ಚೀನಾ ಆಕ್ರಮಣಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ನಮ್ಗಾಲ್

Update: 2019-08-18 17:33 GMT

ಲೇಹ್, ಆ.18: ಕಾಂಗ್ರೆಸ್ ಆಡಳಿತದಲ್ಲಿ ಲಡಾಖ್‌ಗೆ ಸೂಕ್ತ ಮಹತ್ವ ನೀಡದಿರುವುದರಿಂದ ಚೀನಾವು ಡೆಮ್ಚಾಕ್‌ವರೆಗಿನ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಯಿತು ಎಂದು ಬಿಜೆಪಿಯ ಸಂಸದ ಜಮ್ಯಾಂಗ್ ಸೆರಿಂಗ್ ನಮ್ಗಾಲ್, ಹೇಳಿದ್ದಾರೆ.

ಕಾಶ್ಮೀರದಲ್ಲಿ ಪ್ರತಿಕೂಲ ಪರಿಸ್ಥಿತಿ ಇದ್ದಾಗಲೂ ತುಷ್ಟೀಕರಣ ನೀತಿ ಅನುಸರಿಸಿ ಕಾಂಗ್ರೆಸ್ ಕಾಶ್ಮೀರವನ್ನು ನಾಶ ಮಾಡಿಬಿಟ್ಟಿದೆ. ಇದರಿಂದ ಲಡಾಖ್‌ಗೆ ಕೂಡಾ ಹಾನಿಯಾಗಿದೆ. ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಕಾಂಗ್ರೆಸ್ ವಿಶೇಷ ಪ್ಯಾಕೇಜ್ ಘೋಷಿಸಿ ತಾತ್ಕಾಲಿಕ ಶಮನಕ್ಕೆ ಮುಂದಾಗಿದೆ. ಕಲ್ಲೆಸೆಯುವವರೊಂದಿಗೆ ಮೃದು ನೀತಿ ಅನುಸರಿಸಿತು, ಪ್ರತ್ಯೇಕತಾವಾದಿಗಳಿಗೆ ರಕ್ಷಣೆ ನೀಡಿತು. ಕಾಶ್ಮೀರ ಕುರಿತ ಕಾಂಗ್ರೆಸ್‌ನ ಕಾರ್ಯನೀತಿಯೂ ಸರಿಯಾಗಿರಲಿಲ್ಲ, ಇರಾದೆಯೂ ಸರಿಯಿರಲಿಲ್ಲ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ‘ಮುಂದುವರಿಯುವ ನೀತಿ’ಯನ್ನು ಪ್ರತಿಪಾದಿಸಿದರು. ಚೀನಾದೆಡೆ ಇಂಚಿಂಚಾಗಿ ಮುಂದುವರಿಯಬೇಕು ಎಂಬುದು ಈ ನೀತಿಯ ಸಾರಾಂಶ. ಆದರೆ ಇದು ‘ಹಿಂದೆ ಸರಿಯುವ’ ನೀತಿಯಾಗಿ ಬಿಟ್ಟಿತು. ಚೀನಾದ ಸೇನೆ ನಮ್ಮ ಪ್ರದೇಶದೊಳಗೆ ನುಸುಳಿತು. ನಾವು ಹಿಮ್ಮೆಟ್ಟಿದೆವು . ಅಕ್ಸಾಯ್ ಚಿನ್ ಸಂಪೂರ್ಣವಾಗಿ ಚೀನಾದ ವಶದಲ್ಲಿದೆ. ಡೆಮ್ಚಾಕ್‌ವರೆಗೆ ಅವರು ಮುನ್ನುಗ್ಗಿದ್ದಾರೆ ಎಂದವರು ಸುದ್ಧಿಸಂಸ್ಥೆಯ ಜೊತೆಗಿನ ಸಂದರ್ಶನದಲ್ಲಿ ಹೇಳಿದರು.

ಗೃಹ ಇಲಾಖೆ ಅನುಷ್ಠಾನಗೊಳಿಸಿದ ಪುನರ್ವಸತಿ ಯೋಜನೆಯಿಂದ ಲಡಾಖ್‌ಗೆ ಗಡಿಭಾಗದ ಜಿಲ್ಲೆಗಳಿಂದ ಒಳನುಸುಳುವಿಕೆ ಪ್ರಕ್ರಿಯೆಗೆ ತಡೆಯಾಗಲಿದೆ. ರಸ್ತೆ, ಸಂಪರ್ಕ ಮತ್ತು ಸಂವಹನ ವ್ಯವಸ್ಥೆ, ಆಸ್ಪತ್ರೆ ಮತ್ತು ಶಾಲೆಗಳು ನಗರದಲ್ಲಿ ಆರಂಭವಾದಾಗ ಗಡಿಭಾಗ ಸುರಕ್ಷಿತವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

370ನೇ ವಿಧಿ ರದ್ದತಿಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಟೀಕೆಯನ್ನು ಉಲ್ಲೇಖಿಸಿದ ನಮ್ಗಾಲ್, ರಾಹುಲ್‌ರಂತಹ ವ್ಯಕ್ತಿ ತನ್ನ ಕುರ್ಚಿ ಉಳಿಸಿಕೊಳ್ಳಲು ಏನು ಬೇಕಾದರೂ ಹೇಳಬಲ್ಲರು ಎಂದರು.

ಲಡಾಕ್‌ನಲ್ಲಿ ಒಂದು ಕಾಲೇಜಿದ್ದು ಇದು ಕಾಶ್ಮೀರ ವಿವಿಯ ಅಧೀನದಲ್ಲಿದೆ. ಈ ಕಾಲೇಜಿನ ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಒಂದು ಸಣ್ಣ ತಪ್ಪಿದ್ದರೂ ಅದನ್ನು ಸರಿಪಡಿಸಬೇಕಿದ್ದರೆ ಶ್ರೀನಗರಕ್ಕೇ ಹೋಗಬೇಕಾಗುತ್ತದೆ. ಕಾಶ್ಮೀರದಲ್ಲಿ ಸಮಸ್ಯೆಯಿದ್ದಾಗ ಮೂರು ವರ್ಷದ ಪದವಿ ಮುಗಿಸಲು ಐದು ವರ್ಷ ಬೇಕಾಗುತ್ತದೆ. ಜಮ್ಮು ಕಾಶ್ಮೀರ ಸರಕಾರ ಲಡಾಖ್ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಲಡಾಖ್‌ಗೆಂದು ಮಂಜೂರಾದ ಅನುದಾನವನ್ನು ತಾನೇ ಬಳಸಿಕೊಂಡಿತ್ತು. ಯಾವುದೇ ಕಾರ್ಯಯೋಜನೆ ರೂಪಿಸುವಾಗ ಲಡಾಖನ್ನು ಸಂಪೂರ್ಣ ಕಡೆಗಣಿಸಲಾಗುತ್ತಿತ್ತು ಎಂದವರು ದೂರಿದರು.

ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಬಳಿಕವೂ ಲಡಾಖ್ ಸ್ವಾಯತ್ತ ಪ್ರದೇಶಾಭಿವೃದ್ಧಿ ಸಮಿತಿ (ಎಲ್‌ಎಎಚ್‌ಡಿಸಿ) ಮುಂದುವರಿಯುತ್ತದೆ. ಲಡಾಖ್‌ನ ಜಮೀನು ಸ್ಥಳೀಯರಿಗೇ ಲಭಿಸುತ್ತದೆ. ನಮ್ಮ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕುತ್ತದೆ ಎಂದು ನಮ್ಗಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News