​ಲಂಚದ ಹಣ ವಾಪಾಸು ಕೇಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ !

Update: 2019-08-22 05:05 GMT

ಮೊಯಿನಗುರಿ (ಪಶ್ಚಿಮ ಬಂಗಾಳ): ಕೇಂದ್ರ ಸರ್ಕಾರದ ಗೃಹ ನಿರ್ಮಾಣ ಯೋಜನೆಯ ಸೌಲಭ್ಯ ಒದಗಿಕೊಡುವುದಾಗಿ ನೀಡಿದ್ದ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗೆ ನೀಡಿದ್ದ ಲಂಚವನ್ನು ವಾಪಾಸು ಕೇಳಲು ಹೋದ ಮಹಿಳೆ ಮೇಲೆ ಟಿಎಂಸಿ ಪಂಚಾಯತ್ ಸದಸ್ಯ ಹಾಗೂ ಆತನ ಮೂವರು ಸಹಚರರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರ ಸಂತ್ರಸ್ತೆ, ಶಕ್ತಿಬಾರಿ2 ಗ್ರಾಮ ಪಂಚಾಯತ್ ಸದಸ್ಯ ಬುಲ್‌ಬುಲ್, ಸಹಚರರಾದ ಝಹೀದುಲ್ ಇಸ್ಲಾಂ, ಜೊಯ್ಲನ್ ಅಬಿದಿನ್ ಮತ್ತು ಅಝೀಝ್ ಉಲ್ ಹಕ್ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಎಲ್ಲ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಅತ್ಯಾಚಾರ ಆರೋಪ ಮಾಡಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಮಹಿಳೆ ಅರ್ಜಿ ಸಲ್ಲಿಸಿದಾಗ, ಆರೋಪಿ 7 ಸಾವಿರ ರೂ. ಲಂಚ ಪಡೆದು ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ ಮನೆ ಮಂಜೂರಾಗದ ಹಿನ್ನೆಲೆಯಲ್ಲಿ ಆ.14ರಂದು ಹಣ ಮರಳಿಸುವಂತೆ ಪಂಚಾಯತ್ ಸದಸ್ಯನ ಮನೆಗೆ ಹೋದಾಗ, ಆರೋಪಿ ಮೂವರು ಸಹಚರರ ಜತೆಗೆ ಕುಳಿತಿದ್ದ. ನಾಲ್ಕೂ ಮಂದಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಮಹಿಳೆ ಆಪಾದಿಸಿದ್ದಾರೆ.

"ನನಗೆ ಕಿರುಕುಳವನ್ನೂ ನೀಡಿದ್ದಾರೆ. ಬಳಿಕ ಮನೆಗೆ ಬಂದು, ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News