ತೀವ್ರವಾಗುತ್ತಿರುವ ಆರ್ಥಿಕ ಹಿನ್ನಡೆ

Update: 2019-08-19 18:44 GMT

ಜಿಡಿಪಿಯಲ್ಲಿ ಕುಸಿತ, ತೆರಿಗೆ ಸಂಗ್ರಹಣೆ ದಶಕದಲ್ಲೇ ಕನಿಷ್ಠ, ಮ್ಯೂಚುಯಲ್ ಫಂಡ್ ನೆಲಕಚ್ಚುತ್ತಿದೆ, ಅಟೋಮೊಬೈಲ್ ವ್ಯಾಪಾರ ಪ್ರಪಾತಕ್ಕೆ, ಲಕ್ಷಗಟ್ಟಲೆ ಜನ ಉದ್ಯೋಗ ಕಳೆದುಕೊಂಡರು.... ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಇಂತಹ ತರಹಾವರಿ ಸುದ್ದಿಗಳೋ ಸುದ್ದಿಗಳು. ಒಂದು ಒಳ್ಳೆಯ ಸುದ್ದಿಯೂ ಇಲ್ಲ. ಆರ್‌ಬಿಐ ಕೂಡ ಈ ಆರ್ಥಿಕ ಕುಸಿತವನ್ನು ಒಪ್ಪಿಕೊಂಡಿದೆ. ಆದರೆ ಈ ಆರ್ಥಿಕ ಹಿನ್ನಡೆ ಮೂಲಭೂತವಾದದ್ದಲ್ಲ. ಕೇವಲ ತಾತ್ಕಾಲಿಕ, ಎಲ್ಲಾ ಸರಿಹೋಗುತ್ತೆ ಅಂತ ಹೇಳಿದೆ. ಜೊತೆಗೆ ಮತ್ತೊಮ್ಮೆ ವಿಪೋದರವನ್ನು .35 ಮೂಲ ಪಾಯಿಂಟುಗಳಷ್ಟು ಕಡಿಮೆ ಮಾಡಿದೆ. ಅದರಿಂದ ಆರ್ಥಿಕತೆ ಸುಧಾರಿಸುತ್ತೆ ಅಂತ ನಿರೀಕ್ಷಿಸುತ್ತಿದೆ.

ಜಿಡಿಪಿ ಕನಿಷ್ಠ ಶೇ. 8ರಷ್ಟು ಇರುತ್ತದೆ ಅಂತ ಒಂದು ಆಸೆ ಇತ್ತು. ಅದನ್ನು ನೆಚ್ಚಿಕೊಂಡೇ ಬಜೆಟ್ ತಯಾರಾಗಿತ್ತು. ‘5 ಟ್ರಿಲಿಯನ್ ಆರ್ಥಿಕತೆ’ಯ ಸ್ಲೋಗನ್ ಕೂಡ ಚಾಲ್ತಿಗೆ ಬಂತು. ಆದರೆ ಅದು ಹೆಚ್ಚುವುದಿರಲಿ ಶೇ. 6.9ಕ್ಕೆ ಇಳಿದಿದೆ. ಇದನ್ನು ಸ್ವತಃ ಆರ್‌ಬಿಐ ಹೇಳಿದೆ. ಅದು ಇನ್ನೂ ಕಡಿಮೆ ಅಂತ ಅಷ್ಟೇ ವಿಶ್ವಾಸದಿಂದ ಹೇಳುವರೂ ಇದ್ದಾರೆ. ಶೇ. 6.9 ಕೂಡ ಒಳ್ಳೆಯ ಸಂಖ್ಯೆ ಏನಲ್ಲ. ಜಿಡಿಪಿ ಏರಿಬಿಟ್ಟರೆ ಒಳ್ಳೆಯದಾಗಿಬಿಡುತ್ತದೆ ಅಂತ ಅಲ್ಲ. ಸದ್ಯಕ್ಕೆ ಜನ ಅದರ ಹಿಂದೆ ಬಿದ್ದಿದ್ದಾರೆ. ಅದನ್ನೇ ಕೇಂದ್ರವನ್ನಾಗಿ ಇಟ್ಟುಕೊಂಡು ಆರ್ಥಿಕತೆಯನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಜಿಡಿಪಿಯನ್ನೇ ಮಾಪಕವಾಗಿ ಇಟ್ಟುಕೊಂಡರೂ ಆರ್ಥಿಕತೆಯಲ್ಲಿ ಹಿನ್ನಡೆ ಕಾಣುತ್ತಿದೆ. ಅದು ಇನ್ನೂ ಕುಸಿಯಬಹುದು ಎಂಬ ಅನುಮಾನ ಪತ್ರಿಕೆಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡಿದರೆ ಬರುತ್ತದೆ.

ಎಪ್ರಿಲ್‌ನಿಂದ ಜೂನ್‌ವರೆಗಿನ ಮೂರು ತಿಂಗಳ ಒಟ್ಟಾರೆ ತೆರಿಗೆ ಸಂಗ್ರಹಣೆ ಹತ್ತು ವರ್ಷದಲ್ಲೇ ಕನಿಷ್ಠ ಅಂತ ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನೇ ಗಮನಿಸಿ. ಈ ಆವಧಿಯಲ್ಲಿ ಕೇವಲ 4,00,421 ಕೋಟಿ ರೂಪಾಯಿ ಸಂಗ್ರಹವಾಗಿದೆ ಅಂತ ‘ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಅಂದರೆ ಶೇ. 1.36ರಷ್ಟು. ಈ ಮೂರು ತಿಂಗಳ ಆವಧಿಯಲ್ಲಿ ಇಡೀ ಕಳೆದ ದಶಕದಲ್ಲೇ ಇಷ್ಟು ಕಡಿಮೆ ಎಂದೂ ಆಗಿರಲಿಲ್ಲ. ಸರಕಾರದ ನಿರೀಕ್ಷೆಯನ್ನು ಗಮನಿಸಿದರೆ ಇದರ ಗಂಭೀರತೆ ಅರ್ಥ ಆಗುತ್ತದೆ. ಈ ವರ್ಷ ಕಳೆದ ವರ್ಷಕ್ಕಿಂತ ಶೇ. 18ರಷ್ಟು ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ ಅನ್ನುವ ನಿರೀಕ್ಷೆಯನ್ನು ಬಜೆಟ್ಟಿನಲ್ಲಿ ಕಾಣಬಹುದು. ಅಂದರೆ ಒಟ್ಟು 24.6 ಲಕ್ಷಕೋಟಿ ರೂಪಾಯಿ ಸಂಗ್ರಹಣೆ ಆಗಬೇಕು. ಅಷ್ಟು ಆಗುತ್ತೆ ಅನ್ನುವ ನಂಬಿಕೆಯಿಂದಲೇ ಬಜೆಟ್‌ನ ಲೆಕ್ಕಾಚಾರ ನಡೆದಿರುವುದು. ಈ ಮೂರು ತಿಂಗಳಲ್ಲಿ ಆಗಿರುವ ಸಂಗ್ರಹಣೆ ನೋಡಿದರೆ ಇನ್ನು ಮೂರು ತಿಂಗಳಿನಲ್ಲಿ ಉಳಿದ 20.5 ಲಕ್ಷ ಕೋಟಿ ಸಂಗ್ರಹವಾಗುತ್ತದೆ ಅಂತ ನಂಬಿಕೊಳ್ಳುವುದು ಕಷ್ಟ. ಕಳೆದ ವರ್ಷಗಳ ಮಾಹಿತಿಯೂ ಈ ಅನುಮಾನವನ್ನು ಇನ್ನಷ್ಟು ಗಟ್ಟಿಮಾಡುತ್ತದೆ.

ಕಳೆದ ಎರಡು ವರ್ಷಗಳನ್ನು ಗಮನಿಸಿದರೆ ತೆರಿಗೆ ಆದಾಯ ಗಣನೀಯವಾಗಿ ಕಡಿಮೆಯಾಗುತ್ತಿರುವುದು ತಿಳಿಯುತ್ತದೆ. 2016-17ರಲ್ಲಿ ಅದರ ದರ ಶೇಕಡ 17ರಷ್ಟಿತ್ತು. 17-18ರಲ್ಲಿ ಅದು ಶೇಕಡ 11ರಷ್ಟು ನಂತರ 2018-19ರಲ್ಲಿ ಕೇವಲ ಶೇ. 8ಕ್ಕೆ ಇಳಿದಿದೆ. ಅಂದರೆ ಕೇಂದ್ರದ ತೆರಿಗೆ ಆದಾಯ ಕಡಿಮೆಯಾಗುತ್ತಲೇ ಇದೆ. ತೆರಿಗೆ ಆದಾಯದ ಇಳಿತ ನಿಜವಾಗಿ ಆಗಿರುವುದು ಪರೋಕ್ಷ ತೆರಿಗೆಯಲ್ಲಿ. ನೇರ ತೆರಿಗೆ ಹೆಚ್ಚು ಕಮ್ಮಿ ಜಿಡಿಪಿಗೆ ಹೋಲಿಸಿ ನೋಡಿದರೆ ಅಷ್ಟೇ ಇದೆ. ಕೇಂದ್ರಕ್ಕೆ ಬರುತ್ತಿದ್ದ ಒಟ್ಟು ಪರೋಕ್ಷ ತೆರಿಗೆ 2016-17ರಲ್ಲಿ ಶೇ. 20ರಷ್ಟಿತ್ತು. ಅದು ಜಿಎಸ್‌ಟಿ ಜಾರಿಗೆ ಬಂದ ಮೇಲೆ 2017-18ರಲ್ಲಿ ಕೇವಲ ಶೇ. 6.3ರಷ್ಟಾಗಿತ್ತು. 2018-19ರಲ್ಲಿ ಅದು ಕೇವಲ ಶೇ. 2.7ರಷ್ಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಪರಿಷ್ಕೃತ ಅಂದಾಜಿನ ಪ್ರಕಾರ ಕೇಂದ್ರದ ತೆರಿಗೆ ಆದಾಯಕ್ಕೆ ಸಂಬಂಧಿಸಿದಂತೆ 2018-19ರಲ್ಲಿ ಒಟ್ಟು 22,48,175 ಕೋಟಿ ರೂಪಾಯಿಗಳು ಸಂಗ್ರಹವಾಗಬೇಕಿತ್ತು. ಆದರೆ ಸಿಜಿಎ ಮಾಹಿತಿಯ ಪ್ರಕಾರ ಆ ಸಾಲಿನಲ್ಲಿ ಸಂಗ್ರಹವಾಗಿರುವ ತೆರಿಗೆ 20,80,203 ಕೋಟಿ ರೂಪಾಯಿಗಳು. ಅಂದರೆ ಕೇಂದ್ರದ ತೆರಿಗೆ ಆದಾಯದಲ್ಲಿ 1,65,972 ಕೋಟಿ ಕಡಿಮೆಯಾಗಿದೆ. ಅದು ಒಟ್ಟು ತೆರಿಗೆ ಆದಾಯದ ಪರಿಷ್ಕೃತ ಅಂದಾಜಿನ ಶೇ. 13.5ರಷ್ಟು! ಜಿಡಿಪಿ ಪ್ರಮಾಣಕ್ಕೆ ಹೋಲಿಸಿದರೆ ಶೇ. 1ರಷ್ಟು. ಅದರಲ್ಲಿ ವಿಶೇಷವಾಗಿ ಆದಾಯ ತೆರಿಗೆಯಲ್ಲಿ 67,346 ಕೋಟಿ ಮತ್ತು ಜಿಎಸ್‌ಟಿಯಲ್ಲಿ 59,930 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. ಅದನ್ನು ಸರಿದೂಗಿಸಿಕೊಳ್ಳಬೇಕೆಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 25.3ರಷ್ಟು ಅಂದರೆ ಸುಮಾರು 4,00,000 ಕೋಟಿ ರೂಪಾಯಿಗಳಷ್ಟು ಹೆಚ್ಚಿಗೆ ಸಂಗ್ರಹವಾಗಬೇಕು. ಜಿಡಿಪಿ ದರ ಒಂದೇ ಸಮನೆ ಇಳಿಯುತ್ತಿರುವುದನ್ನು ನೋಡಿದರೆ ಇದರ ಸಾಧ್ಯತೆಯ ಬಗ್ಗೆ ಅನುಮಾನ ಬರುತ್ತದೆ. ಆರ್ಥಿಕತೆ ಕುಂಠಿತವಾದಷ್ಟು ತೆರಿಗೆ ಸಂಗ್ರಹಣೆಯೂ ಕಡಿಮೆಯಾಗಿರುವುದು ಸಹಜವೇ. ಹಾಗಾಗಿ ಆರ್ಥಿಕ ಪ್ರಗತಿ ತೀವ್ರವಾಗದೇ ಹೋದರೆ ಪರಿಸ್ಥಿತಿ ಸುಧಾರಿಸುವುದು ಕಷ್ಟ. ಜೊತೆಗೆ ನಿರುದ್ಯೋಗ, ಅಸಮಾನತೆ ಇವೆಲ್ಲಾ ಏರುತ್ತಾ ಹೋಗುವುದು ಕೂಡ ನಿರೀಕ್ಷಿತವೆ.

ಇದನ್ನು ತಮ್ಮ ಹೂಡಿಕೆಯನ್ನು ಕಡಿಮೆ ಮಾಡಿಕೊಳ್ಳುವುದರಿಂದ ಅಥವಾ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸರಿಮಾಡುವುದಕ್ಕೆ ಸಾಧ್ಯವಿಲ್ಲ. ಸರಕಾರ ಹೂಡಿಕೆ ಕಡಿಮೆ ಮಾಡಿದರೆ ಆರ್ಥಿಕತೆ ಮತ್ತಷ್ಟು ಕುಂಠಿತವಾಗುತ್ತದೆ. ಈಗ ಆಗುತ್ತಿರುವುದು ಅದೇ.

ತೆರಿಗೆಯ ಆದಾಯ ಕಡಿಮೆಯಾಗುವುದರ ಪರಿಣಾಮ ರಾಜ್ಯ ಸರಕಾರಗಳ ಮೇಲೂ ಆಗುತ್ತದೆ. ಅವುಗಳಿಗೆ ಬರುವ ಆದಾಯ ಕಡಿಮೆಯಾಗುತ್ತದೆ. ಹಾಗಾಗಿ ಎಲ್ಲದಕ್ಕೂ ಅವರು ಕೇಂದ್ರವನ್ನು ಅವಲಂಬಿಸಬೇಕಾಗುತ್ತದೆ. ಅವರ ಮರ್ಜಿಯನ್ನು ಅನುಸರಿಸಬೇಕಾಗುತ್ತದೆ.

ಸಂಪತ್ತಿನ ಮೇಲೆ ತೆರಿಗೆ, ಉತ್ತರಾಧಿಕಾರಿ (ಇನ್‌ಹರಿಟೆನ್ಸ್) ತೆರಿಗೆ, ಹೀಗೆ ಮಿಕ್ಕ ಆದಾಯದ ಮೂಲಗಳನ್ನು ಪರಿಶೀಲಿಸಿ, ಸರಕಾರ ತನ್ನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುವುದು ತುರ್ತಾಗಿ ಆಗಬೇಕಾಗಿದೆ. ಸರಕಾರದ ಹೂಡಿಕೆಯ ಮಹತ್ವವನ್ನು ಕೇನ್ಸ್ 80 ವರ್ಷಗಳ ಹಿಂದೆಯೇ ಕಂಡುಕೊಂಡಿದ್ದ. ಈಗಲಾದರೂ ಈ ಸತ್ಯ ನಮಗೆ ಸ್ಪಷ್ಟವಾಗಬೇಕು.

Writer - ಟಿ. ಎಸ್. ವೇಣುಗೋಪಾಲ್

contributor

Editor - ಟಿ. ಎಸ್. ವೇಣುಗೋಪಾಲ್

contributor

Similar News

ಜಗದಗಲ
ಜಗ ದಗಲ