ಅಡುಗೆ ಮನೆಯಲ್ಲಿನ ಈ ಸಾಮಾನ್ಯ ತರಕಾರಿ ಮಧುಮೇಹವನ್ನು ನಿಯಂತ್ರಿಸುತ್ತದೆ!

Update: 2019-08-20 15:55 GMT

ಮಧುಮೇಹಿಗಳಿಗೆ ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ತಾವು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎನ್ನುವುದರ ಬಗ್ಗೆ ಅವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಇವುಗಳಲ್ಲಿ ಎಲ್ಲರ ಅಡಿಗೆ ಮನೆಗಳಲ್ಲಿ ಸಾಮಾನ್ಯವಾಗಿರುವ ಈರುಳ್ಳಿ ಪ್ರಮುಖವಾಗಿದೆ.

ಕೆಂಪು ಈರುಳ್ಳಿ ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. 100 ಗ್ರಾಮ್ ಕೆಂಪು ಈರುಳ್ಳಿ ಸೇವನೆಯು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಕಡಿಮೆ ಮಾಡುತ್ತದೆ. ಮಧುಮೇಹಿಗಳು ಈರುಳ್ಳಿಯನ್ನು ತಿನ್ನಬೇಕು ಎನ್ನಲು ಕಾರಣಗಳಿವೆ...

► ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ

 ಈರುಳ್ಳಿಯು ಕಡಿಮೆ ಗ್ಲೈಸಿಮಿಕ್ ಸೂಚ್ಯಂಕವನ್ನು ಹೊಂದಿರುವ ಪರಿಪೂರ್ಣ ಆಹಾರವಾಗಿದೆ. ಸೇವಿಸಿದ ಆಹಾರವು ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗ್ಲೈಸಿಮಿಕ್ ಸೂಚ್ಯಂಕವು ಸೂಚಿಸುತ್ತದೆ.

55ಕ್ಕಿಂತ ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ ಹೊಂದಿರುವ ಆಹಾರಗಳು ರಕ್ತದಲ್ಲಿ ಅತಿಯಾಗಿ ಸಕ್ಕರೆಯನ್ನು ಬಿಡುಗಡೆ ಮಾಡುವುದಿಲ್ಲ,ಹೀಗಾಗಿ ಅವು ಮಧುಮೇಹಿಗಳ ಪಾಲಿಗೆ ಒಳ್ಳೆಯ ಆಹಾರಗಳು ಎಂದು ಪರಿಗಣಿಸಲಾಗಿದೆ. ಈರುಳ್ಳಿಯು ಕೇವಲ 10ರಷ್ಟು ಗ್ಲೈಸಿಮಿಕ್ ಸೂಚ್ಯಂಕವನ್ನು ಹೊಂದಿದೆ.

► ಕಡಿಮೆ ಕಾರ್ಬೊಹೈಡ್ರೇಟ್‌ಗಳು

    ಈರುಳ್ಳಿಯು ಅತ್ಯಂತ ಕಡಿಮೆ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿದೆ. ಅತಿಯಾದ ಕಾರ್ಬೊಹೈಡ್ರೇಟ್‌ಗಳ ಸೇವನೆ ರಕ್ತದಲ್ಲಿನ ಸಕ್ಕರೆಯ ಮಟ್ಟಕ್ಕೆ ಸಂಬಂಧಿಸಿದಂತೆ ಒಳ್ಳೆಯದಲ್ಲ. ಅತಿಯಾದ ಕಾರ್ಬೊಹೈಡ್ರೇಟ್‌ಗಳ ಸೇವನೆಯು ಟೈಪ್-2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅರ್ಧ ಕಪ್ ಹೆಚ್ಚಿದ ಈರುಳ್ಳಿಯಲ್ಲಿ ಕೇವಲ 5.9 ಗ್ರಾಮ್‌ನಷ್ಟು ಕಾರ್ಬೊಹೈಡ್ರೇಟ್‌ಗಳಿರುತ್ತವೆ.

► ನಾರಿನ ಆಗರ

 ಮಧುಮೇಹಿಗಳಿಗೆ ನಾರು ಅತ್ಯಂತ ಲಾಭದಾಯಕವಾಗಿದೆ. ಅದು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ನಾರನ್ನು ಒಳಗೊಂಡಿರುವುದರಿಂದ ಅದು ಮಧುಮೇಹಿಗಳಿಗೆ ಪರಿಪೂರ್ಣ ಆಹಾರವಾಗಿದೆ. ನಾರು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ. ನಾರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಹೃದಯದ ಆರೋಗ್ಯವನು ನಉತ್ತೇಜಿಸುತ್ತದೆ.

► ಮಧುಮೇಹಿಗಳು ಈರುಳ್ಳಿಯನ್ನು ಹೇಗೆ ಸೇವಿಸಬೇಕು?

ಮಧುಮೇಹದಿಂದ ಬಳಲುತ್ತ್ತಿರುವವರು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಈರುಳ್ಳಿಯನ್ನು ಹಸಿಯಾಗಿಯೇ ತಿನ್ನಬೇಕು ಮತ್ತು ಆಯ್ಕೆ ಕೆಂಪು ಈರುಳ್ಳಿಯಾಗಿರಬೇಕು. ಸಲಾಡ್ ಮತ್ತು ಸ್ಯಾಂಡ್ ವಿಚ್‌ಗಳಲ್ಲಿಯೂ ಹಸಿ ಈರುಳ್ಳಿಯನ್ನು ಸೇರಿಸಿ ತಿನ್ನಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News