ಕೊನೆಯ ಆಟ

Update: 2019-08-22 05:07 GMT

ಕೊನೆಗೂ ತನ್ನ ಸರಕಾರದ ಮೊದಲ ಪುಟವನ್ನು ಯಡಿಯೂರಪ್ಪ ಬಿಡಿಸಿದ್ದಾರೆ. ಅಂದರೆ ಸರಕಾರ ಅಧಿಕೃತವಾಗಿ ಚಾಲನೆಗೊಂಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ರಾಜ್ಯ ಈ ದಿನಕ್ಕಾಗಿ ಕಾಯುತ್ತಿತ್ತು. ಒಂದೆಡೆ ನೆರೆಯಿಂದ ರಾಜ್ಯ ತತ್ತರಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಏಕವ್ಯಕ್ತಿ ಪ್ರದರ್ಶನ ನಡೆಯುತ್ತಿತ್ತು. ಯಾರು ಸಚಿವರಾದರೂ ಸರಿ, ಒಮ್ಮೆ ಸಂಪುಟ ವಿಸ್ತರಣೆಯಾದರೆ ಸಾಕು ಎನ್ನುವಂತಹ ಸ್ಥಿತಿ ಶ್ರೀಸಾಮಾನ್ಯನದಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬೆನ್ನಿಗೇ, ಬಿಜೆಪಿಯೊಳಗೆ ಅಧಿಕಾರಕ್ಕಾಗಿ ಜಗ್ಗಾಟ ಆರಂಭವಾಗಿತ್ತು. ತನ್ನ ಬೆಂಬಲಿಗರಿಗೆ ಆದ್ಯತೆಯನ್ನು ನೀಡುವುದು ಯಡಿಯೂರಪ್ಪರ ಅಗತ್ಯವಾಗಿದ್ದರೆ, ಇತ್ತ ಆರೆಸ್ಸೆಸ್ ಮತ್ತು ಯಡಿಯೂರಪ್ಪರ ವಿರೋಧಿ ಬಣಗಳು ತಮ್ಮ ಪಾಲಿಗಾಗಿ ಒತ್ತಡ ಹೇರುತ್ತಿದ್ದವು. ಅಲ್ಪ ಬಹುಮತದಿಂದ ನಿಂತಿರುವ ಸರಕಾರವಾದುದರಿಂದ, ಸಣ್ಣ ಅಸಮಾಧಾನ ಸ್ಫೋಟಗೊಂಡರೂ ಸರಕಾರ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿತ್ತು. ಆದುದರಿಂದಲೇ ವಿವಿಧ ನೆಪಗಳನ್ನು ಒಡ್ಡಿ ವಿಸ್ತರಣೆಯನ್ನು ಯಡಿಯೂರಪ್ಪ ಮುಂದೆ ಹಾಕುತ್ತಾ ಬಂದಿದ್ದರು. ಮೂರು ದಿಕ್ಕಿನಿಂದ ಬರುತ್ತಿರುವ ಒತ್ತಡಗಳ ಕಾರಣದಿಂದ ಕೇಂದ್ರದ ವರಿಷ್ಠರೂ ವಿಸ್ತರಣೆಗೆ ಹಸಿರು ನಿಶಾನೆ ನೀಡಿರಲಿಲ್ಲ. ಆದರೆ ನೆರೆಯಿಂದಾಗಿ ರಾಜ್ಯದ ಸ್ಥಿತಿ ಹದಗೆಡುತ್ತಾ ಬಂದಂತೆಯೇ, ವಿಸ್ತರಣೆಗೆ ಆದೇಶ ನೀಡುವುದು ವರಿಷ್ಠರಿಗೆ ಅನಿವಾರ್ಯವಾಯಿತು. ನಿರೀಕ್ಷೆಯಂತೆಯೇ ಯಡಿಯೂರಪ್ಪ ತನ್ನ ಬೆಂಬಲಿಗರಿಗೆ ನ್ಯಾಯ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಸ್ತರಣೆಯ ಬೆನ್ನಿಗೇ ಅಸಮಾಧಾನಗಳು ಸ್ಫೋಟಗೊಂಡಿವೆಯಾದರೂ, ಸದ್ಯಕ್ಕಂತೂ ಅವರು ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಆದರೆ ಆ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ರೂಪ ತಾಳಿ ಸರಕಾರವನ್ನು ಬಲಿತೆಗೆದುಕೊಳ್ಳುವುದೋ ಹೇಳ ಬರುವುದಿಲ್ಲ. ಸಚಿವ ಸಂಪುಟವನ್ನು ವಿಸ್ತರಣೆ ಮಾಡುವ ಸಂದರ್ಭದಲ್ಲಿ ಪ್ರದೇಶವಾರು ಆದ್ಯತೆಯನ್ನು ನೀಡಿಲ್ಲ. ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಸ್ತರಣೆಯಾಗಿಲ್ಲ. ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ತನಗೆ ಅಗತ್ಯವಾದವರನ್ನು ಸಂಪುಟದೊಳಗೆ ಸೇರಿಸಿಕೊಂಡಿದ್ದಾರೆ. ಕರಾವಳಿ ಮತ್ತು ಹೈದರಾಬಾದ್ ಕರ್ನಾಟಕ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿವೆ. ಸದ್ಯಕ್ಕೆ 13 ಜಿಲ್ಲೆಗಳಷ್ಟೇ ಪ್ರಾತಿನಿಧ್ಯವನ್ನು ಪಡೆದುಕೊಂಡಿವೆ. ಬೆಂಗಳೂರು ನಗರ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ. ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ದಾವಣಗೆರೆ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಹೀಗೆ...ಬಿಜೆಪಿ ಗಟ್ಟಿಯಾಗಿ ಬೇರೂರಿರುವ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ಬಿಜೆಪಿಯ ಶಕ್ತಿಕೇಂದ್ರ ಎಂದೇ ಭಾವಿಸಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಗಂತೂ ಒಂದೇ ಒಂದು ಸ್ಥಾನವನ್ನು ನೀಡಲಾಗಿಲ್ಲ. ಬೆಂಗಳೂರು ಹೊರತು ಪಡಿಸಿದರೆ, ಅಭಿವೃದ್ಧಿಗೆ ಸಂಬಂಧಿಸಿ ಸುದ್ದಿಯಲ್ಲಿರುವ ನಗರ ಮಂಗಳೂರು. ಹೊಸ ಅಭಿವೃದ್ಧಿ ಯೋಜನೆಗಳಿಗಾಗಿ ನಾಡು ಮಂಗಳೂರಿನ ಕಡೆಗೆ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಇಬ್ಬರು ಸಂಪುಟ ಸಚಿವರು ಪ್ರತಿನಿಧಿಸುವ ಅಗತ್ಯವಾದರೂ ಇತ್ತು. ಕೊಡಗು ಕೂಡ ನಿರಾಶೆಯನ್ನು ವ್ಯಕ್ತಪಡಿಸಿದೆ. ಇದಾವುದರ ಕುರಿತಂತೆಯೂ ಯಡಿಯೂರಪ್ಪ ಸರಕಾರ ತಲೆಕೆಡಿಸಿಕೊಂಡಂತಿಲ್ಲ. ಜೊತೆ ಜೊತೆಗೆ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ದೊರಕಿದೆ. ಇದರ ಹಿಂದೆಯೂ ಯಡಿಯೂರಪ್ಪ ಅವರ ದೂರದೃಷ್ಟಿಯಿದೆ. ಅದೇನೇ ಇದ್ದರೂ ಯಡಿಯೂರಪ್ಪ ಪಾಲಿಗೆ ಇದು ಕೊನೆಯ ರಾಜಕೀಯ ಆಟ. ಈ ಆಟವನ್ನು ಹೇಗೆ ಬೇಕಾದರೂ ಆಡಲಿ ಎಂದು ವರಿಷ್ಠರೇ ಕೈ ಚೆಲ್ಲಿದಂತಿದೆ. ಈ ಅವಧಿಯನ್ನು ಯಡಿಯೂರಪ್ಪ ಮುಗಿಸಿದರೆ, ಇನ್ನೊಮ್ಮೆ ಬಿಜೆಪಿ ಅವರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆ ಕಡಿಮೆ.

   ದಕ್ಷಿಣ ಕನ್ನಡ ಜಿಲ್ಲೆಗೆ ಸಿಗದ ಪ್ರಾತಿನಿಧ್ಯವನ್ನು ನಳಿನ್‌ಕುಮಾರ್ ಕಟೀಲು ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತುಂಬಿಕೊಳ್ಳಲು ಬಿಜೆಪಿ ಮುಂದಾಗಿದೆ. ನಿಸ್ಸಂಶಯವಾಗಿ ನಳಿನ್‌ಕುಮಾರ್ ಕಟೀಲು ಆರೆಸ್ಸೆಸ್‌ನ ಆಯ್ಕೆ. ಆರೆಸ್ಸೆಸ್ ಕಾರ್ಯಕರ್ತನಾಗಿ ದುಡಿದು ಅಪಾರ ಅನುಭವವಿರುವ, ಈಗಾಗಲೇ ಜನಾರ್ದನ ಪೂಜಾರಿಯಂತಹ ಹಿರಿಯ ಮುತ್ಸದ್ದಿ ನಾಯಕನನ್ನು ಎರಡು ಬಾರಿ, ಭಾರೀ ಅಂತರದಿಂದ ಮಣಿಸಿ ಸಂಸದನಾಗಿರುವ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ನಳಿನ್ ಕುಮಾರ್ ಕಟೀಲು ಕೇಂದ್ರ ಸಚಿವರಾಗುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸುವಂತೆ, ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತರಾಗಿದ್ದ ನಳಿನ್‌ಕುಮಾರ್ ಕಟೀಲು ಏಕಾಏಕಿ ರಾಜ್ಯಮಟ್ಟದ ನಾಯಕರಾಗಿ ಬೆಳೆದು ನಿಂತಿದ್ದಾರೆ. ಸಚಿವ ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯದಿಂದ ನೊಂದ ದಕ್ಷಿಣ ಕನ್ನಡಿಗರು, ನಳಿನ್ ಕುಮಾರ್ ಅವರಿಗೆ ದಕ್ಕಿದ 'ರಾಜ್ಯಾಧ್ಯಕ್ಷ' ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಉತ್ತಮ ಭಾಷಣಕಾರರು, ಕರಾವಳಿ ಬಿಜೆಪಿಯೊಳಗೆ ಯಶಸ್ವಿ ಸಂಘಟಕರು ಎಂದೂ ಗುರುತಿಸಲ್ಪಟ್ಟಿರುವ ನಳಿನ್‌ಕುಮಾರ್ ರಾಜ್ಯಮಟ್ಟದ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವ ಕುರಿತಂತೆ ಹತ್ತು ಹಲವು ಅನುಮಾನಗಳಿವೆ. ಆವೇಶದ ಭಾಷಣಗಳು ಪಕ್ಷ ಸಂಘಟನೆಗಳಿಗೆ ಸಹಕಾರಿಯಾಗುವುದಿಲ್ಲ, ಬದಲಿಗೆ ಕೆಲವೊಮ್ಮೆ ತೊಡಕಾಗಿ ಪರಿಣಮಿಸಬಹುದು. ನಳಿನ್ ಕುಮಾರ್ ಅವರಲ್ಲಿ ಮುತ್ಸದ್ದಿತನದ ಕೊರತೆಯಿದೆ. ದಕ್ಷಿಣ ಕನ್ನಡದ ಈ ತರುಣ ನಾಯಕನನ್ನು ಇತರ ಜಿಲ್ಲೆಗಳ ಬಿಜೆಪಿ ನಾಯಕರು ಗಂಭೀರವಾಗಿ ಸ್ವೀಕರಿಸುತ್ತಾರೆ ಎನ್ನುವಂತಿಲ್ಲ. ಇನ್ನೊಂದು ತರ್ಕದಂತೆ, ಆರೆಸ್ಸೆಸ್ ತನ್ನ ಕೈಗೊಂಬೆಯಾಗಿ ನಳಿನ್‌ಕುಮಾರ್ ಅವರನ್ನು ಬಳಸಿಕೊಳ್ಳಲಿದೆ. ಆರೆಸ್ಸೆಸ್ ಮುಖಂಡ ಸಂತೋಷ್ ಅವರನ್ನು ಭವಿಷ್ಯದ ಮುಖ್ಯಮಂತ್ರಿಯನ್ನಾಗಿಸಲು ನಳಿನ್ ಬಳಕೆಯಾಗಲಿದ್ದಾರೆ ಎನ್ನುವ ಮಾತುಗಳಿವೆ. ಅಂದರೆ ನಳಿನ್ ಅವರನ್ನು ಗುರಾಣಿಯಾಗಿ ಬಳಸಿಕೊಂಡು ಸಂತೋಷ್ ಬಿಜೆಪಿಯನ್ನು ನಿಯಂತ್ರಿಸಲಿದ್ದಾರೆ. ಮಂಗಳೂರಿನಲ್ಲಿ ವಿವಾದಿತ ಭಾಷಣಗಳಿಗಾಗಿಯೇ ಸುದ್ದಿಯಾಗುತ್ತಿದ್ದ ನಳಿನ್ ಕುಮಾರ್, ತಮ್ಮ ಮಾತಿನಲ್ಲಿ ಮತ್ತು ನಡೆಯಲ್ಲಿ ಪ್ರಬುದ್ಧತೆಯನ್ನು ರೂಢಿಸಿಕೊಂಡರೆ, ಈ ಸ್ಥಾನವನ್ನು ರಾಜಕೀಯವಾಗಿ ಇನ್ನಷ್ಟು ಮೇಲೇರಲು ಏಣಿಯಾಗಿ ಬಳಸಬಹುದಾಗಿದೆ. ಒಬ್ಬ ನಾಯಕನಾಗಿ ರೂಪುಗೊಳ್ಳಲು ಒಂದು ಹಂತದವರೆಗೆ ಉದ್ವಿಗ್ನಕಾರಿ ಭಾಷಣಗಳು ನೆರವಾಗಬಹುದು. ಬಿಜೆಪಿಯೊಳಗೆ ಉದ್ವಿಗ್ನಕಾರಿ ಭಾಷಣಕಾರರಿಗೆ ಕೊರತೆಯೇನೂ ಇಲ್ಲ. ಇಂದು ಬಿಜೆಪಿಯೊಳಗಿರುವ ತಳಸ್ತರದ ಪಕ್ಷದ ಕಾರ್ಯಕರ್ತರಲ್ಲಿ 'ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ' ಎಂಬ ಅಸಮಾಧಾನಗಳಿವೆ. ಕೋಮುಗಲಭೆಯಂತಹ ಸಂದರ್ಭದಲ್ಲಿ ಬಿಲ್ಲವ, ಮೊಗವೀರ, ದಲಿತ ಯುವಕರನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಬಿಜೆಪಿ, ಬಳಿಕ ಅವರನ್ನು ಸಂಪೂರ್ಣ ಮರೆತು ಬಿಡುತ್ತದೆ ಎನ್ನುವ ಮಾತುಗಳು ಬಹಿರಂಗವಾಗಿಯೇ ಕೇಳಿ ಬರುತ್ತಿವೆ. ಸ್ವತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನಳಿನ್ ಅವರು ವ್ಯಾಪಕ ಅಸಮಾಧಾನವನ್ನು ಕಟ್ಟಿಕೊಂಡಿದ್ದಾರೆ. ಈ ಆರೋಪಗಳಿಗೆ ನಳಿನ್ ಅವರು ಸ್ಪಷ್ಟವಾದ ಉತ್ತರವನ್ನು ನೀಡದೆ, ಬಿಜೆಪಿಯನ್ನು ರಾಜ್ಯಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಿ ಕಟ್ಟುವುದು ಅವರಿಗೆ ಕಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News