ಕೆಪಿಎಲ್‌ನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ: ಅಂಕ ಹಂಚಿಕೊಂಡ ಬೆಂಗಳೂರು-ಮೈಸೂರು

Update: 2019-08-16 18:28 GMT

ಬೆಂಗಳೂರು, ಆ.16:ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳ ನಡುವಿನ ಮೊದಲ ಪಂದ್ಯ ಶುಕ್ರವಾರ ಮಳೆಯಿಂದಾಗಿ ರದ್ದುಗೊಂಡಿದ್ದು, ಉಭಯ ತಂಡಗಳು ತಲಾ 1 ಅಂಕವನ್ನು ಹಂಚಿಕೊಂಡಿವೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 8ನೇ ಆವೃತ್ತಿಯ ಕೆಪಿಎಲ್ ಪಂದ್ಯಗಳಿಗೆ ಭರ್ಜರಿ ಚಾಲನೆ ದೊರೆಯಿತು.

 ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿದ ಮೈಸೂರು ವಾರಿಯರ್ಸ್ ತಂಡದ ನಾಯಕ ಅಮಿತ್ ವರ್ಮಾ ಅವರು ಫೀಲ್ಡಿಂಗ್ ಆಯ್ದುಕೊಂಡಿದ್ದರು.

 ಇನಿಂಗ್ಸ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ 13 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 88 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಆ ಬಳಿಕ ಆಟ ನಡೆಯಲಿಲ್ಲ. ಇದಕ್ಕೂ ಮೊದಲು ಸ್ಪಿನ್ನರ್ ಜಗದೀಶ್ ಸುಚಿತ್ ದಾಳಿಗೆ ಸಿಲುಕಿದ ಬೆಂಗಳೂರು ಬ್ಲಾಸ್ಟರ್ಸ್ 11.5 ಓವರ್‌ಗಳಲ್ಲಿ 76 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಶರತ್ ಬಿ.ಆರ್(13) ಮತ್ತು ರೋಹನ್ ಕದಮ್(23), ನಾಯಕ ರೊಂಗ್ಸೆನ್ ಜೊನಾಥನ್(17) ಔಟಾದರು. ಬಳಿಕ ಆಟ ಮುಂದುವರಿಸಿದ ನಿಕಿನ್ ಜೋಶ್ 28 ರನ್ ಮತ್ತು ಕೆ.ಎನ್.ಭರತ್ 5 ರನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಆಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಅಂಪೈರ್‌ಗಳು ಪಂದ್ಯವನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News