ಚರ್ಚೆಯ ನೆಪದಲ್ಲಿ ಆರೆಸ್ಸೆಸ್, ಬಿಜೆಪಿ ಮೀಸಲಾತಿಯನ್ನು ಕೊನೆಗಾಣಿಸಲು ಬಯಸಿದೆ: ಕಾಂಗ್ರೆಸ್

Update: 2019-08-19 16:15 GMT

ಹೊಸದಿಲ್ಲಿ, ಆ.19: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ದಲಿತ ವಿರೋಧಿ ಮತ್ತು ಹಿಂದುಳಿದ ವರ್ಗಗಳ ವಿರೋಧಿ ಎಂದು ದೂರಿರುವ ಕಾಂಗ್ರೆಸ್, ಅವರು ಚರ್ಚೆಯ ನೆಪದಲ್ಲಿ ಮೀಸಲಾತಿಯನ್ನು ಕೊನೆಗಾಣಿಸಲು ಬಯಸಿದೆ ಎಂದು ಆರೋಪಿಸಿದೆ.

ಪಕ್ಷದ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಎಲ್. ಪೂನಿಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ-ಆರ್ಥಿಕ ಅಸಮಾನತೆ ಒಂದು ಸವಾಲಾಗಿದೆ ಎಂದು ನಂಬಿದ್ದರು. ಅದೇ ಕಾರಣದಿಂದ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಲೇ ಇದೆ.

ಈಗ ಅವರು ಮೀಸಲಾತಿ ಬಗ್ಗೆ ಚರ್ಚೆ ನಡೆಸಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹೋಗಲಾಡಿಸಲು ಪ್ರಯತ್ನಿಸಿದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸುವಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಪೂನಿಯಾ ಆರೋಪಿಸಿದ್ದಾರೆ.

ಬಿಜೆಪಿ ನೈಜ ವಿಷಯಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೆರ, ಭಿನ್ನಾಭಿಪ್ರಾಯಗಳಿರುವ ಮತ್ತು ಸರಕಾರದ ದೈನಂದಿನ ಸಮಸ್ಯೆಗಳಿಂದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯಬಲ್ಲ, ಸಮಾಜದಲ್ಲಿ ಬಿರುಕನ್ನು ಮೂಡಿಸುವಂತಹ ವಿಷಯಗಳನ್ನು ಎತ್ತುವುದು ಬಿಜೆಪಿ ಮತ್ತು ಸಂಘಪರಿವಾರದ ಹವ್ಯಾಸವಾಗಿದೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News