ಚಿಂತನೆಗೆ ಹಚ್ಚುವ ಮಾತುಗಳು : ಪ್ರಧಾನಿ ಮೋದಿ ಭಾಷಣಕ್ಕೆ ಶತ್ರುಘ್ನ ಸಿನ್ಹಾ ಶ್ಲಾಘನೆ

Update: 2019-08-18 09:18 GMT

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯ ಕಟು ಟೀಕಾಕಾರರೆಂದೇ ಗುರುತಿಸಲ್ಪಡುವ ಹಿರಿಯ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಪ್ರಧಾನಿಯ ಸ್ವಾತಂತ್ರ್ಯ ದಿನ ಭಾಷಣವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಧಾನಿಯ ಭಾಷಣ ''ದಿಟ್ಟವಾಗಿತ್ತು, ಆಳವಾದ ಸಂಶೋಧನೆ ನಡೆಸಿ ತಯಾರಿಸಿದ್ದಾಗಿತ್ತು ಹಾಗೂ ಚಿಂತನೆಗೆ ಹಚ್ಚುವಂತಹ ಭಾಷಣವಾಗಿತ್ತು'' ಎಂದು ಸಿನ್ಹಾ ಬಣ್ಣಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಪಟ್ನಾ ಸಾಹಿಬ್ ಕ್ಷೇತ್ರದ ಮಾಜಿ ಸಂಸದರೂ ಆಗಿರುವ  ಹಾಗೂ ಕಡ್ಡಿ ಮುರಿದಂತೆ ಮಾತನಾಡುವ ಸ್ವಭಾವದವರಾಗಿರುವ  ಸಿನ್ಹಾ,  ಪ್ರಧಾನಿಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

''ಹಲವರು ಹಿಂದೆಯೂ ಮಾತನಾಡಿದ್ದಾರೆ ಆದರೆ  ಮುಂದೆ ಅದಕ್ಕೆ ತಕ್ಕಂತೆ ಕ್ರಮ ಕೈಗೊಂಡಿಲ್ಲ.  ಪ್ರಮುಖ ವಿಷಯಗಳ ಬಗ್ಗೆ  ಮಾತನಾಡಿ ಹಾಗೂ ಭಾರತದ ಭವಿಷ್ಯದ ಯೋಜನೆಯನ್ನು ಮುಂದಿರಿಸಿ ನೀವು ಸರಿಯಾದ ದಿಕ್ಕಿನಲ್ಲಿಯೇ ಗುರಿಯಿಟ್ಟಿದ್ದೀರಿ,'' ಎಂದು ಸಿನ್ಹಾ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

''ಚೀಫ್ ಆಫ್ ಡಿಫೆನ್ಸ್ ಸರ್ವಿಸಸ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಸರಿಯಾಗಿಯೇ  ಹೇಳಿದ್ದೀರಿ. ಇದು ಬಹಳಷ್ಟು ವ್ಯತ್ಯಾಸವನ್ನು ಮಾಡಬಲ್ಲದು,'' ಎಂದು ಹೇಳಿದ ಅವರು ದೇಶದ ನದಿಗಳನ್ನು ಜೋಡಿಸುವ  ಸಾಗರ ಮಾಲಾದಂತಹ  ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರಲ್ಲದೆ ತುಂಬಾ ತಡವಾಗುವ ಮೊದಲೇ, ಈಗಲೇ ಕಾರ್ಯಪ್ರವೃತ್ತರಾಗಿ, ದೇಶ ನಿಮ್ಮೊಂದಿಗಿದೆ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News