ಅನಿಲ್ ಕುಂಬ್ಳೆ ಆಯ್ಕೆ ಸಮಿತಿ ಅಧ್ಯಕ್ಷರಾಗಬೇಕು: ವೀರೇಂದ್ರ ಸೆಹ್ವಾಗ್

Update: 2019-08-21 18:20 GMT

ಹೊಸದಿಲ್ಲಿ, ಆ.21: ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಾಮರ್ಥ್ಯವಿರುವ ಅನಿಲ್ ಕುಂಬ್ಳೆ ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

‘‘ನನ್ನ ಪ್ರಕಾರ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಕುಂಬ್ಳೆ ಸೂಕ್ತ ಅಭ್ಯರ್ಥಿಯಾಗಬಹುದು. ಅವರು ಆಟಗಾರನಾಗಿ ಸಚಿನ್(ತೆಂಡುಲ್ಕರ್), ಸೌರವ್(ಗಂಗುಲಿ)ಹಾಗೂ ರಾಹುಲ್(ದ್ರಾವಿಡ್)ಅವರೊಂದಿಗೆ ಹಾಗೂ ಕೋಚ್ ಆಗಿ ಯುವ ಆಟಗಾರರೊಂದಿಗೆ ಸಂವಹನ ನಡೆಸಿದ್ದಾರೆ’’ ಎಂದು ಸೆಹ್ವಾಗ್ ಹೇಳಿದ್ದಾರೆ.

‘‘ನಾನು 2007-08ರಲ್ಲಿ ಆಸ್ಟ್ರೇಲಿಯ ವಿರುದ್ಧ ಸರಣಿ ವೇಳೆ ತಂಡಕ್ಕೆ ವಾಪಸಾಗಿದ್ದೆ. ನನ್ನ ಕೊಠಡಿಗೆ ಬಂದಿದ್ದ ನಾಯಕ ಕುಂಬ್ಳೆ, ಮುಂದಿನ ಎರಡು ಸರಣಿಗೆ ನಿಮ್ಮನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದರು. ಒಬ್ಬ ಆಟಗಾರನಿಗೆ ಈ ರೀತಿಯ ಆತ್ಮವಿಶ್ವಾಸ ಅಗತ್ಯವಿರುತ್ತದೆ’’ ಎಂದು ಸೆಹ್ವಾಗ್ ಹೇಳಿದರು.

ಆಯ್ಕೆ ಸಮಿತಿಯ ಅಧ್ಯಕ್ಷರು ಪ್ರತಿ ವರ್ಷ 1 ಕೋ.ರೂ. ಸಂಭಾವನೆ ಪಡೆಯುತ್ತಾರೆ. ಹೀಗಾಗಿ ಕುಂಬ್ಳೆ ಈ ಹುದ್ದೆ ವಹಿಸಿಕೊಳ್ಳಲು ಒಪ್ಪುತ್ತಾರೆಂದು ನನಗನಿಸುತ್ತಿಲ್ಲ. ಆಯ್ಕೆ ಸಮಿತಿಯ ಅಧ್ಯಕ್ಷರ ಸಂಭಾವನೆಯನ್ನು ಬಿಸಿಸಿಐ ಏರಿಕೆ ಮಾಡುವ ಅಗತ್ಯವಿದೆ.ಆಗ ಹೆಚ್ಚು ಆಟಗಾರರು ಆಸಕ್ತಿ ತೋರುತ್ತಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News