ಗೋವುಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ -ಡಾ. ವಲ್ಲಭ್ ಕಥಿರಿಯಾ

Update: 2019-08-19 18:45 GMT

ಜನರು ಗೋವುಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಗೋವಿನ ರಕ್ಷಣೆ ಸಾಧ್ಯ. ಗೋಪೂಜೆ ಮಾಡಿ ಗೋವನ್ನು ಮಾತೆಯೆಂದು ಕರೆಯುವುದರಿಂದಷ್ಟೆ ಏನೂ ಪ್ರಯೋಜನವಿಲ್ಲ. ಬದಲಾಗಿ ಜನರಿಗೆ ಹಸುವಿನಿಂದ ಆದಾಯ ದೊರಕಿದಲ್ಲಿ, ಹಸುವಿನ ಹಾಲಿನಿಂದ ಉಪಯೋಗವಾಗಿ ಔಷಧಿಗಳಿಗಾಗಿ ಅವರು ಕಡಿಮೆ ಹಣ ಖರ್ಚುಮಾಡುವಂತಾದಲ್ಲಿ ಮತ್ತು ಬೇಸಾಯಕ್ಕಾಗಿ ಗೋಮೂತ್ರ ಮತ್ತು ಸೆಗಣಿಯನ್ನು ಬಳಸಿ ಸಾವಯುವ ಗೊಬ್ಬರ ಉತ್ಪಾದಿಸಿದಲ್ಲಿ ಜನರಿಗೆ ಗೋವಿನ ರಕ್ಷಣೆಯ ಮಹತ್ವ ತಿಳಿಯಬಹುದು. ಈ ಎಲ್ಲ ಉದ್ದೇಶಗಳಿಗಾಗಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸಲಾಗಿದೆ.

ಜುಲೈ ತಿಂಗಳ ಒಂದು ಸಂಜೆ ಸೆಂಟ್ರಲ್ ದಿಲ್ಲಿಯಲ್ಲಿರುವ ಗುಜರಾತ್ ಭವನದಲ್ಲಿ ಭೋಜನ ಮಾಡಲು ಬಂದಿದ್ದ ಸಂದರ್ಶಕರನ್ನು ಸ್ನೇಹದ ನಗೆಯೊಂದಿಗೆ ವ್ಯಕ್ತಿಯೊಬ್ಬರು ಸ್ವಾಗತಿಸುತ್ತಾರೆ. ಪ್ರಧಾನಮಂತ್ರಿಯವರ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿ ಆಗತಾನೆ ಹಿಂದಿರುಗಿದ್ದ ಅವರು ಹೇಳುತ್ತಾರೆ: ‘‘ನಾನು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ’’ ಅವರು ಇನ್ಯಾರೂ ಅಲ್ಲ, ಅವರೇ ಡಾ. ವಲ್ಲಭ್ ಕಥಿರಿಯಾ.

ಓರ್ವ ಸರ್ಜನ್ ಹಾಗೂ ರಾಜ್‌ಕೋಟ್‌ನ ಮಾಜಿ ಬಿಜೆಪಿ ಸಂಸದ, 64ರ ಹರೆಯದ ಕಥಿರಿಯಾರವರಿಗೆ ತಾನು ಮುಖ್ಯಸ್ಥನಾಗಿರುವ ರಾಷ್ಟ್ರೀಯ ಗೋ ಆಯೋಗದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂದು ಗೊತ್ತಿದೆ. ಈ ಆಯೋಗದ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡಲು ಅವರು ದೃಢ ನಿರ್ಧಾರ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಳು ನಡೆಯುವ ಎರಡು ತಿಂಗಳು ಮೊದಲು, ಫೆಬ್ರವರಿಯಲ್ಲಿ ಮೋದಿ ಸರಕಾರ ಈ ಆಯೋಗವನ್ನು ರಚಿಸಿತ್ತು. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಅದನ್ನು ಉಲ್ಲೇಖಿಸಲಾಗಿತ್ತು. ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳುವುದರೊಂದಿಗೆ ಆಯೋಗಕ್ಕೆ ಈ ವರ್ಷ 500 ಕೋಟಿ ರೂ. ಬಜೆಟನ್ನು ಮಂಜೂರು ಮಾಡಲಾಗಿದೆ.

ಆಯೋಗವು ಆ ಮೊತ್ತದಿಂದ ಏನೇನು ಮಾಡಲಿದೆ?

ಸ್ಕ್ರಾಲ್ ಡಾಟ್‌ಇನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಕಥಿರಿಯಾರವರು ಪ್ರವಾಸೋದ್ಯಮ, ಕೃಷಿ ಮತ್ತು ಶಿಕ್ಷಣದ ಒಂದು ಸಂಯೋಜನೆಯ ಮೂಲಕ ಭಾರತದಲ್ಲಿ ತಾನು ಹೇಗೆ ಗೋ ಕಲ್ಯಾಣ ಮಾಡಲು ಯೋಚಿಸಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ‘ಕಾಮಧೇನು ಪೀಠ’ಗಳನ್ನು ಸ್ಥಾಪಿಸುವುದರಿಂದ ಆರಂಭಿಸಿ ಹೌಸಿಂಗ್ ಸೊಸೈಟಿಗಳಲ್ಲಿ ‘ಕಾಮಧೇನು ನಗರ’ಗಳನ್ನು ನಿರ್ಮಿಸುವವರೆಗೆ ಹಸುಗಳನ್ನು ಪ್ರೊಮೋಟ್ ಮಾಡುವ ನಾನಾ ರೀತಿಯ ಯೋಜನೆಗಳ ಬಗ್ಗೆ ಅವರು ಮಾತಾಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

 ರಾಷ್ಟ್ರೀಯ ಕಾಮಧೇನು ಆಯೋಗದ ರಚನೆಯ ಹಿಂದಿದ್ದ ಚಿಂತನೆ ಯಾವುದು? ಅದು ಏನನ್ನು ಸಾಧಿಸುವ ಗುರಿ ಹೊಂದಿದೆ?

ಉ: ಮೂಲಭೂತವಾಗಿ, ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಗೋವಿನ ಓರ್ವ ದೊಡ್ಡ ಆರಾಧಕರು. ಅಲ್ಲದೆ ವಿಜ್ಞಾನ ಮತ್ತು ಅರ್ಥಶಾಸ್ತ್ರವನ್ನು ಜೋಡಿಸುವ ಮೂಲಕ ನಾವು ಹೇಗೆ ಗೋವನ್ನು ನೋಡಿಕೊಳ್ಳಬಹುದೆಂಬುದನ್ನು ಅವರು ಅಧ್ಯಯನ ಮಾಡಿದ್ದಾರೆ. ಈ ಆಯೋಗದ ರಚನೆಯು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಒಂದು ಭಾಗವಾಗಿತ್ತು.

ಗೋವಿನ ರಕ್ಷಣೆಯ ಜತೆಗೆ ಗೋವು-ಕಲ್ಯಾಣ ಸಮಾಜ ಕೂಡ ನಮ್ಮ ಸಂಪ್ರದಾಯ, ಪರಂಪರೆಗಳ ಒಂದು ಭಾಗವಾಗಿದೆ. ಅದನ್ನು ಪರಿಸರ, ಆಯೋಗ, ಸಮಾಜಿಕ-ಅರ್ಥಶಾಸ್ತ್ರ ಹಾಗೂ ಕೃಷಿಯ ದೃಷ್ಟಿಯಿಂದ ಇಂದಿನ ಕಾಲಕ್ಕೆ ಮರಳಿ ಪ್ರಸ್ತುತವಾಗುವಂತೆ ಮಾಡುವುದು ಹೇಗೆ ಬಡವರನ್ನು ತುಳಿತಕೊಳ್ಳಗಾದವರನ್ನು ಸಾಮಾಜಿಕವಾಗಿ ಉನ್ನತಿಗೆ ತರಲು ನಾವು ಅದನ್ನು ಹೇಗೆ ಬಳಸಬಹುದು? ರೈತರ ಆದಾಯವನ್ನು ಇಮ್ಮಡಿಗೊಳಿಸಿ, ಯುವ ಜನತೆಗೆ ನೌಕರಿ ಹಾಗೂ ಮಹಿಳೆಯರ ಸಬಲೀಕರಣವನ್ನು ಹೇಗೆ ಸಾಧ್ಯವಾಗಿಸುವುದು? ಇದು ನರೇಂದ್ರ ಮೋದಿಯವರ ದೂರದರ್ಶಿತ್ವ, ವಿಜನ್ ಆಗಿತ್ತು.

ಜನರು ಗೋವುಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಗೋವಿನ ರಕ್ಷಣೆ ಸಾಧ್ಯ. ಗೋಪೂಜೆ ಮಾಡಿ ಗೋವನ್ನು ಮಾತೆಯೆಂದು ಕರೆಯುವುದರಿಂದಷ್ಟೆ ಏನೂ ಪ್ರಯೋಜನವಿಲ್ಲ. ಬದಲಾಗಿ ಜನರಿಗೆ ಹಸುವಿನಿಂದ ಆದಾಯ ದೊರಕಿದಲ್ಲಿ, ಹಸುವಿನ ಹಾಲಿನಿಂದ ಉಪಯೋಗವಾಗಿ ಔಷಧಿಗಳಿಗಾಗಿ ಅವರು ಕಡಿಮೆ ಹಣ ಖರ್ಚುಮಾಡುವಂತಾದಲ್ಲಿ ಮತ್ತು ಬೇಸಾಯಕ್ಕಾಗಿ ಗೋಮೂತ್ರ ಮತ್ತು ಸೆಗಣಿಯನ್ನು ಬಳಸಿ ಸಾವಯವ ಗೊಬ್ಬರ ಉತ್ಪಾದಿಸಿದಲ್ಲಿ ಜನರಿಗೆ ಗೋವಿನ ರಕ್ಷಣೆಯ ಮಹತ್ವ ತಿಳಿಯಬಹುದು. ಈ ಎಲ್ಲ ಉದ್ದೇಶಗಳಿಗಾಗಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸಲಾಗಿದೆ.

 ಗೋರಕ್ಷಣೆ, ಕಲ್ಯಾಣ ಮತ್ತು ನೀತಿ ನಿರೂಪಣೆಯ ನಿಟ್ಟಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಆಯೋಗವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ?

ಉ: ಮೊದಲನೆಯದಾಗಿ, ನಮ್ಮ ಕಚೇರಿ ಮತ್ತು ಸಿಬ್ಬಂದಿಗಾಗಿ ಮೂಲ ಚೌಕಟ್ಟು ನಿರ್ಮಾಣವಾಗಬೇಕಾಗಿದೆ. ಇದರ ಜತೆಗೇ ವಿಜ್ಞಾನಿಗಳನ್ನು ಸಂಶೋಧಕರನ್ನು ಮತ್ತು ಸಂತರುಗಳನ್ನು ಭೇಟಿಯಾಗುವ ಕುರಿತು ಕೂಡ ನಾವು ಯೋಚಿಸಲು ಆರಂಭಿಸಿದ್ದೇವೆ. ಅವರಿಂದ ಮಾಹಿತಿ, ಅಭಿಪ್ರಾಯ ಪಡೆಯಲು ನಾನು ಅವರನ್ನೆಲ್ಲ ಭೇಟಿಯಾಗುತ್ತಿದ್ದೇನೆ. ಹಾಗೆಯೇ ಗೋಕಲ್ಯಾಣದ ವಿವಿಧ ಅಂಶಗಳ ಕುರಿತು ನೀತಿ ನಿರೂಪಣೆಯ ನಿಟ್ಟಿನಲ್ಲಿ ಕೂಡ ನಾವು ಕೆಲಸ ಆರಂಭಿಸಿದ್ದೇವೆ.

ಉದಾಹರಣೆಗೆ, 35ರಿಂದ 40 ಸಚಿವಾಲಯಗಳೊಂದಿಗೆ ಗೋಕಲ್ಯಾಣವನ್ನು ತಳಕು ಹಾಕಲಾಗಿದೆ. ಉದಾಹರಣೆಗೆ, ಪ್ರವಾಸೋದ್ಯಮ ಸಚಿವಾಲಯ ದೇಶದಲ್ಲಿ ಎಲ್ಲೇ ಇರಲಿ, ಉತ್ತಮ ಗೋವು ಕೇಂದ್ರಗಳಿದ್ದಲ್ಲಿ, ನಾವು ಅವುಗಳನ್ನು ಪ್ರವಾಸೋದ್ಯಮ ಜಾಲದಲ್ಲಿ ಸೇರಿಸಿದ್ದಲ್ಲಿ ಜನ ಅವುಗಳಿಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಶಿಕ್ಷಣ ಸಿಗುತ್ತದೆ. ಅಲ್ಲೆಲ್ಲ ನಾವು ಒಂದು ಚಿಕ್ಕ ಜೈವಿಕ ಅನಿಲ ಸ್ಥಾವರ, ಜೈವಿಕ ಗೊಬ್ಬರ ಸ್ಥಾವರ ಗೋವಿನ ಮೂತ್ರದಿಂದ ತಯಾರಿಸಿದ ಔಷಧಿಗಳು ಮತ್ತು ಸೋಪು, ಶ್ಯಾಂಪು, ಫಿನಾಯಿಲ್ ಮಾರಾಟ ಮಾಡುವ ಒಂದು ಕೌಂಟರ್ ಆರಂಭಿಸುತ್ತೇವೆ.

ಒಟ್ಟಿನಲ್ಲಿ ಅದೊಂದು ಜನ ಜಾಗೃತಿ ಕಾರ್ಯಕ್ರಮ. ಶಿಕ್ಷಣದಲ್ಲಿ ಮಕ್ಕಳ ಪಠ್ಯಗಳಲ್ಲಿ ಮೊದಲ ಮೂರು ತರಗತಿಗಳಲ್ಲಿ ಪಾಠಗಳನ್ನು ಸೇರಿಸುತ್ತೇವೆ. ಪಠ್ಯಕ್ರಮದಲ್ಲಿ ನಾವು ಹಸುಗಳನ್ನು ಪರಿಸರದೊಂದಿಗೆ ಜೋಡಿಸುತ್ತೇವೆ. ವಿಶ್ವ ವಿದ್ಯಾನಿಲಯಗಳಲ್ಲಿ ಕಾಮಧೇನು ಪೀಠಗಳನ್ನು ಸ್ಥಾಪಿಸುತ್ತೇವೆ.

ನಾಗರಿಕ ವಿಮಾನಯಾನ ಸಚಿವಾಲಯ ಹೇಗೆ ಗೋವುಗಳೊಂದಿಗೆ ತಳಕು ಹಾಕಿಕೊಂಡಿದೆ?

ಉ: ನಮ್ಮ ದೇಶದಲ್ಲಿ ಹಲವಾರು ವಿಮಾನ ನಿಲ್ದಾಣಗಳಿವೆ ಮತ್ತು ಈ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಜಮೀನು ಇದೆ. ವಿಮಾನಗಳು ಇಳಿಯುವ ಜಾಗದಲ್ಲಿ ತುಂಬಾ ಹುಲ್ಲು ಇದೆ. ಇದನ್ನು ಈಗ ಸುಡಲಾಗುತ್ತದೆ. ಹೀಗೆ ಮಾಡುವುದಕ್ಕೆ ಬದಲಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಆ ಹುಲ್ಲನ್ನು ಕತ್ತರಿಸಿ ಅದನ್ನು ಒಂದು ಗೋಶಾಲೆಗೆ ನೀಡುವಂತೆ ನಾನು ಏರ್‌ಪೋರ್ಟ್ ಅಧಿಕಾರಿಗಳನ್ನು ಕೇಳಿಕೊಳ್ಳುತ್ತೇನೆ. ನಾವಿದನ್ನು ಮಾಡಬಹುದು.

ವಿದೇಶಾಂಗ ವ್ಯವಹಾರ ಸಚಿವಾಲಯದ ಬಗ್ಗೆ ಏನು ಹೇಳುತ್ತೀರಿ?

ಉ: ಈ ದಿನಗಳಲ್ಲಿ ಗೋಮಾಂಸ ನಮ್ಮ ದೇಶದಿಂದ ರಫ್ತಾಗುತ್ತಿದೆ. ಆದರೆ ಗೋಮಾಂಸವನ್ನು ರಪ್ತು ಮಾಡುವ ಅವಶ್ಯಕತೆ ಇಲ್ಲವೆಂದು ನಾನು ಹೇಳುತ್ತೇನೆ. ಗೋಮಾಂಸ ಉದ್ಯಮ ಕೇವಲ ಸುಮಾರು 8,000 ಕೋಟಿ ರೂ.ಯಿಂದ 10,000 ಕೋಟಿ ರೂ.ಷ್ಟು ವ್ಯವಹಾರದ ಒಂದು ಉದ್ಯಮ. ಗೋಮಾಂಸ ರಫ್ತಾಗಕೂಡದು. ಇದು ನಮ್ಮ ಅಭಿಪ್ರಾಯ. ಹಾಗೆಯೇ ಎತ್ತುಗಳು ವಿಶೇಷವಾಗಿ ಜೆರ್ಸಿ ತಳಿಯ ಎತ್ತುಗಳ ವೀರ್ಯದ ಆಮದು ಪ್ರಮಾಣವನ್ನು ಕೂಡ ನಾವು ಕಡಿಮೆ ಮಾಡಲು ಬಯಸುತ್ತೇವೆ. ಇದರಲ್ಲಿ ನಾವು ವಾಣಿಜ್ಯ ಸಚಿವಾಲಯ ಒಳಗೊಳ್ಳುವಂತೆ ಮಾಡುತ್ತೇವೆ. ನಾವು ದೇಶೀಯ ಎತ್ತುಗಳ ವೀರ್ಯದ ಉತ್ಪಾದನೆಯನ್ನು ಹೆಚ್ಚಿಸಲು ಬಯಸುತ್ತೇವೆ. (ಇಂಗ್ಲೆಂಡ್ ಮೂಲದ ) ಜೆರ್ಸಿ ಹಸುವು ಭಾರತಕ್ಕೆ ಬರ ಕೂಡದು. ಜೆರ್ಸಿ ಎತ್ತುಗಳ ವೀರ್ಯವೂ ಬರ ಕೂಡದು. ಅದು ನಿಲ್ಲಬೇಕು.

ಇನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ?

ಉ: ನಾನು ಒಂದು ‘ಕಾಮಧೇನು ನಗರ’ ನಿರ್ಮಾಣದ ಪ್ರಸ್ತಾವ ಸಲ್ಲಿಸಿದ್ದೇನೆ. ಒಂದು ಹೌಸಿಂಗ್ ಸೊಸೈಟಿಯಲ್ಲಿ ಜಿಮ್, ಈಜುವ ಕೊಳ, ಕಾಮನ್ ಸಭಾ ಭವನ ಮತ್ತು ಒಂದು ಉದ್ಯಾನ ಇರುತ್ತದೆ. ಅದೇ ರೀತಿಯಾಗಿ, ಅಲ್ಲಿ ಒಂದು ಗೋ ಶಾಲೆ, ಒಂದು ಕೌ ಶೆಲ್ಟರ್ ಇರಬೇಕು. ಅಲ್ಲಿ ಅವರು ಸುಮಾರು 10ರಿಂದ 20 ಹಸುಗಳನ್ನು ಸಾಕಬೇಕು; ಆ ಹಸುಗಳಿಂದ ಹೌಸಿಂಗ್ ಸೊಸೈಟಿಗೆ ಹಾಲು ಸಿಗಬೇಕು. ಅಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವಂತೆ ಒಂದು ಗೋಬರ್‌ಗ್ಯಾಸ್ ಘಟಕವನ್ನು ಕೂಡ ಸ್ಥಾಪಿಸಬಹುದು. ನಗರ ಪ್ರದೇಶಗಳಲ್ಲಿ ಮನೆಯಲ್ಲಿ ದನಗಳನ್ನು ಸಾಕಲು ಸಾಧ್ಯವಿಲ್ಲದವರಿಗಾಗಿ ಗೋ ಶಾಲೆಗಳನ್ನು ಸ್ಥಾಪಿಸಲು ಜಮೀನನ್ನು ಕಾದಿರಿಸುವುದು ಕೂಡ ನಮ್ಮ ಯೋಜನೆಯಲ್ಲಿ ಸೇರಿದೆ. ಇವುಗಳನ್ನು ಗೋವು ವಸತಿ ನಿಲಯ ಯಾನೆ ಕೌ ಶೆಲ್ಟರ್‌ಗಳೆಂದು ಕರೆಯಬಹುದು.

ಎಲ್ಲೆಲ್ಲಿ ಮಾದರಿ ಕೌ ಶೆಲ್ಟರ್‌ಗಳಿರುತ್ತವೋ ಅಲ್ಲೆಲ್ಲ ನಾವು ಒಂದು ಆಂಪಿಥಿಯೇಟರ್ ನಿರ್ಮಿಸಿ ಹಸುಗಳ ಬಗ್ಗೆ ಕೆಲವು ವೀಡಿಯೊ ಕ್ಲಿಪ್‌ಗಳ ಪ್ರದರ್ಶನ, ಕೆಲವು ಶೋಗಳು ಹಾಗೂ ತುಪ್ಪ ಮತ್ತು ಹಾಲು ಮಾರುವ ಒಂದು ಸ್ಟಾಲ್‌ನ ವ್ಯವಸ್ಥೆ ಮಾಡುತ್ತೇವೆ. ಸಾವಯವ ಆಹಾರ ಮಾರಾಟ ಮಾಡುವ ಒಂದು ರೆಸ್ಟೋರೆಂಟ್ ಕೂಡ ಅಲ್ಲಿರುತ್ತದೆ. ಸಮಾರಂಭಗಳಿಗಾಗಿ ಅಲ್ಲಿ ಒಂದು ಕಲ್ಯಾಣ ಮಂಟಪ ಕೂಡ ಇರಬಹುದು.

ನಾವು ಹಸು-ಆಧಾರಿತ ಜೈವಿಕ ಗೊಬ್ಬರ ಬಳಸಿದರೆ ಆಗ ದೇಶವು ರಾಸಾಯನಿಕ ಗೊಬ್ಬರಗಳ ಹಾಗೂ ಪೊಟಾಶಿಯಂನಂತಹ ಆಮದನ್ನು ಕಡಿಮೆ ಮಾಡಬಹುದು.

ಈ ನಿಟ್ಟಿನಲ್ಲಿ ಬಂಡವಾಳ ತೊಡಗಿಸಲು ಜನರಿಗೆ ನೀವು ಯಾವ ರೀತಿ ಉತ್ತೇಜಿಸುತ್ತೀರಿ? ನಿಮ್ಮ ಮನಸ್ಸಿನಲ್ಲಿ ಯಾವ ರೀತಿಯ ರೆವಿನ್ಯೂ ಮಾದರಿ ಇದೆ?

ಉ: ಹೂಡಿಕೆ ಪ್ರವಾಸೋದ್ಯಮಕ್ಕೆ ಮಾತ್ರ ಆಗಿರುವುದಿಲ್ಲ. ಅದು ಹಸು-ಆಧಾರಿತ ಎಲ್ಲ ಉದ್ಯಮಗಳಿಗೂ ಆಗಿರುತ್ತದೆ. ಇವತ್ತು, ನಿಮಗೆ ನಿಜವಾಗಿಯೂ ಉತ್ತಮ ಹಸುಗಳು ದೊರಕುವುದಿಲ್ಲ. ನಿಮಗೆ ಕೆಲವು ದೇಸೀ ಹಸುಗಳು ದೊರಕಿದರೆ, ನೀವು ಅವುಗಳ ಹಾಲನ್ನು ಲೀಟರ್ ಒಂದಕ್ಕೆ 80ರೂ.ಗಳಿಗೆ ಮಾರಬಹುದು. ಅವುಗಳ ಕರುಗಳನ್ನು ಪ್ರತಿಯೊಂದು ಕರುವಿಗೂ ಸುಮಾರು ಒಂದು ಲಕ್ಷ ರೂ.ಗೆ ಮಾರಬಹುದು. ಒಂದು ದೇಸೀ ಹಸು ಸುಮಾರು 15 ವರ್ಷ ಬದುಕುತ್ತದೆ. ಹಾಗಾಗಿ ಇಲ್ಲಿ ಬಂಡವಾಳ ಹೂಡುವುದು ಲಾಭದಾಯಕ. ಈ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಯುವಕರನ್ನು ನಾವು ಪ್ರೋತ್ಸಾಹಿಸುತ್ತೇವೆ. ಯೋಜನೆಗಳನ್ನು ಆರಂಭಿಸಿ ತೆರಿಗೆ ರಿಯಾಯಿತಿ ನೀಡುತ್ತೇವೆ.

ದೊಡ್ಡ ಉದ್ದಿಮೆಗಳು ಕೂಡ ಇದರಲ್ಲಿ ತೊಡಗಿಸಿಕೊಳ್ಳುತ್ತೇವೆ. ಜಾಮ್‌ನಗರದ ರಿಲಯನ್ಸ್ ಕ್ಯಾಂಪಸ್ ಅಂಬಾನಿ 300 ಹಸುಗಳನ್ನು ಸಾಕುತ್ತಿದ್ದಾರೆ.

ಇಂದಿನ ಗೋವು ಸಾಕಣೆಯ ಕ್ಯಾಂಪಸ್‌ಗಳನ್ನು ವೀಕ್ಷಿಸಲು ಯಾರೆಲ್ಲ ಬರಬಹುದೆಂದು ನೀವು ನಿರೀಕ್ಷಿಸುತ್ತೀರಿ?

ಉ: ಪ್ರತಿಯೊಬ್ಬ ಮಕ್ಕಳಿಂದ ವಿದೇಶೀಯರವರೆಗೆ, ರೈತರಿಂದ ಶಿಕ್ಷಿತರವರೆಗೆ ಅಧಿಕಾರಿಗಳಿಂದ ರಾಜಕಾರಣಿಗಳವರೆಗೆ.

ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಅವುಗಳು ಆ ಮೇಲೆ ಕೂಡ ರೈತರಿಗೆ ಉಪಯೋಗಿಯಾಗುವಂತೆ ಮಾಡಲು ಆಯೋಗವು ಹೇಗೆ ಸಹಾಯ ಮಾಡುತ್ತದೆ?

ಉ: ಜೈವಿಕ-ಕೀಟನಾಶಕ ಹಾಗೂ ಜೈವಿಕ ಗೊಬ್ಬರ ತಯಾರಿಸಲು ರೈತರು ಸೆಗಣಿ ಮತ್ತು ಗೋಮೂತ್ರವನ್ನು ಬಳಸಬಹುದು. ಪರಿಣಾಮವಾಗಿ ಬೇಸಾಯದ ಖರ್ಚು ಕಡಿಮೆಯಾಗಿ ಅವರ ಆದಾಯ ಹೆಚ್ಚುತ್ತದೆ. ಟ್ರಾಕ್ಟರ್‌ಗಳು ಬಂದಿವೆಯಾದರೂ ಗದ್ದೆ ಊಳಲು ಎತ್ತುಗಳ ಬಳಕೆಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಗುಜರಾತಿನಲ್ಲಿ ಸುಮಾರ್ 80,000 ಎತ್ತುಗಳನ್ನು ನಾವು ರೈತರಿಗೆ ಉಚಿತವಾಗಿ ನೀಡಿದ್ದೇವೆ.

ಗೋವಧೆ ನಿಷೇಧಿಸಿರುವ ರಾಜ್ಯಗಳಲ್ಲಿ ಬೀದಿಗೆ ಬಿಟ್ಟ ಹಸುಗಳು ತಮ್ಮ ಬೆಲೆಗಳನ್ನು ನಾಶ ಮಾಡಿರುವುದಾಗಿ ರೈತರು ವರದಿ ಮಾಡಿದ್ದಾರೆ. ಆಯೋಗವು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದೆ?

 ಉ: ಇವುಗಳು ಹೆಚ್ಚಾಗಿ ಎತ್ತುಗಳು. ಇದಕ್ಕಾಗಿ ನಾವು ಪ್ರತಿಯೊಂದು ಜೆಲ್ಲೆಯಲ್ಲಿ ಕೌ ಶೆಲ್ಟರ್‌ಗಳನ್ನು ಆರಂಭಿಸಿ ಅವುಗಳಿಗೆ ಸರಕಾರದ ಧನ ಸಹಾಯ ನೀಡಿ ಬೇಲಿ ಹಾಕಿಸುತ್ತೇವೆ.

 ಸಿಂಹಧಾಮಗಳಿರುವ ಹಾಗೆಯೇ ಜಾನುವಾರು ಧಾಮಗಳನ್ನು ನಿರ್ಮಿಸುತ್ತೇವೆ. ಅಲ್ಲಿ ಗೋಮೂತ್ರ ಮತ್ತು ಸೆಗಣಿಯಿಂದ ಬರುವ ಆದಾಯದಿಂದ ಆ ಧಾಮವು ಎರಡು ಮೂರು ವರ್ಷಗಳಲ್ಲಿ ಸ್ವಾವಲಂಬಿಯಾಗುತ್ತದೆ. ಜೀವಮಾನದ ಉದ್ದಕ್ಕೂ ಮೂತ್ರ ಹಾಗೂ ಸೆಗಣಿ ನೀಡುವ ಗೋವಿನ ವೌಲ್ಯ ಎಷ್ಟೊಂದು ಎಂದರೆ ಇದನ್ನು ತಿಳಿದವರು, ಬೀಡಾಡಿ ಹಸುವನ್ನು ತಂದು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಎಂಬುದು ಈ ಐದು ವರ್ಷಗಳಲ್ಲಿ ನನ್ನ ಕನಸು.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಗೋ ಸಂಬಂಧಿತ ಹಿಂಸೆಯನ್ನು ರಾಷ್ಟ್ರೀಯ ಕಾಮಧೇನು ಆಯೋಗ ಹೇಗೆ ನಿಭಾಯಿಸುತ್ತದೆ?

ಉ: ಈಗ ಏನು ಹಿಂಸೆ ನಡೆಯುತ್ತದೆಯೋ ಅದು ತಪ್ಪು. ಆದರೆ ಈ ಹಿಂಸಾಘಟನೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ. ನಾವು ಗೋರಕ್ಷಕರಿಗೆ ತರಬೇತಿ ನೀಡುತ್ತೇವೆ. ಯಾಕೆಂದರೆ ಗೋ ರಕ್ಷಣೆ ಎಂಬುದು ವಿಷಯದ ಒಂದು ಮುಖ ಮಾತ್ರ. ಕೌ ಶೆಲ್ಟರ್‌ಗಳನ್ನು ನಿರ್ವಹಿಸುವುದು, ಗೋವುಗಳ ಆರೈಕೆ ಮಾಡುವುದು, ಅವುಗಳನ್ನು ನೋಡಿಕೊಳ್ಳುವುದು ಮತ್ತು ಈ ಬಗ್ಗೆ ಜಾಗೃತಿ ಉಂಟು ಮಾಡುವುದು ಇನ್ನೊಂದು ಮುಖ.

ಈ ಹಿಂಸಾ ಘಟನೆಗಳು ಅಪರೂಪದ ಪ್ರಕರಣಗಳು. ಇಂತಹ ಪ್ರಕರಣಗಳು ನಡೆಯದಂತಹ ಒಂದು ವಾತಾವರಣವನ್ನು, ಸನ್ನಿವೇಶವನ್ನು ನಾವು ನಿರ್ಮಿಸಬೇಕು.

ಕೃಪೆ: scroll.in

Writer - ವಿಜೈತಾ ಲಾಲ್ವಾನಿ

contributor

Editor - ವಿಜೈತಾ ಲಾಲ್ವಾನಿ

contributor

Similar News

ಜಗದಗಲ
ಜಗ ದಗಲ