ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಣೆ ಚರ್ಚೆಯಾಗಲಿ

Update: 2019-08-21 05:15 GMT

‘‘ಮೀಸಲಾತಿ ಚರ್ಚೆಯಾಗಲಿ’’ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ‘ಮೀಸಲಾತಿಯನ್ನು ಬೆಂಬಲಿಸುವವರು ಮತ್ತು ಅದನ್ನು ವಿರೋಧಿಸುವವರ ನಡುವೆ ಸೌಹಾರ್ದ ವಾತಾವರಣದಲ್ಲಿ ಚರ್ಚೆ ನಡೆಯಬೇಕು’ ಎನ್ನುವುದು ಅವರ ಅಭಿಮತ. ಅವರ ಮಾತಿನಂತೆ ‘ಇಂದು ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಮೀಸಲಾತಿ.’. ಆದುದರಿಂದ ಸೌಹಾರ್ದ ವಾತಾವರಣದಲ್ಲಿ ಇದು ಚರ್ಚೆಯಾಗಿ ಇತ್ಯರ್ಥವಾಗಬೇಕು. ಇದು ಆರೆಸ್ಸೆಸ್‌ನ ಪುರಾತನ ತಂತ್ರವಾಗಿದೆ. ಕೃತಕ ಸಮಸ್ಯೆಗಳನ್ನು ಸೃಷ್ಟಿಸಿ ನಿಜವಾದ ಸಮಸ್ಯೆಗಳನ್ನು ಬದಿಗೆ ಸರಿಸುವುದು. ಈ ದೇಶದ ಸಮಸ್ಯೆ ಮೀಸಲಾತಿಯಲ್ಲ, ಜಾತೀಯತೆ ಎನ್ನುವುದು ಆರೆಸ್ಸೆಸ್ ನಾಯಕರಿಗೆ ತಿಳಿಯದ್ದೇನೂ ಅಲ್ಲ. ಈ ದೇಶದಲ್ಲಿ ಜಾತೀಯತೆ ಒಂದು ದೊಡ್ಡ ಸಮುದಾಯವನ್ನು ಅಭಿವೃದ್ಧಿಯ ಕಡೆಗೆ ಸಾಗದಂತೆ ತಡೆದಿದೆ. ಇಂದು ಮೀಸಲಾತಿಯನ್ನು ವಿರೋಧಿಸುತ್ತಿರುವವರು ಈ ಜಾತೀಯತೆಯ ಪೋಷಕರೇ ಆಗಿದ್ದಾರೆ. ಆದುದರಿಂದ ತುರ್ತಾಗಿ ಚರ್ಚೆಯಾಗಬೇಕಾದುದು ಜಾತೀಯತೆಯೇ ಹೊರತು ಮೀಸಲಾತಿಯಲ್ಲ.

ನಾವಿಂದು ಕೀಳರಿಮೆ ಪಡಬೇಕಾದುದು ಮೀಸಲಾತಿ ನೀಡಲೇಬೇಕಾದ ಅನಿವಾರ್ಯವನ್ನು ಸೃಷ್ಟಿಸಿದ ಜಾತೀಯತೆಯ ಕುರಿತಂತೆ. ಮೀಸಲಾತಿಯನ್ನು ತೆಗೆದಾಕ್ಷಣ ಜಾತೀಯತೆ ಈ ದೇಶದಲ್ಲಿ ಅಳಿಯುವುದಿಲ್ಲ. ಎಲ್ಲಿಯವರೆಗೆ ಜಾತೀಯತೆ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಅಸ್ತಿತ್ವದಲ್ಲಿರುವುದು ಈ ದೇಶದ ಪಾಲಿಗೆ ಅನಿವಾರ್ಯವಾಗಿದೆ. ತಲೆತಲಾಂತರಗಳಿಂದ ಅವಕಾಶ ವಂಚಿತ ಸಮುದಾಯ ಮೀಸಲಾತಿಯ ಕಾರಣದಿಂದ ಅಲ್ಪಸ್ವಲ್ಪ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಇಷ್ಟಕ್ಕೂ ಮೀಸಲಾತಿ ಚರ್ಚೆಯಾಗಲೇಬೇಕಾದರೆ, ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ನಾವು ಎಡವಿದ್ದು ಹೇಗೆ? ಮೀಸಲಾತಿ ಯಾಕೆ ಶೋಷಿತ ಸಮುದಾಯಗಳನ್ನು ಮೇಲೆತ್ತುವುದಕ್ಕೆ ವಿಫಲವಾಗಿದೆ? ಎನ್ನುವ ವಿಷಯಗಳು ಚರ್ಚೆಯಾಗಲಿ. ಆ ಮೂಲಕ ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಡೆಗೆ ಸರಕಾರ ಮನ ಮಾಡಬೇಕು.

ಸರಕಾರಿ ಸಂಸ್ಥೆಗಳು ಒಂದೊಂದಾಗಿ ಖಾಸಗೀಕರಣಗೊಳ್ಳುತ್ತಿರುವ ಹೊತ್ತಿನಲ್ಲಿ, ಮೀಸಲಾತಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಜನಸಂಖ್ಯಾಬಲವನ್ನು ಮುಂದಿಟ್ಟುಕೊಂಡು ಪ್ರಬಲ ಜಾತಿಗಳೂ ಮೀಸಲಾತಿಗಾಗಿ ಬೀದಿಗಿಳಿದಿವೆ. ಕೆಲವು ರಾಜ್ಯಗಳಲ್ಲಿ ಪ್ರಬಲ ಜಾತಿಗಳು ಮೀಸಲಾತಿಗಳನ್ನು ತಮ್ಮದಾಗಿಸಿಕೊಂಡಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಪ್ರಾತಿನಿಧ್ಯವಿರುವ ಈ ಜಾತಿಗಳು ಮೀಸಲಾತಿಯನ್ನು ಪಡೆದುಕೊಳ್ಳುವುದೆಂದರೆ ಇನ್ನಷ್ಟು ಪ್ರಾತಿನಿಧ್ಯಗಳನ್ನು ಬಾಚಿಕೊಳ್ಳುವುದು ಎಂದರ್ಥ. ಇದು ಈ ನೆಲದ ದಲಿತರನ್ನು ಪರೋಕ್ಷವಾಗಿ ಇನ್ನಷ್ಟು ದುರ್ಬಲಗೊಳಿಸುತ್ತದೆ. ಮೇಲ್ಜಾತಿಗಳ ಮೀಸಲಾತಿ ಹೋರಾಟದ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ.

ದಲಿತರು ಸೇರಿದಂತೆ ಹಿಂದುಳಿದವರ್ಗದ ಶೋಷಿತ ಸಮುದಾಯಕ್ಕೆ ಸಿಗುತ್ತಿರುವ ಮೀಸಲಾತಿಯನ್ನು ದುರ್ಬಲಗೊಳಿಸಲು ಪ್ರಬಲ ಜಾತಿಗಳು ಮೀಸಲಾತಿಗಾಗಿ ಬೀದಿಗಿಳಿಯುವಂತೆ ಮಾಡಿದೆ. ಅಷ್ಟೇ ಅಲ್ಲ, ಅಂತಿಮವಾಗಿ ಮೇಲ್ಜಾತಿಯ ಬಡವರಿಗೂ ಮೀಸಲಾತಿ ಸಿಗುವಂತೆ ಮಾಡಿ, ಮೀಸಲಾತಿಯ ಉದ್ದೇಶವನ್ನೇ ಬುಡಮೇಲು ಗೊಳಿಸಿತು. ಮೀಸಲಾತಿಯಿರುವುದು ‘ಬಡತನ ನಿವಾರಣೆ’ಗಲ್ಲ. ಒಬ್ಬನ ಬಡತನ ಆತನ ‘ಅಸ್ಮಿತೆ’ ಖಂಡಿತ ಅಲ್ಲ. ಬಡತನವನ್ನು ಇಲ್ಲವಾಗಿಸಲು ಹಲವು ಯೋಜನೆಗಳನ್ನು ಸರಕಾರವೇ ಘೋಷಿಸಿದೆ. ಈ ಯೋಜನೆಗಳನ್ನು ಜಾತಿ ಆಧಾರಿತವಾಗಿ ಹಂಚಲಾಗುತ್ತಿಲ್ಲ. ರೇಷನ್, ಆಸ್ಪತ್ರೆ ಸೌಲಭ್ಯ, ನಿವೇಶನ ಇತ್ಯಾದಿ ಸೌಲಭ್ಯಗಳು ದೇಶದಲ್ಲಿರುವ ಎಲ್ಲ ಬಡವರಿಗೂ ಸಿಗುತ್ತದೆ. ಆದರೆ ಮೀಸಲಾತಿ, ‘ಜಾತಿಯ ಕಾರಣ’ದಿಂದ ಅವಕಾಶ ವಂಚಿತರಾಗಿರುವ ಸಮುದಾಯಕ್ಕೆ ದಕ್ಕಬೇಕಾದುದು. ಆದರೆ ಇಂದು ಮೇಲ್ಜಾತಿಯ ಬಡವರಿಗೂ ಮೀಸಲಾತಿ ಎನ್ನುವ ಮೂಲಕ, ಮೀಸಲಾತಿಯ ಉದ್ದೇಶವನ್ನೇ ತಿರುಚಲಾಗಿದೆ. ಮೀಸಲಾತಿ ಯಾಕೆ ನೀಡುತ್ತಿದ್ದೇವೆ ಎನ್ನುವುದೇ ಸ್ಪಷ್ಟವಿಲ್ಲದ ಸರಕಾರ, ಅದನ್ನು ಯಶಸ್ವಿಯಾಗಿ ಜಾರಿಗೊಳಿಸೀತಾದರೂ ಹೇಗೆ?

  ಮೀಸಲಾತಿಯ ಪ್ರಶ್ನೆ ಬಂದಾಗಲೆಲ್ಲ, ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಅದನ್ನು ವಿರೋಧಿಸುತ್ತಾರೆ. ‘ಸ್ವತಃ ಅಂಬೇಡ್ಕರ್ ಅವರೇ ಮೀಸಲಾತಿ ಇಂತಿಷ್ಟು ವರ್ಷಗಳ ಬಳಿಕ ರದ್ದಾಗಬೇಕು’ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೆಸ್ಸೆಸ್ ಮುಖಂಡರು ಆಗಾಗ ಹೇಳುವುದಿದೆ. ಮೀಸಲಾತಿಗೆ ಒಂದು ಉದ್ದೇಶವಿದೆ. ಕೆಳಜಾತಿಯ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮೇಲೆತ್ತುವುದು. ಮೀಸಲಾತಿಯ ಮೂಲಕ ಆ ಉದ್ದೇಶ ಈಡೇರಿದೆಯೇ? ಇಲ್ಲ ಎನ್ನುವುದು ಸ್ಪಷ್ಟ. ಹೀಗಿರುವಾಗ ಮೀಸಲಾತಿಯನ್ನು ಕಿತ್ತು ಹಾಕುವ ಆಲೋಚನೆಯನ್ನು ಮಾಡುವುದಾದರೂ ಎಷ್ಟು ಸರಿ? ಇಂದು ನಾವು ಚರ್ಚಿಸಬೇಕಾದುದು, ಮೀಸಲಾತಿ ದುರ್ಬಲ ಸಮುದಾಯವನ್ನು ಮೇಲೆತ್ತುವಲ್ಲಿ ಯಾಕೆ ವಿಫಲವಾಗುತ್ತಿದೆ? ಎಂಬ ಕುರಿತಂತೆ. ಸಂವಿಧಾನ ಮೀಸಲಾತಿಯ ಕೊಡುಗೆಯನ್ನು ನೀಡಿದೆಯಾದರೂ, ಆ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರಿಗಳಲ್ಲಿ ಬಹುತೇಕ ಮೇಲ್ಜಾತಿಗೆ ಸೇರಿದವರೇ ಎನ್ನುವುದು ಇನ್ನೊಂದು ವಾಸ್ತವವಾಗಿದೆ.

ಯಾರು ಮೀಸಲಾತಿಯನ್ನು ಒಳಗೊಳಗೇ ದ್ವೇಷಿಸುತ್ತಾರೋ ಅವರು ಮೀಸಲಾತಿಯನ್ನು ಪ್ರಾಮಾಣಿಕವಾಗಿ ಹೇಗೆ ಅನುಷ್ಠಾನಗೊಳಿಸಿಯಾರು? ಇಂದು ಮೀಸಲಾತಿ ದುರ್ಬಲಗೊಳ್ಳಲು ಇನ್ನೊಂದು ಮುಖ್ಯ ಕಾರಣ, ಸರಕಾರಿ ಸಂಸ್ಥೆಗಳೆಲ್ಲ ಒಂದೊಂದಾಗಿ ಖಾಸಗೀಕರಣಗೊಳ್ಳುತ್ತಿರುವುದು. ಮೀಸಲಾತಿಯಲ್ಲಿ ಕೆಲಸ ನೀಡಲು ಸರಕಾರಿ ಹುದ್ದೆಗಳೇ ಇಲ್ಲವೆಂದಾದ ಮೇಲೆ, ಮೀಸಲಾತಿ ಇದ್ದು ಏನು ಪ್ರಯೋಜನ? ಈ ನಿಟ್ಟಿನಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸುವ ಕುರಿತಂತೆ ವ್ಯಾಪಕ ಒತ್ತಡ ಹೇರಬೇಕಾಗಿದೆ. ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಣೆಯಾಗದೇ ಇದ್ದರೆ, ಅದು ತನ್ನ ಉದ್ದೇಶ ಈಡೇರಿಸಿಕೊಳ್ಳಲು ಸಾಧ್ಯವೇ ಇಲ್ಲ.

ಈ ನಿಟ್ಟಿನಲ್ಲಿ ಒಂದು ಸೌಹಾರ್ದಯುತ ವಾತಾವರಣದಲ್ಲಿ ಆರೆಸ್ಸೆಸ್ ಹೇಳಿದಂತೆ ಚರ್ಚೆ ನಡೆಯಲಿ. ಹಾಗೆಯೇ, ಇನ್ನೂ ಅಘೋಷಿತವಾಗಿ ಜಾರಿಯಲ್ಲಿರುವ ಮನುಸಂವಿಧಾನದ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿ ಹಾಕಲು ಸಂವಿಧಾನಕ್ಕೆ ಇನ್ನಷ್ಟು ಶಕ್ತಿ ನೀಡುವ ಕುರಿತಂತೆಯೂ ಚರ್ಚೆ ನಡೆಯಬೇಕಾಗಿದೆ. ಸಾಮಾಜಿಕ ನ್ಯಾಯ ಅತ್ಯಂತ ಅಪಾಯದಲ್ಲಿರುವ ಈ ದಿನಗಳಲ್ಲಿ, ಆರೆಸ್ಸೆಸ್ ನೀಡಿರುವ ಹೇಳಿಕೆ ಸರಕಾರದ ಮುಂದಿನ ನಡೆಯನ್ನು ಹೇಳುತ್ತಿದೆ. ತನ್ನ ಬಹುಮತದ ಬಲದಿಂದ ಬಿಜೆಪಿ ಸರಕಾರ ಮೀಸಲಾತಿಯನ್ನು ರದ್ದುಗೊಳಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಶೋಷಿತ ಸಮುದಾಯಗಳು ಸಂಘಟಿತವಾಗಿ ಬಲವಾದ ಪ್ರತಿರೋಧವನ್ನು ತೋರದೇ ಇದ್ದರೆ, ಅಂಬೇಡ್ಕರ್ ಸಂವಿಧಾನದ ಜಾಗದಲ್ಲಿ ಮನುಸಂವಿಧಾನ ಅಧಿಕೃತವಾಗಿ ಮರುಸ್ಥಾಪನೆಯಾಗುವುದರಲ್ಲಿ ಅನುಮಾನವೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News