ಗುಂಪಿನಿಂದ ಹತ್ಯೆಗೀಡಾಗಿದ್ದ ದಲಿತ ಯುವಕನ ತಂದೆ ಮೃತ್ಯು

Update: 2019-08-16 14:46 GMT

ಜೈಪುರ, ಆ.16: ಕಳೆದ ತಿಂಗಳು ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಮೃತಪಟ್ಟಿದ್ದ ದಲಿತ ಯುವಕನ ತಂದೆ ಗುರುವಾರ ಸಾವನ್ನಪ್ಪಿದ್ದು,ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ಶಂಕಿತ ಹಲ್ಲೆಕೋರರ ಬೆದರಿಕೆಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬವು ಪ್ರತಿಪಾದಿಸಿದೆ.

 ಹರೀಶ್ ಜಾತವ್(28) ಜು.16ರಂದು ತನ್ನ ಬೈಕ್‌ನಲ್ಲಿ ಭಿವಾಡಿಯಿಂದ ಮನೆಗೆ ಮರಳುತ್ತಿದ್ದಾಗ ಫಾಲ್ಸಾ ಗ್ರಾಮದಲ್ಲಿ ಹಕೀಮನ್(55) ಎಂಬ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದಿತ್ತು. ಈ ಸಂದಭಕ ದುಷ್ಕರ್ಮಿಗಳು ಹರೀಶನನ್ನು ಥಳಿಸಿದ್ದು ತೀವ್ರವಾಗಿ ಗಾಯಗೊಂಡಿದ್ದ ಆತ ಎರಡು ದಿನಗಳ ಬಳಿಕ ದಿಲ್ಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಹರೀಶ್ ರ ಅಂಧ ತಂದೆ ರತ್ತಿರಾಮ ಜಾಟವ್(55) ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿರುವ ಅವರ ಕುಟುಂಬವು,ಪದೇ ಪದೇ ಕೋರಿಕೊಂಡಿದ್ದರೂ ಹರೀಶ್ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದೆ.

 “ಕಳೆದ ನಾಲ್ಕೈದು ದಿನಗಳಿಂದ ಹಕೀಮನ್ ಮತ್ತು ಆಕೆಯ ಪತಿ ಜಮಾಲುದ್ದೀನ್ ಕೊಲೆ ದೂರನ್ನು ಹಿಂದೆಗೆದುಕೊಳ್ಳುವಂತೆ ನನ್ನ ತಂದೆಗೆ ಬೆದರಿಕೆಯೊಡ್ಡುತ್ತಿದ್ದರು. ಇದರಿಂದ ಅವರು ಚಿಂತೆಗೀಡಾಗಿದ್ದರು. ಪ್ರಕರಣವನ್ನು ಹಿಂದೆಗೆದುಕೊಳ್ಳದಿದ್ದರೆ ನಮ್ಮೆಲ್ಲರನ್ನೂ ಕೊಲ್ಲುವುದಾಗಿ ಜಮಾಲುದ್ದೀನ್‌ನ ಮಕ್ಕಳು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಅವರು ನನಗೆ ಹೇಳಿದ್ದರು” ಎಂದು ರತ್ತಿರಾಮ ಪುತ್ರ ದಿನೇಶ ಸುದ್ದಿಗಾರರಿಗೆ ತಿಳಿಸಿದ.

ಅಪಘಾತವಾದಾಗ ಹರೀಶ್ ಪಾನಮತ್ತನಾಗಿದ್ದ ಎಂದು ಜಮಾಲುದ್ದೀನ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದರೆ,ಉಮರ್ ಶೇರ್ ಮತ್ತು ಆತನ ಸಹಚರರು ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದರು ಎಂದು ರತ್ತಿರಾಮ ತನ್ನ ದೂರಿನಲ್ಲಿ ಆರೋಪಿಸಿದ್ದರು.

 ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂಬ ಜಾಟವ್ ಕುಟುಂಬದ ಆರೋಪವನ್ನು ತಳ್ಳಿಹಾಕಿದ ಆಲ್ವಾರ್ ಎಸ್‌ಪಿ ಪರೀಶ್ ದೇಶಮುಖ ಅವರು, ‘ರತ್ತಿರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎನ್ನುವುದು ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಗೊತ್ತಾಗಲಿದೆ. ಗುಂಪು ಹಲ್ಲೆಯಿಂದ ಹರೀಶ್ ಮೃತಪಟ್ಟಿದ್ದಾನೆ ಎಂಬ ಕುಟುಂಬದ ಹೇಳಿಕೆ ತಪ್ಪು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಪ್ರತ್ಯಕ್ಷದರ್ಶಿಗಳ ವಿಚಾರಣೆಯಿಂದ ತಿಳಿದುಬಂದಿದೆ. ನ್ಯಾಯಯುತ ತನಿಖೆಯನ್ನು ಖಚಿತಪಡಿಸಲು ತನಿಖಾಧಿಕಾರಿಯನ್ನೂ ನಾವು ಬದಲಿಸಿದ್ದೇವೆ ’ಎಂದು ತಿಳಿಸಿದರು.

 ತನ್ಮಧ್ಯೆ ಸರಕಾರ ಮತ್ತು ಆಡಳಿತವನ್ನು ಟೀಕಿಸಿರುವ ಬಿಜೆಪಿ ಶಾಸಕ ಸಂಜಯ ಶರ್ಮಾ ಅವರು,ಹರೀಶನನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಕೊಂದಿದ್ದಾರೆ. ಪೊಲೀಸರು ಆರಂಭದಿಂದಲೂ ಅದೊಂದು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಬಳಿಕವಷ್ಟೇ ಪೊಲಿಸರು ಕೊಲೆ ಪ್ರಕರಣವನ್ನಾಗಿ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News