ಕ್ಷಿಪಣಿ ಪರೀಕ್ಷೆ ಮೂಲಕ ಸೇನಾ ಉದ್ವಿಗ್ನತೆ ಹೆಚ್ಚಿಸುತ್ತಿರುವ ಅಮೆರಿಕ: ರಶ್ಯ ಆರೋಪ

Update: 2019-08-20 17:04 GMT

ಮಾಸ್ಕೋ, ಆ. 20: ರಶ್ಯದೊಂದಿಗಿನ ಸೇನಾ ಒಪ್ಪಂದವೊಂದರಿಂದ ಹಿಂದೆಗೆದ ಬಳಿಕ, ಮಧ್ಯಮ ವ್ಯಾಪ್ತಿಯ ಕ್ರೂಸ್ ಕ್ಷಿಪಣಿಯೊಂದನ್ನು ಪರೀಕ್ಷೆ ಮಾಡುವ ಮೂಲಕ ಅಮೆರಿಕವು ಸೇನಾ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ  ಎಂದು   ರಶ್ಯ ಮಂಗಳವಾರ ಆರೋಪಿಸಿದೆ.

‘‘ಇದು ವಿಷಾದಕ್ಕೆ ಕಾರಣವಾಗಿದೆ. ಅಮೆರಿಕವು ಖಂಡಿತವಾಗಿಯೂ ಸೇನಾ ಉದ್ವಿಗ್ನತೆಯನ್ನು ಹೆಚ್ಚಿಸುವ ದಾರಿಯಲ್ಲಿ ಸಾಗುತ್ತಿದೆ. ಆದರೆ, ನಾವು ಪ್ರಚೋದನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’’ ಎಂದು ರಶ್ಯದ ಉಪ ವಿದೇಶ ಸಚಿವ ಸರ್ಗೀ ರಯಬ್‌ಕೊವ್ ‘ಟಾಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

1987ರಲ್ಲಿ ಸೋವಿಯತ್ ಯೂನಿಯನ್ ಜೊತೆಗೆ ಸಹಿ ಹಾಕಿದ ಇಂಟರ್‌ಮೀಡಿಯಟ್ ರೇಂಜ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್‌ಎಫ್) ಒಪ್ಪಂದದಲ್ಲಿ ನಿಷೇಧಿಸಲಾಗಿರುವ ನೆಲದಿಂದ ಹಾರಿಸುವ ಮಾದರಿಯ ಕ್ಷಿಪಣಿಯೊಂದರ ಪರೀಕ್ಷೆ ನಡೆಸಿರುವುದಾಗಿ ಅಮೆರಿಕ ಸೋಮವಾರ ತಿಳಿಸಿದೆ.

ಅಮೆರಿಕವು ಈ ಒಪ್ಪಂದದಿಂದ ಈ ತಿಂಗಳ ಆದಿ ಭಾಗದಲ್ಲಿ ಹೊರಬಂದಿದೆ.

ಕ್ಯಾಲಿಫೋನಿರ್ಯ ರಾಜ್ಯದ ಕರಾವಳಿಯ ಸಮುದ್ರದಲ್ಲಿರುವ ಸ್ಯಾನ್ ನಿಕೊಲಸ್ ದ್ವೀಪದಿಂದ ಕ್ಷಿಪಣಿಯನ್ನು ಹಾರಿಸಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಈ ಒಪ್ಪಂದವನ್ನು ರಶ್ಯ ಹಲವು ಬಾರಿ ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದೆ.

‘‘ದುಬಾರಿ ಶಸ್ತ್ರಾಸ್ತ್ರ ಸ್ಪರ್ಧೆಗೆ ಇಳಿಯಲು ನಾವು ಇಚ್ಛಿಸುವುದಿಲ್ಲ’’ ಎಂದು ರಯಬ್‌ಕೊವ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News