ರಾಜ್ ಠಾಕ್ರೆಗೆ ಈ.ಡಿ. ನೋಟಿಸ್: ಎಂಎನ್ಎಸ್ ಕಾರ್ಯಕರ್ತ ಆತ್ಮಹತ್ಯೆ; ಆರೋಪ

Update: 2019-08-21 14:09 GMT

ಮುಂಬೈ, ಆ.21: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಜಾರಿ ನಿರ್ದೇಶನಾಲಯ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ನೋಟಿಸ್ ಕಳುಹಿಸಿದ್ದರಿಂದ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪಕ್ಷದ ಮುಖಂಡರೊಬ್ಬರು ಆರೋಪಿಸಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ಪೊಲೀಸರು, ಮೃತವ್ಯಕ್ತಿ ವಿಪರೀತ ಮದ್ಯವ್ಯಸನಿಯಾಗಿದ್ದು ಆಗಿಂದಾಗ್ಗೆ ಖಿನ್ನತೆಗೆ ಒಳಗಾಗುತ್ತಿದ್ದ ಎಂದು ಹೇಳಿದ್ದಾರೆ.

ಕಾಲ್ವಾ ಉಪನಗರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 27 ವರ್ಷದ ಪ್ರವೀಣ್ ಚೌಗುಲೆ ಎಂಬಾತ ಆ.20ರಂದು (ಮಂಗಳವಾರ) ತನ್ನ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈತ ವಿಪರೀತ ಮದ್ಯವ್ಯಸನಿಯಾಗಿದ್ದು ಆಗಿಂದಾಗ್ಗೆ ಖಿನ್ನತೆಗೆ ಒಳಗಾಗುತ್ತಿದ್ದ. ಈ ಹಿಂದೆಯೂ ಒಂದೆರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಹೇಶ್ ಕಾವ್ಡೆ ಹೇಳಿದ್ದಾರೆ. ಆಕಸ್ಮಿಕ ಮರಣ ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಆದರೆ ಎಂಎನ್ಎಸ್ ಥಾಣೆ ಘಟಕದ ವಕ್ತಾರ ನೈನೇಶ್ ಪಠಾಣ್ಕರ್ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ್ದಾರೆ. 
ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆಗೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ನೋಟಿಸ್ ಕಳಿಸಿದ್ದರಿಂದ ಆಕ್ರೋಶ ಮತ್ತು ಖಿನ್ನತೆಗೆ ಒಳಗಾಗಿ ಚೌಗುಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತ ಫೇಸ್ಬುಕ್ನಲ್ಲಿ ಈ ಬಗ್ಗೆ ಆತಂಕ ತೋಡಿಕೊಂಡಿದ್ದ ಎಂದವರು ದೂರಿದ್ದಾರೆ.
ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಜ್ ಠಾಕ್ರೆಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News