅಸ್ತಮಾ ರೋಗಿಗಳ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ?

ಫ್ಲು ವೈರಸ್‌ಗಳ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದ್ದು,ಈಗಾಗಲೇ ಹೃದ್ರೋಗ ಅಥವಾ ಉಸಿರಾಟದ ಸಮಸ್ಯೆ ಹೊಂದಿರುವವರಲ್ಲಿ ತೀವ್ರ ಆರೋಗ್ಯ ತೊಂದರೆಗಳನ್ನುಂಟು ಮಾಡುತ್ತದೆ. ಪ್ಲು ಹೊಂದಿರುವ ಅಸ್ತಮಾ ರೋಗಿಗಳು ಇತರ ಫ್ಲು ಪೀಡಿತರಿಗಿಂತ ಹೆಚ್ಚಿನ ಅಪಾಯಕ್ಕೆ ಸಿಲುಕುವುದಿಲ್ಲವಾದರೂ ಇತರರಿಗೆ ಹೋಲಿಸಿದರೆ ಅವರಲ್ಲಿ ಈ ಸೋಂಕಿನ ತೀವ್ರತೆ ಹೆಚ್ಚಾಗಿರುತ್ತದೆ. ಏಕೆಂದರೆ ಫ್ಲು ಸೋಂಕು ಕೇವಲ ಶ್ವಾಸನಾಳ ಮತ್ತು ಶ್ವಾಸಕೋಶಗಳ ಉರಿಯೂತವನ್ನುಂಟು ಮಾಡುವುದಿಲ್ಲ,ಅದು ಅಸ್ತಮಾ ಸ್ಥಿತಿಯನ್ನೂ ಹದಗೆಡಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಅದು ತೀವ್ರ ಅಸ್ತಮಾ ದಾಳಿಗಳಿಗೂ ರೋಗಿಯನ್ನು ಗುರಿಯಾಗಿಸುತ್ತದೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಅನಿವಾರ್ಯವಾಗಿಸುತ್ತದೆ.

ಅಸ್ತಮಾದಿಂದ ಬಳಲುತ್ತಿರುವ ವಯಸ್ಕರು ಮತ್ತು ಹಿರಿಯರು ಫ್ಲು ಸೋಂಕಿಗೊಳಗಾದ ಬಳಿಕ ನ್ಯುಮೋನಿಯಾಕ್ಕೆ ತುತ್ತಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಅಲ್ಲದೆ ಅದು ರೋಗ ನಿರೋಧಕ ಶಕ್ತಿಯನ್ನೂ ದುರ್ಬಲಗೊಳಿಸುತ್ತದೆ.

ಅಸ್ತಮಾ ರೋಗಿಗಳು ಕಿವಿ ಸೋಂಕು,ಸೈನಸ್ ಸೋಂಕು ಮತ್ತು ಉಸಿರಾಟ ವ್ಯವಸ್ಥೆಯ ಸೋಂಕುಗಳಂತಹ ಫ್ಲು ಸಮಸ್ಯೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವಿರುತ್ತದೆ. ಇದಕ್ಕೆ ಅಸ್ತಮಾ ರೋಗಿಗಳಲ್ಲಿ ಕಂಡುಬರುವ ದೀರ್ಘಕಾಲಿಕ ಶ್ವಾಸನಾಳ ಉರಿಯೂತ ಕಾರಣವಾಗಿರುತ್ತದೆ. ಅಲ್ಲದೆ ರೋಗ ನಿರೋಧಕ ವ್ಯವಸ್ಥೆಯ ದುರ್ಬಲ ಪ್ರತಿರೋಧದಿಂದಾಗಿ ಗಂಭೀರ ಫ್ಲು ತೊಂದರೆಗಳು ಮತ್ತು ಬ್ಯಾಕ್ಟೀರಿಯಾ ಸೋಂಕುಗಳು ಉಂಟಾಗುತ್ತವೆ.

► ಫ್ಲು ನಿಭಾಯಿಸುವುದು ಹೇಗೆ?

ಲಸಿಕೆ ತೆಗೆದುಕೊಳ್ಳುವ ಮೂಲಕ ತಡೆಯಬಹುದಾದ ಸಾಮಾನ್ಯ ಕಾಯಿಲೆಗಳಲ್ಲಿ ಫ್ಲು ಒಂದಾಗಿದೆ. ಫ್ಲು ತಡೆಯಲು ಪ್ರತಿವರ್ಷ ಲಸಿಕೆಯನ್ನು ತೆಗೆದುಕೊಳ್ಳುವ ಮೂಲಕ ಅಸ್ತಮಾ ರೋಗಿಗಳು ಫ್ಲೂಗೆ ತುತ್ತಾದ ಸಂದರ್ಭದಲ್ಲಿ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News