ಕಾನ್ವೆಂಟ್‌ನಲ್ಲಿ ಕ್ರೈಸ್ತ ಸನ್ಯಾಸಿನಿಯ ಅಕ್ರಮ ಬಂಧನ: ದೂರು ದಾಖಲು

Update: 2019-08-20 16:12 GMT

ಕಲ್ಪೆಟ್ಟ (ಕೇರಳ), ಆ.20: ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಲೂಸಿ ಕಲಪ್ಪುರ ಎಂಬವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ಆರೋಪದಲ್ಲಿ ವೆಲ್ಲಮುಂಡ ಪೊಲೀಸರು ಕೇರಳದ ವಯನಾಡ್ ಜಿಲ್ಲೆಯ ಕರಕ್ಕಮಲದಲ್ಲಿರುವ ಫ್ರಾನ್ಸಿಸಿಯನ್ ಕ್ಲಾರಿಸ್ಟ್ ಕಾಂಗ್ರೆಗೆಶನ್ (ಎಫ್‌ಸಿಸಿ) ಕಾನ್ವೆಂಟ್‌ನ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಜಲಂದರ್‌ನ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಳ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಸ್ಟರ್ ಲೂಸಿಯವರನ್ನು ಎಫ್‌ಸಿಸಿಯ ಕಾನೂನನ್ನು ಉಲ್ಲಂಘಿಸಿರುವುದಕ್ಕೆ ತೃಪ್ತಿಕರ ವಿವರಣೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಎಫ್‌ಸಿಸಿ ಉಚ್ಛಾಟಿಸಿತ್ತು. ತನ್ನನ್ನು ಅಕ್ರಮ ಬಂಧನದಲ್ಲಿರಿಸಲಾಗಿರುವ ಕಾರಣ ತಾನು ಸಮೀಪದ ಚರ್ಚ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆಯುವ ಪ್ರಾರ್ಥನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ವೆಲ್ಲಮುಂಡು ವೃತ್ತ ನಿರೀಕ್ಷಕ ಎಂ.ಎ ಸಂತೋಶ್ ತಿಳಿಸಿದ್ದಾರೆ.

ಸೋಮವಾರದಂದು ಸಿಸ್ಟರ್ ಲೂಸಿ ಹೊರಗೆ ತೆರಳಲು ಕಾನ್ವೆಂಟ್‌ನ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಅದಕ್ಕೆ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಆಗಮಿಸಿ ಬೀಗ ತೆಗೆದಿದ್ದಾರೆ ಎಂದು ಸಂತೋಶ್ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 242ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News