ಪೆಹ್ಲು ಖಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ: ನ್ಯಾ. ಚಂದ್ರಚೂಡ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-08-18 13:42 GMT

ಮುಂಬೈ, ಆ.18: ನ್ಯಾಯಾಲಯಗಳ ನಿಗಾದಡಿ ನಡೆದ ಪ್ರಕರಣಗಳ ತನಿಖೆಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು ಹೇಳಿದ್ದಾರೆ.

ಶನಿವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಗುಂಪಿನಿಂದ ಪೆಹ್ಲು ಖಾನ್ ಹತ್ಯೆ ಪ್ರಕರಣದಲ್ಲಿ ಎಲ್ಲ ಆರೂ ಆರೋಪಿಗಳ ಖುಲಾಸೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂತಹುದು ಪುನರಾವರ್ತನೆಯಾಗುತ್ತಲೇ ಇರುತ್ತದೆ. ತನ್ನ ಮುಂದಿರಿಸಲಾಗಿರುವ ಸಾಕ್ಷಾಧಾರಗಳನ್ನೇ ಆಧರಿಸಿ ತೀರ್ಮಾನವನ್ನು ತೆಗೆದುಕೊಳ್ಳುವುದು ನ್ಯಾಯಾಧೀಶರಾಗಿರುವವರು ಅನುಭವಿಸಬೇಕಾದ ಹಿಂಸೆಯಾಗಿದೆ ಎಂದರು.

ಪ್ರಕರಣದಲ್ಲಿ ಖುಲಾಸೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರ ತನಿಖೆ ಉದ್ದೇಶಪೂರ್ವಕವಾಗಿ ಅಥವಾ ಅದಕ್ಷತೆಯಿಂದಾಗಿ ಅಸಮರ್ಪಕವಾಗಿದ್ದಾಗ ಅದು ಆರೋಪಿಗಳ ಖುಲಾಸೆಗೆ ಕಾರಣವಾಗುತ್ತದೆ ಎಂದರು.

ಕಳೆದ ಬುಧವಾರ ಪೆಹ್ಲು ಖಾನ್ ಪ್ರಕರಣದಲ್ಲಿ ತೀರ್ಪನ್ನು ಪ್ರಕಟಿಸಿದ್ದ ರಾಜಸ್ಥಾನದ ವಿಚಾರಣಾ ನ್ಯಾಯಾಲಯವು ಪೊಲೀಸ್ ತನಿಖೆಯಲ್ಲಿ ಗಂಭೀರ ಲೋಪಗಳಿವೆ ಎಂದು ಬೆಟ್ಟು ಮಾಡಿತ್ತು ಮತ್ತು ಸಂಶಯದ ಲಾಭ ನೀಡಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

ಸೂಕ್ತ ಹಂತದಲ್ಲಿ ನ್ಯಾಯಾಲಯಗಳ ಗಮನಕ್ಕೆ ತರಲಾದ ಮತ್ತು ಅವುಗಳ ನಿಗಾದಡಿ ತನಿಖೆ ನಡೆದ ಪ್ರಕರಣಗಳು ಬಹುಶಃ ಉತ್ತಮ ಫಲಿತಾಂಶ ನೀಡಿವೆ ಎಂದ ನ್ಯಾ.ಚಂದ್ರಚೂಡ ಅವರು,ಸರ್ವೋಚ್ಚ ನ್ಯಾಯಾಲಯದ ನಿಗಾದಡಿ ತನಿಖೆ ನಡೆದಿದ್ದ ಕಥುವಾ ಅತ್ಯಾಚಾರ-ಹತ್ಯೆ ಪ್ರಕರಣವನ್ನು ನಿದರ್ಶನವನ್ನಾಗಿ ನೀಡಿದರು. ಆದರೆ ನ್ಯಾಯಾಲಯಗಳು ತನಿಖೆಯ ನಿಗಾ ವಹಿಸಬಹುದಾದ ಪ್ರಕರಣಗಳ ಸಂಖ್ಯೆಗೂ ಒಂದು ಮಿತಿಯಿದೆ ಎಂದರು.

‘ಕಲೆಯ ಮೂಲಕ ಸ್ವಾತಂತ್ರ್ಯದ ಕಲ್ಪನೆ’ ಕುರಿತು ಉಪನ್ಯಾಸ ನೀಡಿದ ನ್ಯಾ.ಚಂದ್ರಚೂಡ ಅವರು,ಸ್ವಾತಂತ್ರವು ವಿಭಿನ್ನವಾಗಿ ಯೋಚಿಸುವ,ಮಾತನಾಡುವ,ಆಹಾರ ಸೇವಿಸುವ,ಉಡುಪು ಧರಿಸುವ ಮತ್ತು ವಿಭಿನ್ನ ನಂಬಿಕೆ ಹೊಂದಿರುವ ವ್ಯಕ್ತಿಗಳ ವಿರುದ್ಧ ವಿಷವನ್ನು ಕಾರಲು ಒಂದು ಮಾರ್ಗವಾಗಿದೆ ಎಂದರು.

 ಸರಕಾರದಿಂದ ಅಥವಾ ಜನರಿಂದ ಅಥವಾ ಕಲೆಯಿಂದಲೂ ಸ್ವಾತಂತ್ರವು ದಮನಿಸಲ್ಪಟ್ಟಾಗ ಅಪಾಯವುಂಟಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News