ಇಸ್ರೋದಿಂದ ಹೊಸ ಮೈಲುಗಲ್ಲು: ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2

Update: 2019-08-20 13:49 GMT

ಬೆಂಗಳೂರು,ಆ.20: ಚಂದ್ರಯಾನ 2 ಮಂಗಳವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸುವ ಮೂಲಕ ಚಂದ್ರನ ಅಧ್ಯಯನ ನಡೆಸುವ ಭಾರತದ ಮಹಾತ್ವಾಕಾಂಕ್ಷೆಯ ಯೋಜನೆ ಪ್ರಮುಖ ಮೈಲುಗಲ್ಲನ್ನು ಸಾಧಿಸಿದೆ. ಮಂಗಳವಾರ ಬೆಳಿಗ್ಗೆ 9.02 ಹೊತ್ತಿಗೆ ಚಂದ್ರಯಾನ 2ವನ್ನು ಚಂದ್ರನ ಕಕ್ಷೆಗೆ ಸೆರಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಚಂದ್ರಯಾನ 2ವನ್ನು ಚಂದ್ರನ ಮೇಲ್ಮೈಗಿಂತ ನೂರು ಕಿ.ಮೀ ಅಂತರದಲ್ಲಿ ಅದರ ಧ್ರುವಗಳನ್ನು ಹಾದು ಸಾಗುವ ಅಂತಿಮ ಕಕ್ಷೆಗೆ ಸೇರಿಸಲು ಹಲವು ಕಕ್ಷೆ ಸೇರಿಸುವಿಕೆ ಪ್ರಕ್ರಿಯೆಗಳು ನಡೆಯಲಿವೆ. ಸೆಪ್ಟೆಂಬರ್ 2ರಂದು ಆರ್ಬಿಟರ್‌ನಿಂದ ಲ್ಯಾಂಡರನ್ನು ಪ್ರತ್ಯೇಕಿಸುವ ಕಾರ್ಯ ನಡೆಯಲಿದೆ. ಸೆಪ್ಟೆಂಬರ್ 3ರಂದು ಲ್ಯಾಂಡರ್‌ನ ಎಲ್ಲ ವ್ಯವಸ್ಥೆಗಳು ಸರಿಯಾಗಿ ಕಾರ್ಯಾಚರಿಸುತ್ತಿವೆ ಎನ್ನುವುದನ್ನು ಖಾತ್ರಿಪಡಿಸಲು ಸಣ್ಣ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಂತಿಮವಾಗಿ ಆರ್ಬಿಟರ್‌ನಿಂದ ಪ್ರತ್ಯೇಕಗೊಳ್ಳಲಿರುವ ಲ್ಯಾಂಡರ್ ಚಂದ್ರನ ಸುತ್ತ 100ಕಿ.ಮೀ*30ಕಿ.ಮೀ ಕಕ್ಷೆಯನ್ನು ಪ್ರವೇಶಿಸಲಿದೆ. ನಂತರ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಲು ಸೆಪ್ಟೆಂಬರ್ 7ರಂದು ಸಂಕೀರ್ಣ ಪ್ರಕ್ರಿಯೆಗಳ ಸರಣಿಯನ್ನು ನಡೆಸಲಾಗುವುದು ಎಂದು ಶಿವನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News