ಕಾಶ್ಮೀರ ಕುರಿತು ವಿಶ್ವಸಂಸ್ಥೆ ರಹಸ್ಯ ಸಭೆ: ಗಂಭೀರ ವ್ಯೂಹಾತ್ಮಕ ವೈಫಲ್ಯ ಎಂದ ಕಾಂಗ್ರೆಸ್

Update: 2019-08-17 14:32 GMT

ಹೊಸದಿಲ್ಲಿ, ಆ.17: ಕಾಶ್ಮೀರ ಬೆಳವಣಿಗೆಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯು ಮುಚ್ಚಿದ ಕೊಠಡಿಯಲ್ಲಿ ಸಭೆ ನಡೆಸಿರುವುದು ಬಿಜೆಪಿ ನೇತೃತ್ವದ ಸರಕಾರದ ಗಂಭೀರ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ವೈಫಲ್ಯವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಸುದ್ದಿಗಾರರೊಡನೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ ಮನು ಸಿಂಘ್ವಿ ಅವರು,ಮುಚ್ಚಿದ ಕೊಠಡಿಯಲ್ಲಿ ಸಭೆ ನಡೆದಿರುವುದು ಇಡೀ ದೇಶಕ್ಕೆ,ಪ್ರತಿಯೊಬ್ಬ ಪ್ರಜೆಗೆ ಕಳವಳದ ವಿಷಯವಾಗಿದೆ ಎಂದರು.

ಜಮ್ಮು,ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಭಾಗಗಳಾಗಿವೆ ಮತ್ತು ಇದಕ್ಕೆ ವಿರುದ್ಧವಾಗಿ ಯಾರೂ ಮಾತನಾಡುವಂತಿಲ್ಲ. ಭಾರತದ ಮಟ್ಟಿಗೆ ಹೇಳುವುದಾದರೆ ಇದು ಚೌಕಾಶಿಗೆ,ಚರ್ಚೆಗೆ ಅವಕಾಶವಿಲ್ಲದ ವಿಷಯವಾಗಿದೆ ಎಂದು ಅವರು ಹೇಳಿದರು.

 ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಅವರು ಕಾಶ್ಮೀರ ಕುರಿತು ಚರ್ಚಿಸಲೆಂದೇ ಚೀನಾದಲ್ಲಿದ್ದರು ಮತ್ತು ಅವರಿಗೆ ಅತಿಥಿ ಸತ್ಕಾರ ಮಾಡುತ್ತಲೇ ಆ ರಾಷ್ಟ್ರವು ವಿಶ್ವಸಂಸ್ಥೆ ಮೆಟ್ಟಿಲನ್ನೇರುವ ದಾಷ್ಟ್ಯವನ್ನು ತೋರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News