ಪಾಕ್‌ಗೆ ನೀಡುವ ಅಮೆರಿಕ ನೆರವಿನಲ್ಲಿ 440 ಮಿಲಿಯ ಡಾ. ಕಡಿತ

Update: 2019-08-17 17:38 GMT

ವಾಶಿಂಗ್ಟನ್, ಆ. 17: ಪಾಕಿಸ್ತಾನಕ್ಕೆ ನೀಡಬೇಕಾಗಿರುವ ನೆರವಿನ ಮೊತ್ತದಲ್ಲಿ ಅಮೆರಿಕ 440 ಮಿಲಿಯ ಡಾಲರ್ (ಸುಮಾರು 3,130 ಕೋಟಿ ರೂಪಾಯಿ)ನಷ್ಟು ಕಡಿತ ಮಾಡಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ನೀಡಬೇಕಾಗಿರುವ ಮೊತ್ತವನ್ನು ಅಮೆರಿಕ 4.1 ಬಿಲಿಯ ಡಾಲರ್ (ಸುಮಾರು 29,168 ಕೋಟಿ ರೂಪಾಯಿ)ಗೆ ಇಳಿಸಿದೆ.

ಪಾಕಿಸ್ತಾನ್ ಎನ್‌ಹಾನ್ಸ್‌ಡ್ ಪಾರ್ಟ್‌ನರ್‌ಶಿಪ್ ಅಗ್ರಿಮೆಂಟ್ (ಪಿಇಪಿಎ) 2010ರ ಅನ್ವಯ ಈ ನೆರವನ್ನು ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಾಶಿಂಗ್ಟನ್ ಭೇಟಿ ನೀಡಿದ ಮೂರು ವಾರಗಳ ಮೊದಲೇ ಅಮೆರಿಕ ತನ್ನ ನಿರ್ಧಾರವನ್ನು ಅವರಿಗೆ ತಿಳಿಸಿದೆ.

ಪಾಕಿಸ್ತಾನಕ್ಕೆ 5 ವರ್ಷಗಳ ಅವಧಿಯಲ್ಲಿ 7.5 ಬಿಲಿಯ ಡಾಲರ್ (ಸುಮಾರು 53,300 ಕೋಟಿ ರೂಪಾಯಿ) ನೀಡುವುದಕ್ಕಾಗಿ ಅಮೆರಿಕದ ಸಂಸತ್ತು 2009 ಅಕ್ಟೋಬರ್‌ನಲ್ಲಿ ಕೆರಿ ಲೂಗರ್ ಬರ್ಮನ್ (ಕೆಎಲ್‌ಬಿ) ಕಾಯ್ದೆಯನ್ನು ಅಂಗೀಕರಿಸಿತ್ತು. ಅದಕ್ಕೆ ಚಾಲನೆ ನೀಡುವುದಕ್ಕಾಗಿ 2010 ಸೆಪ್ಟಂಬರ್‌ನಲ್ಲಿ ಪಿಇಪಿಎ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಈ ಮೊದಲು ಕೆಎಲ್‌ಬಿ ಅಡಿಯಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ನೆರವು 4.5 ಬಿಲಿಯ ಡಾಲರ್ (ಸುಮಾರು 32,000 ಕೋಟಿ ರೂಪಾಯಿ) ಆಗಿತ್ತು. ಈಗ ಅದು 4.1 ಬಿಲಿಯ ಡಾಲರ್‌ಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News