ಐಎನ್‌ಎಕ್ಸ್ ಪ್ರಕರಣ: ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

Update: 2019-08-20 13:37 GMT

ಹೊಸದಿಲ್ಲಿ, ಆ.20: ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಈ ಪ್ರಕಣದಲ್ಲಿ ಚಿದಂಬರಮ್ ಪುತ್ರ ಕಾರ್ತಿ ಕೂಡಾ ಆರೋಪಿಯಾಗಿದ್ದಾರೆ.

ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಸುನೀಲ್ ಗೌರ್, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಬೇಕು ಎಂಬ ಚಿದಂಬರಂ ಅವರ ಮನವಿಯನ್ನೂ ತಳ್ಳಿಹಾಕಿದ್ದಾರೆ. ಐಎನ್‌ಎಕ್ಸ್ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದ್ದು ಚಿದಂಬರಮ್ ಅವರು ವಿಚಾರಣೆಯ ಸಮಯದಲ್ಲಿ ಗೈರಾಗಿದ್ದ ಕಾರಣ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಹಾಗಾಗಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ವಾದಿಸಿದ್ದವು.

ವಿದೇಶಿ ವರ್ಗಾವಣೆ ಪ್ರೋತ್ಸಾಹ ಮಂಡಳಿಗೆ ವಂಚಿಸಿದ್ದ ಐಎನ್‌ಎಕ್ಸ್ ಸಂಸ್ಥೆಯ ನಿರ್ದೇಶಕರಾದ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಶಿಕ್ಷೆಗೊಳಗಾಗುವುದನ್ನು ತಪ್ಪಿಸಲು ಕಾರ್ತಿ ಚಿದಂಬರಂ ಸಂಸ್ಥೆಗೆ ಹತ್ತು ಲಕ್ಷ ರೂ. ನೀಡಿದ್ದರು ಎಂದು ಆರೋಪಿಸಿ 2017ರ ಮೇಯಲ್ಲಿ ಇಡಿ ಕಾರ್ತಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News