ನ್ಯೂಝಿಲ್ಯಾಂಡ್ ಗೆ ಸೋಲುಣಿಸಿದ ಭಾರತ

Update: 2019-08-21 17:34 GMT

ಟೋಕಿಯೊ, ಆ.21: ಭಾರತೀಯ ಪುರುಷರ ಹಾಕಿ ತಂಡ ಬುಧವಾರ ನಡೆದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸುವುದರೊಂದಿಗೆ ರೌಂಡ್ ರಾಬಿನ್ ಲೀಗ್ ಹಂತದ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ.

ನಾಯಕ ಹರ್ಮನ್‌ಪ್ರೀತ್ ಸಿಂಗ್ 7ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಶಂಶೀರ್ ಸಿಂಗ್(18ನೇ ನಿ.), ನೀಲಕಂಠ ಶರ್ಮಾ(22ನೇ ನಿ.), ಗುರುಸಾಹಿಬ್‌ಜೀತ್ ಸಿಂಗ್(26ನೇ ನಿ.) ಹಾಗೂ ಮನ್‌ದೀಪ್ ಸಿಂಗ್(27ನೇ ನಿ.)ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಭಾರತ ಟೂರ್ನಿಯ ಲೀಗ್ ಹಂತದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 1-2 ಅಂತರದಿಂದ ಸೋತಿತ್ತು.

ಉಭಯ ತಂಡಗಳು ಎಚ್ಚರಿಕೆಯ ಆರಂಭ ಪಡೆದವು. ಭಾರತ ಏಳನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. ಆದಾಗ್ಯೂ ನಾಯಕ ಹರ್ಮನ್‌ಪ್ರೀತ್ ಮತ್ತೊಮ್ಮೆ ಲಭಿಸಿದ ಪೆನಾಲ್ಟಿ ಕಾರ್ನರ್‌ನ್ನು ಬಳಸಿಕೊಂಡು ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ನ್ಯೂಝಿಲ್ಯಾಂಡ್ ಡಿಫೆನ್ಸ್ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದ ಭಾರತ ಮೊದಲ ಕ್ವಾರ್ಟರ್ ಅಂತ್ಯಕ್ಕೆ 1-0 ಮುನ್ನಡೆಯಲ್ಲಿತ್ತು. ಶಂಶೇರ್ 18ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಇನ್ನೂ ಮೂರು ಗೋಲುಗಳನ್ನು ಗಳಿಸಿತು.

ನೀಲಕಂಠ 22ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಗುರುಸಾಹಿಬ್‌ಜೀತ್ (26ನೇ ನಿಮಿಷ) ಹಾಗೂ ಮನ್‌ದೀಪ್(27ನೇ ನಿ.)ಸತತ ಗೋಲುಗಳನ್ನು ಗಳಿಸಿದರು. ಮೊದಲಾರ್ಧದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿದ್ದ ಉಭಯ ತಂಡಗಳು ಆ ಬಳಿಕ ತಮ್ಮ ಹೋರಾಟ ದ ತೀವ್ರತೆ ಕಡಿಮೆಗೊಳಿಸಿದವು. ನ್ಯೂಝಿಲ್ಯಾಂಡ್ 37ನೇ ನಿಮಿಷದಲ್ಲಿ ಹೊಡೆದ ಚೆಂಡು ಗೋಲುಪೋಸ್ಟ್‌ಗೆ ತಲುಪಲಿಲ್ಲ. ಮುಂದಿನ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿಕಾರ್ನರ್ ಅವಕಾಶಕ್ಕೆ ಅಡ್ಡಿಯಾದರು.

  ಭಾರತ ಹಾಗೂ ನ್ಯೂಝಿಲ್ಯಾಂಡ್ ಮೂರನೇ ಕ್ವಾರ್ಟರ್‌ನಲ್ಲಿ ಒಂದೂ ಗೋಲನ್ನು ಗಳಿಸಲಿಲ್ಲ. ಕೊನೆಯ ಕ್ವಾರ್ಟರ್‌ನಲ್ಲಿ 5-0 ಮುನ್ನಡೆ ಕಾಯ್ದುಕೊಳ್ಳಲು ಒತ್ತು ನೀಡಿದ ಭಾರತ ಪಂದ್ಯದುದ್ದಕ್ಕೂ ನ್ಯೂಝಿಲ್ಯಾಂಡ್ ತನ್ನ ರಕ್ಷಣಾಕೋಟೆ ಭೇದಿಸದಂತೆ ನೋಡಿಕೊಂಡಿತು. ಪಂದ್ಯದಲ್ಲಿ ಭಾರತದ ಆಕ್ರಮಣಕಾರಿ ಆಟ ಫಲ ನೀಡಿದ್ದು, ಅಂತಿಮವಾಗಿ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ಜಯಶಾಲಿಯಾಗಿ ಹೊರಹೊಮ್ಮಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News