ಪೆಹ್ಲು ಖಾನ್ ಹತ್ಯೆ ಪ್ರಕರಣ: ವೀಡಿಯೊ ತುಣುಕು ನೈಜ ಎಂದ ಪ್ರಯೋಗಾಲಯ ವರದಿ

Update: 2019-08-20 16:40 GMT

ಜೈಪುರ, ಆ. 20: ರಾಜಸ್ಥಾನದ ಆಲ್ವಾರ್‌ನಲ್ಲಿ ಹೈನುಗಾರ ಪೆಹ್ಲೂ ಖಾನ್ ಅವರನ್ನು ಗೋರಕ್ಷಕರು ಥಳಿಸಿ ಹತ್ಯೆಗೈದ ಘಟನೆಯ ಎರಡು ವೀಡಿಯೋ ತುಣುಕುಗಳ ನೈಜವಾದುದು ಎಂದು ಸರಕಾರಿ ವಿಧಿವಿಜ್ಞಾನ ಪ್ರಯೋಗಾಲಯ ತಿಳಿಸಿತ್ತು. ಆದರೆ, ತನಿಖಾಧಿಕಾರಿಗಳ ವಿರೋಧಾಭಾಸದ ಹೇಳಿಕೆಗಳು ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದೆ ಹಾಗೂ ಅವರನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸುವುದಕ್ಕೆ ಅಡ್ಡಿ ಉಂಟಾಗಿದೆ.

55 ವರ್ಷದ ಪೆಹ್ಲೂ ಖಾನ್ ಅವರನ್ನು ಗುಂಪು ಥಳಿಸಿ ಹತ್ಯೆಗೈಯು ತ್ತಿರುವ 2017 ಎಪ್ರಿಲ್ 1ರಂದು ದಾಖಲಿಸಿದ ಎರಡು ಪ್ರತ್ಯೇಕ ವೀಡಿಯೊಗಳನ್ನು ತಿರುಚಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿತ್ತು.

‘‘ಘಟನೆ ಬಗೆಗಿನ ಎರಡು ಪ್ರತ್ಯೇಕ ವೀಡಿಯೊಗಳಲ್ಲಿ ಯಾವುದೇ ಸ್ಥಗಿತ ಕಂಡು ಬಂದಿಲ್ಲ’’ ಎಂದು ಜೈಪುರದ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯ 2018 ಜುಲೈ 10ರಂದು ನೀಡಿದ ವರದಿ ಹೇಳಿತ್ತು.

ಪೆಹ್ಲೂ ಖಾನ್‌ನ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದ ತೀರ್ಪನ್ನು ಆಗಸ್ಟ್ 14ರಂದು ನೀಡಿದ ಹೆಚ್ಚುವರಿ ಜಿಲ್ಲಾ ನ್ಯಾಯಮೂರ್ತಿ ಸರಿತಾ ಸ್ವಾಮಿ ವಿಧಿವಿಜ್ಞಾನದ ವರದಿ ಉಲ್ಲೇಖಿಸಿದ್ದಾರೆ. ಆದರೆ, ಅದನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವೀಡಿಯೊವನ್ನು ಜನವರಿ 11ರಂದು ಸ್ವೀಕರಿಸಲಾಗಿತ್ತು ಎಂಬುದನ್ನು ವಿಧಿವಿಜ್ಞಾನ ವರದಿ ದಿನಾಂಕ ತೋರಿಸಿದೆ. ಅಂದರೆ ಹೆಚ್ಚುಕಡಿಮೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿ ದಾಖಲಿಸಿದ ಎರಡೂವರೆ ತಿಂಗಳ ಬಳಿಕ ಹಾಗೂ ಗಂಭೀರ ಗಾಯದಿಂದ ಪೆಹ್ಲೂ ಖಾನ್ ಮೃತಪಟ್ಟ 8 ತಿಂಗಳ ನಂತರ ವೀಡಿಯೊವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ವೀಡಿಯೊ ದಾಖಲಿಸಿದ ಮೊಬೈಲ್ ಸಲ್ಲಿಸಿಲ್ಲ, ಮೊಬೈಲ್‌ನ ಮಾಲಕತ್ವವನ್ನು ಸಾಬೀತುಪಡಿಸಿಲ್ಲ, ವೀಡಿಯೋ ಚಿತ್ರಿಕರಿಸಲು ಆರಂಭಿಸಿದ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಅದು ಕೊನೆಗೊಂಡ ನಡುವೆ ನಡೆದ ಸರಣಿ ಘಟನೆಗಳ ಅಸಾಂಗತ್ಯದ ಬಗ್ಗೆ ಸ್ವಾಮಿ ಪೊಲೀಸರನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News