ಹೆಸರು, ಸಂಖ್ಯ ಇರುವ ಟೆಸ್ಟ್ ಜೆರ್ಸಿ ಅನಾವರಣಗೊಳಿಸಿದ ಟೀಮ್ ಇಂಡಿಯಾ

Update: 2019-08-21 17:43 GMT

 ಹೊಸದಿಲ್ಲಿ, ಆ.21: ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರದಿಂದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ತಮ್ಮ ಹೆಸರು ಹಾಗೂ ಸಂಖ್ಯೆಯಿರುವ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ನಾಯಕ ವಿರಾಟ್ ಕೊಹ್ಲಿ 18 ಸಂಖ್ಯೆಯಿರುವ ಜೆರ್ಸಿ ಧರಿಸಿ ಆಡಲು ಸಜ್ಜಾ ಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ಎಲ್ಲ ಆಟಗಾರರ ಜೆರ್ಸಿ ನಂಬರ್‌ಗಳನ್ನು ಬಹಿರಂಗಪಡಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮೂರನೇ ನಂಬರ್‌ನ ಜೆರ್ಸಿಯೊಂದಿಗೆ ಆಡಲಿದ್ದಾರೆ. ಬೌಲರ್‌ಗಳಾದ ಮುಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ಕ್ರಮವಾಗಿ 11 ಹಾಗೂ 21 ಸಂಖ್ಯೆ ಇರುವ ಜೆರ್ಸಿಯೊಂದಿಗೆ ಆಡಲಿದ್ದಾರೆ. ಅಗ್ರ ಸರದಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ನಂ.25, ಆಲ್‌ರೌಂಡರ್ ರವೀಂದ್ರ ಜಡೇಜ ನಂ.8, ವೇಗದ ಬೌಲರ್ ಇಶಾಂತ್ ಶರ್ಮಾ ನಂ.97, ವಿಕೆಟ್‌ಕೀಪರ್ ರಿಷಭ್ ಪಂತ್ ನಂ. 17, ರೋಹಿತ್ ಶರ್ಮಾ ನಂ. 45, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂ. 99, ಹನುಮ ವಿಹಾರಿ ನಂ. 44 ಧರಿಸಿ ಆಡಲಿದ್ದಾರೆ.

ಟೆಸ್ಟ್ ಜೆರ್ಸಿಯ ಹಿಂಬದಿ ನಂಬರ್ ಅಚ್ಚಾಗಿಸುವ ಐಸಿಸಿ ಕ್ರಮವನ್ನು ಹಲವು ಮಾಜಿ ಆಟಗಾರರು ಟೀಕಿಸಿದ್ದಾರೆ. ಈಗ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಆಟಗಾರರು ಸಂಖ್ಯೆ ಇರುವ ಜೆರ್ಸಿ ಧರಿಸಿ ಆಡುತ್ತಿದ್ದಾರೆ. ಈ ಕ್ರಮವನ್ನು ಮಾಜಿ ಆಟಗಾರರಾದ ಬ್ರೆಟ್ ಲೀ, ಶುಐಬ್ ಅಖ್ತರ್ ಹಾಗೂ ಕೆವಿನ್ ಪೀಟರ್ಸನ್ ಟೀಕಿಸಿದ್ದಾರೆ. ಯುವಕರನ್ನು ಕ್ರಿಕೆಟ್‌ನತ್ತ ಸೆಳೆಯುವ ಸಲುವಾಗಿ ನಂಬರ್‌ಗಳಿರುವ ಟೆಸ್ಟ್ ಜೆರ್ಸಿಗಳನ್ನು ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಈ ಸಂಪ್ರದಾಯವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಗಿಯುವ ತನಕ ಪಾಲಿಸಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News