ಇಲ್ಲಿನ ವೀಳ್ಯದೆಲೆ, ಪ್ರಸಾದಕ್ಕೆ ಭೌಗೋಳಿಕ ಗುರುತಿನ ಮಾನ್ಯತೆ

Update: 2019-08-17 16:14 GMT

ಹೊಸದಿಲ್ಲಿ, ಆ.17: ಕೇರಳದ ತಿರೂರು ವೀಳ್ಯದೆಲೆ,ತಮಿಳುನಾಡಿನ ದೇವಸ್ಥಾನವೊಂದರ ‘ಪ್ರಸಾದಂ’, ಮಿಝೊರಾಮ್‌ನ ಕೈಯಿಂದ ನೇಯ್ದ ವಿಶಿಷ್ಟ ಬಟ್ಟೆಗಳಾದ ತಾವ್ಲೊಪುವಾನ್ ಮತ್ತು ಮಿಝೊ ಪುವಾಂಚೈಗಳಿಗೆ ಭೌಗೋಳಿಕ ಗುರುತು ಮಾನ್ಯತೆ(ಜಿಐ ಟ್ಯಾಗ್) ಲಭಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ. ಇದರಿಂದಾಗಿ ಈ ವಸ್ತುಗಳ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಗರಿಷ್ಠ ಬೆಲೆಗಳನ್ನು ಪಡೆಯುವ ನಿರೀಕ್ಷೆಯಿದೆ.

ನಿರ್ದಿಷ್ಟ ಭೌಗೋಳಿಕ ಮೂಲ ಮತ್ತು ಆ ಮೂಲದಿಂದಲೇ ವಿಶಿಷ್ಟ ಗುಣಗಳನ್ನು ಹೊಂದಿ ಪ್ರಸಿದ್ಧಗೊಂಡಿರುವ ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗುತ್ತದೆ.

ತಿರೂರು ವೀಳ್ಯದೆಲೆಯನ್ನು ಕೇರಳದ ತಿರೂರು,ತನೂರು,ತಿರುರಂಗಾಡಿ,ಕುಟ್ಟಿಪುರಂ,ಮಲಪ್ಪುರಂ ಮತ್ತು ವೆಂಗಾರ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು,ಔಷಧೀಯ ಗುಣಗಳಿಗಾಗಿ ಇದು ಖ್ಯಾತವಾಗಿದೆ.

ಪಳನಿ ಹಿಲ್ಸ್‌ನಲ್ಲಿರುವ ಶ್ರೀದಂಡಾಯುಧಪಾಣಿ ದೇವಸ್ಥಾನದಲ್ಲಿ ಅಭಿಷೇಕದಲ್ಲಿ ಮುಖ್ಯವಾಗಿ ಬಳಕೆಯಾಗುವ ‘ಪಳನಿ ಪಂಚಾಮೃತ ’ಕ್ಕೆ ಜಿಐ ಟ್ಯಾಗ್ ದೊರಕಿದ್ದು,ಇದರೊಂದಿಗೆ ತಮಿಳುನಾಡಿನಲ್ಲಿ ದೇವಸ್ಥಾನದ ಪ್ರಸಾದಕ್ಕೆ ಇದೇ ಮೊದಲ ಬಾರಿ ಇಂತಹ ಮಾನ್ಯತೆ ಲಭಿಸಿದೆ.

ಮಿಝೊ ಸಮಾಜದಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದಿರುವ ತಾವ್ಲೊಪುವಾನ್ ಅನ್ನು ಮಿಝೊರಾಮ್‌ನಾದ್ಯಂತ ಉತ್ಪಾದಿಸಲಾಗುತ್ತಿದ್ದು,ಐಜ್ವಾಲ್ ಮತ್ತು ತೆಂಜ್ವಾಲ್ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ. ಮಿಝೊ ಪುವಾಂಚೈ ಪ್ರತಿ ಮಿಝೊ ಮಹಿಳೆ ಅಗತ್ಯವಾಗಿ ಹೊಂದಿರುವ ಶಾಲು ಆಗಿದ್ದು,ವಿವಾಹ ಸಮಾರಂಭಗಳಲ್ಲಿ ವಿಶೇಷ ಉಡುಪಿನ ಸ್ಥಾನವನ್ನು ಹೊಂದಿದೆ. ದಾರ್ಜಿಲಿಂಗ್ ಚಹಾ,ತಿರುಪತಿ ಲಡ್ಡು,ಕಾಂಗ್ರಾ ಪೈಂಟಿಂಗ್,ನಾಗಪುರ ಕಿತ್ತಳೆ ಮತ್ತು ಕಾಸ್ಮೀರಿ ಪಶ್ಮಿನಾ ಇತ್ಯಾದಿಗಳು ಈಗಾಗಲೇ ಭಾರತದಲ್ಲಿ ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News