ಪೆಲೆಟ್ ಗುಂಡಿನಿಂದ ಗಾಯಗೊಂಡವರಿಗೆ ಚಿಕಿತ್ಸೆ: ಕಾಶ್ಮೀರ ಆಸ್ಪತ್ರೆ ಆಡಳಿತ ಮಂಡಳಿ ಮೌನ

Update: 2019-08-20 15:51 GMT

ಶ್ರೀನಗರ, ಆ. 20: ಜಮ್ಮು ಹಾಗೂ ಕಾಶ್ಮೀರದಲ್ಲಿ ಸೇನೆಯ ಪೆಲೆಟ್ ಗುಂಡಿನಿಂದ ಗಾಯಗೊಂಡವರನ್ನು ಶ್ರೀನಗರದ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯ ಆಪ್ತಮೋಲಜಿಯ (ಕಣ್ಣಿಗೆ ಸಂಬಂಧಿಸಿದ) ಖಾದಿರಿಸಿದ 8ನೇ ವಾರ್ಡ್‌ಲ್ಲಿ ದಾಖಲಿಸಲಾಗಿದೆ. ಆದರೆ, ಪೆಲೆಟ್ ಗುಂಡಿನಿಂದ ಗಾಯಗೊಂಡವರ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಮಾಹಿತಿ ನೀಡುತ್ತಿಲ್ಲ.

ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಸಂದರ್ಶಕರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಈ ಹಿಂದೆ ಪೆಲೆಟ್ ಗುಂಡಿನಿಂದ ಗಾಯಗೊಂಡವರ ವಿವರಗಳನ್ನು ಆಸ್ಪತ್ರೆಯ ಸಿಬ್ಬಂದಿ ನೀಡುತ್ತಿದ್ದರು. ಆದರೆ, ಈಗ ಇಲ್ಲಿ ಪೆಲೆಟ್ ಗುಂಡಿನಿಂದ ಗಾಯಗೊಂಡವರ ಬಗ್ಗೆ ಸಿಬ್ಬಂದಿ ಮೌನ ವಹಿಸಿದ್ದಾರೆ.

ಪೆಲೆಟ್ ಗುಂಡಿನಿಂದ ಗಾಯಗೊಂಡು ಈ ಆಸ್ಪತ್ರೆಯಲ್ಲಿ ಯಾರು ದಾಖಲಾಗಿದ್ದಾರೆ ಎಂದು ನನಗೆ ಗೊತ್ತಿಲ್ಲ. ವಿವರಗಳನ್ನು ಹಿರಿಯ ವೈದ್ಯರಿಂದ ಪಡೆದುಕೊಳ್ಳಿ. ನಮಗೆ ಈ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ ಎಂದು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೊಬ್ಬರು ತಿಳಿಸಿದ್ದಾರೆ.

ಆದರೆ, ಹಳೆ ನಗರದ 75 ವರ್ಷದ ವ್ಯಕ್ತಿಯೋರ್ವ ಸೇರಿದಂತೆ ಪೆಲೆಟ್ ಗುಂಡಿನಿಂದ ಗಾಯಗೊಂಡ 5 ಮಂದಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಶ್ಮೀರದಲ್ಲಿ ಕೆಲವರು ಪೆಲೆಟ್ ಗುಂಡಿನಿಂದ ಗಾಯಗೊಂಡಿದ್ದಾರೆ ಎಂಬುದನ್ನು ಪ್ರಾಥಮಿಕ ಕಾರ್ಯದರ್ಶಿ ಹಾಗೂ ಸರಕಾರದ ವಕ್ತಾರ ರೋಹಿತ್ ಕನ್ಸಾಲ್ ಒಪ್ಪಿಕೊಂಡಿದ್ದ್ದಾರೆ. ಆದರೆ, ಪೆಲೆಟ್ ಗುಂಡಿನಿಂದ ಎಷ್ಟು ಮಂದಿಗೆ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಅವರು ಖಚಿತವಾಗಿ ಏನನ್ನೂ ಹೇಳಿಲ್ಲ.

  ‘‘ಪ್ರತಿಯೊಂದು ಕೇಂದ್ರೀಕೃತವಾಗಿದೆ. ಪ್ರತಿ ಆಸ್ಪತ್ರೆ ಮಾಹಿತಿಯನ್ನು ಜಿಎಂಸಿ (ಸರಕಾರಿ ಮೆಡಿಕಲ್ ಕಾಲೇಜು) ಪ್ರಾಂಶುಪಾಲರಿಗೆ ಸಲ್ಲಿಸಬೇಕು. ನಾವು ಯಾರೊಬ್ಬರಿಗೂ ಮಾಹಿತಿ ನೀಡಲು ಸಾಧ್ಯವಿಲ್ಲ’’ ಎಂದು ಎಸ್‌ಎಂಎಚ್‌ಎಸ್‌ನ ವೈದ್ಯಕೀಯ ಅಧೀಕ್ಷಕ ನಾಝಿರ್ ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News