ಅಪಘಾತ ವಲಯದಲ್ಲಿ ವಾಹನೋದ್ಯಮ

Update: 2019-08-18 18:28 GMT

ಇತ್ತೀಚೆಗೆ ಜಾರ್ಖಂಡ್‌ನ ಪ್ರಮುಖ ಬಿಜೆಪಿ ಮುಖಂಡರೋರ್ವರ ಪುತ್ರ ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ಐಟಿ ಸೆಲ್ ಹಾಗೂ ಕ್ಷೇತ್ರ ಮಾಧ್ಯಮ ಪ್ರಭಾರಿ ಕುಮಾರ್ ವಿಶ್ವಜಿತ್ ಅವರ ಪುತ್ರ ಆಶಿಕ್ ಕುಮಾರ್ ಎಂಬಾತ ಆತ್ಯಹತ್ಯೆಗೈದ ಯುವಕ. ಟಾಟಾ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ, ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದ. ಟಾಟಾ ಮೋಟರ್ಸ್‌ತನ್ನ ಕೆಲವು ವಿಭಾಗಗಳನ್ನು ಮುಚ್ಚುತ್ತಿದ್ದುದು ಆತನ ಭೀತಿಗೆ ಕಾರಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಭಾರೀ ಉದ್ಯಮಿಗಳೇ ಉದ್ಯಮದಲ್ಲಿ ನಷ್ಟವಾಗಿರುವ ಕಾರಣಕ್ಕಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಸುದ್ದಿಯಾಗುತ್ತಿದೆ. ದೇಶದ ಆರ್ಥಿಕತೆಯ ಮೇಲೆ ಮತ್ತು ರಾಜಕೀಯದ ಮೇಲೆ ನೇರ ಪರಿಣಾಮ ಬೀರುವ ವಿದ್ಯಮಾನ ಇದಾಗಿರುವುದರಿಂದ ಹೆಚ್ಚು ಚರ್ಚೆಯಲ್ಲಿದೆ.

ಒಂದನ್ನು ನಾವು ಗಮನಿಸಬೇಕಾಗಿದೆ. ಒಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಬೀದಿಗೆ ಬಿದ್ದಾಗ ಆತನ ಜೊತೆ ಜೊತೆಗೇ ಸಾವಿರಾರು ಕಾರ್ಮಿಕರು ಕೂಡ ಬೀದಿಗೆ ಬೀಳುತ್ತಾರೆ. ಮತ್ತೆ ಹಾಗೆ ಬೀದಿಗೆ ಬೀಳುವವರಲ್ಲಿ ಯಾವುದೋ ಒಂದು ನಿರ್ದಿಷ್ಟ ಧರ್ಮ ಅಥವಾ ಪಕ್ಷಕ್ಕೆ ಸೇರಿದವರಷ್ಟೇ ಇರುವುದಿಲ್ಲ ಎನ್ನುವುದನ್ನು ಜಾರ್ಖಂಡ್‌ನಲ್ಲಿ ನಡೆದ ಪ್ರಕರಣ ನಮಗೆ ತಿಳಿಸುತ್ತದೆ. ಸದ್ಯಕ್ಕೆ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಆಟೊಮೊಬೈಲ್ ಅಥವಾ ವಾಹನ ಉದ್ದಿಮೆಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮ ಈ ದೇಶದ ಅರ್ಥವ್ಯವಸ್ಥೆಯ ಭೀಕರ ಆಕ್ಸಿಡೆಂಟಿಗೆ ಕಾರಣವಾದರೆ ಅಚ್ಚರಿಯೇನೂ ಇಲ್ಲ. ಭಾರತದ ಸಂದರ್ಭದಲ್ಲಿ ವಾಹನೋದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಉದ್ಯಮವಾಗಿತ್ತು. ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಕ್ಕೆೆ 2018ರಲ್ಲಿ ಶೇ.8 ರಷ್ಟು ಕೊಡುಗೆಯನ್ನು ನೀಡಿದ್ದ ವಾಹನೋದ್ಯಮ ಕ್ಷೇತ್ರವು ಇನ್ನಿತರ ಕ್ಷೇತ್ರಗಳೊಂದಿಗಿನ ಉತ್ಪಾದನಾ ಪೂರ್ವ ಮತ್ತು ಉತ್ಪಾದನೋತ್ತರ ಸರಣಿ ಸಂಬಂಧಗಳಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿತ್ತು. ಈ ಉದ್ಯಮದ ಸರಣಿ ಸಂಬಂಧಗಳಿಂದಾಗಿ ವಾಹನೋದ್ಯಮದ ಕುಸಿತವು ಇನ್ನಿತರ ಅಂದರೆ, ಟಯರ್, ಸ್ಟೀಲ್ ಇನ್ನಿತರ ಕ್ಷೇತ್ರಗಳ ಮೇಲೂ ನೇರ ಪರಿಣಾಮವನ್ನು ಬೀರುತ್ತದೆ. ಸ್ಥಳೀಯ ಬೇಡಿಕೆಯ ಕುಸಿತದಿಂದಾಗಿ ಹಾಲೀ ವಾಹನಗಳ ಮಾರಾಟವು ಕಳೆದ 19 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2019ರ ಮೇ ತಿಂಗಳಲ್ಲಿ ಕಾರುಗಳ ಮಾರಾಟದಲ್ಲಿ ಶೇ.26ರಷ್ಟು ಇಳಿಕೆಯಾಗಿದೆ ಮತ್ತು ಅದರ ಪರಿಣಾಮವಾಗಿ ಒಟ್ಟಾರೆ ವಾಹನಗಳ ಉತ್ಪಾದನೆಯಲ್ಲಿ ಶೇ.8ರಷ್ಟು ಕುಸಿತವಾಗಿದೆ. 2017-18ರಲ್ಲಿ ನಾಲ್ಕು ಚಕ್ರಗಳ ವಾಹನಗಳ ಮಾರಾಟವು ಶೇ.14ರಷ್ಟು ದರದಲ್ಲಿ ಬೆಳವಣಿಗೆ ಕಂಡಿದ್ದರೆ ಅದು ಹಾಲಿ ಸಾಲಿನಲ್ಲಿ ಶೇ.5ಕ್ಕೆ ಕುಸಿದಿದೆ. ಅದೇ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ದರವೂ ಸಹ ಶೇ.15ರಿಂದ ಶೇ.5ಕ್ಕೆ ಕುಸಿದಿದೆ. ಹಳೆಯ ಸ್ಟಾಕಿನ ಮಾರಾಟವನ್ನು ಮಾಡಿಮುಗಿಸುವ ಸಲುವಾಗಿ ಕಾರು ಉತ್ಪಾದಕರು ಹೊಸ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದಾರೆ. ಬೇಡಿಕೆಯ ಈ ಕುಸಿತವು ಬಿಡಿ ಭಾಗಗಳ ಉತ್ಪಾದಕರಿಗೆ ತೀವ್ರವಾದ ಹೊಡೆತ ಕೊಟ್ಟಿದೆ. ಹೀಗಾಗಿ ಅವರು ತಮ್ಮ ಉತ್ಪಾದನೆಯ ಸಾಮರ್ಥ್ಯದ ಶೇ.70ರಷ್ಟು ಮಾತ್ರ ಬಳಸುತ್ತಿದ್ದಾರೆ.

ಅದರ ಪರಿಣಾಮವಾಗಿ ತಮ್ಮ ಕೆಲಸಗಾರರನ್ನು ಮುಂದೆಯೂ ಉಳಿಸಬೇಕೆಂದುಕೊಂಡ ಸಂಸ್ಥೆಗಳೂ ಅಗತ್ಯಾನುಸಾರ ಕೆಲಸವನ್ನು ಕೊಡುತ್ತಿದ್ದರೆ ಮಿಕ್ಕವರು ಸಾರಾ ಸಗಟು ಕಾರ್ಮಿಕರ ಸಂಖ್ಯೆಯನ್ನೇ ಕಡಿತಗೊಳಿಸುತ್ತಿದ್ದಾರೆ. ವಾಸ್ತವವಾಗಿ 2016ಕ್ಕೆ ಕೊನೆಗೊಂಡ ಮೊದಲ ವಾಹನೋದ್ಯಮ ಅಭಿವೃದ್ಧಿ ಯೋಜನೆಯ ಗುರಿಗಳಿಗೆ ಹೋಲಿಸಿದಲ್ಲಿ, ಪ್ರಧಾನವಾಗಿ ವಾಣಿಜ್ಯ ಮತ್ತು ಪ್ರಯಾಣಿಕರ ವಾಹನಗಳು ಮತ್ತು ಟ್ರಾಕ್ಟರುಗಳ ದೇಶೀಯ ಮಾರಾಟದ ಗುರಿಯನ್ನು ತಲುಪಿದ್ದವು. ಆದರೆ ವಾಹನಗಳ ಬಿಡಿ ಭಾಗಗಳ ಉತ್ಪಾದಕ ಕ್ಷೇತ್ರವು ತನ್ನ 1,20,000 ಕೋಟಿ ರೂ.ಗಳ ಗುರಿಯನ್ನು ಮುಟ್ಟುವುದರಲ್ಲಿ ಹಿಂದೆ ಬಿದ್ದಿತ್ತು. ಮತ್ತೊಂದೆಡೆ ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 2013-14 ಹಾಗೂ 2018-19ರಲ್ಲಿ ಸ್ಥಳೀಯ ವಾಹನಗಳ ಉತ್ಪಾದನೆ ಹಾಗೂ ಮಾರಾಟಗಳ ಬೆಳವಣಿಗೆಯ ದರವು ಅನುಕ್ರಮವಾಗಿ ಶೇ.8 ಮತ್ತು ಶೇ. 7ರಷ್ಟಿತ್ತು.

ಬ್ಯಾಂಕಿಂಗ್ ಕ್ಷೇತ್ರವು ಎದುರಿಸುತ್ತಿರುವ ಬಿಕ್ಕಟ್ಟೂ ಸಹ ವಾಹನಗಳ ಡೀಲರುಗಳಿಗೆ ಮತ್ತು ಗ್ರಾಹಕರಿಗೆ ಸುಲಭವಾಗಿ ಸಾಲ ಸೌಲಭ್ಯಗಳು ದೊರಕದಂತೆ ಮಾಡಿವೆ. ಭಾರತದಲ್ಲಿ ಮಾರಾಟವಾಗುವ ವಾಹನಗಳಲ್ಲಿ ಶೇ.60 ಭಾಗ ಖರೀದಿಯೂ ಸಾಲ ಸೌಲಭ್ಯಗಳನ್ನು ಆಧರಿಸಿಯೇ ನಡೆಯುತ್ತದೆ. ಹೀಗಿರುವಾಗ ಕಳೆದ ಒಂದೂವರೆ ವರ್ಷದಿಂದ ದೇಶವು ಎದುರಿಸುತ್ತಿರುವ ಹಣಕಾಸು ಹರಿವಿನ ಕೊರತೆಯು ಸಹಜವಾಗಿಯೇ ವಾಹನಗಳ ಖರೀದಿ ದರವನ್ನು ಕೆಳಮಟ್ಟದಲ್ಲಿಯೇ ಇರಿಸಿದೆ. ಒಟ್ಟಾರೆ ಆರ್ಥಿಕತೆಯೇ ಇಳಿಮುಖವನ್ನು ಕಾಣುತ್ತಿರುವುದರ ಭಾಗವಾಗಿ ವಾಹನೋದ್ಯಮದಲ್ಲೂ ಬೇಡಿಕೆಯು ಇಳಿಮುಖವಾಗಿದೆ. ಇದೆಲ್ಲದರ ಜೊತೆಗೆ ಕಳೆದ ಬಜೆಟ್‌ನಲ್ಲಿ, ವಿದ್ಯುತ್ ಚಾಲಿತ ವಾಹನಗಳಿಗೆ ಸರಕಾರ ತೋರಿಸಿದ ಆಸಕ್ತಿಯೂ ವಾಹನೋದ್ಯಮಗಳ ಮೇಲೆ ದುಷ್ಪರಿಣಾಮಗಳನ್ನು ಬೀರಿದೆ. ಯಾವುದೇ ದೂರದೃಷ್ಟಿಯ ಕಾರ್ಯಕ್ರಮಗಳಿಲ್ಲದೆ ಆತುರಾತುರವಾಗಿ ಸರಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಆಸಕ್ತಿ ತೋರಿಸಿದೆ ಎನ್ನುವುದು ಉದ್ಯಮಿಗಳ ಆರೋಪವಾಗಿದೆ. ಇಷ್ಟಕ್ಕೂ ವಿದ್ಯುತ್ ಚಾಲಿತ ವಾಹನಗಳಿಗೆ ನಮ್ಮ ದೇಶ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ. ಈ ಕಾರಣದಿಂದಲೇ, ವಾಹನೋದ್ಯಮ ಅನಗತ್ಯ ಗೊಂದಲಗಳಿಂದಾಗಿ ಮುಂದೆ ಸಾಗದೆ ನಿಂತು ಬಿಟ್ಟಿದೆ. ಈ ಎಲ್ಲಾ ಕಾರಣಗಳ ಒಟ್ಟು ಪರಿಣಾಮದಿಂದಾಗಿ ಉದ್ಯೋಗಗಳು ಅದರಲ್ಲೂ ಗುತ್ತಿಗೆ ಮತ್ತು ದಿನಗೂಲಿ ಉದ್ಯೋಗಗಳು ಕಡಿತವಾಗುತ್ತಿವೆ.

ಒಂದು ಅಂದಾಜಿನ ಪ್ರಕಾರ ಕಳೆದ ಮೂರು ತಿಂಗಳಲ್ಲಿ ವಾಹನಗಳ ಮತ್ತು ವಾಹನಗಳ ಬಿಡಿಭಾಗಗಳ ಉತ್ಪಾದಕರು ಮತ್ತು ಡೀಲರುಗಳು 3,50,000 ಕಾರ್ಮಿಕರನ್ನು ಕೆಲಸದಿಂದ ಹೊರಹಾಕಿದ್ದಾರೆ. 2000-2015ರ ನಡುವೆ ವಾಹನೋದ್ಯಮದಲ್ಲಿ ಉದ್ಯೋಗದ ಪಾಲು ಶೇ.3ರಿಂದ ಶೇ.7ಕ್ಕೆ ಜಿಗಿದಿತ್ತು. ಹೀಗಾಗಿ ವಾಹನೋದ್ಯಮ ಕ್ಷೇತ್ರದಲ್ಲಿ ಮುಂದುವರಿಯುವ ಈ ಕುಸಿತವು ಉದ್ಯೋಗಗಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರಲಿದೆ. ಈ ನಿರುದ್ಯೋಗಗಳಿಗೆ ಸರಕಾರದ ಬಳಿ ಪರ್ಯಾಯ ಕ್ರಮಗಳಿಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಉದ್ಯಮಿಗಳು ಬಹಿರಂಗವಾಗಿಯೇ ಸರಕಾರದ ನಡೆಯನ್ನು ಟೀಕಿಸುತ್ತಿದ್ದಾರೆ. ಈ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಸಾಧ್ಯವಾಗದ ಸರಕಾರ, ಕಾಶ್ಮೀರ, ಪಾಕಿಸ್ತಾನ, ರಾಮಮಂದಿರ ಮೊದಲಾದ ಭಾವನಾತ್ಮಕ ವಿಷಯಗಳಿಗೆ ಆದ್ಯತೆಗಳನ್ನು ನೀಡಿ ಜನರನ್ನು ತೃಪ್ತಿಗೊಳಿಸಲು ಹೊರಟಿದೆ. ಆದರೆ ಆರ್ಥಿಕತೆಯೇ ದೇಶದ ವಾಸ್ತವ ಎನ್ನುವುದನ್ನು ಸರಕಾರ ಅರಿತುಕೊಳ್ಳಬೇಕು. ಮುಚ್ಚಿಟ್ಟದ್ದು ಒಂದಲ್ಲ ಒಂದು ದಿನ ತೆರೆದುಕೊಳ್ಳಲೇಬೇಕು. ದೇಶದಲ್ಲಿ ವಿಭಜನೆಯ ವಾತಾವರಣ ನಿರ್ಮಿಸಿ ಜನರನ್ನು ಗೊಂದಲಗೊಳಿಸುವುದರಿಂದ, ಆರ್ಥಿಕತೆ ಇನ್ನಷ್ಟು ಕುಸಿಯುತ್ತದೆಯೇ ಹೊರತು, ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾರದು ಎನ್ನುವುದನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News