ಇದು ಒಪ್ಪಿತ ಸಂಬಂಧ, ಅತ್ಯಾಚಾರವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Update: 2019-08-22 05:56 GMT

ಹೊಸದಿಲ್ಲಿ : ತಮ್ಮಿಬ್ಬರ ಸಂಬಂಧ ವಿವಾಹದಲ್ಲಿ ಮುಕ್ತಾಯವಾಗುವುದಿಲ್ಲ ಎಂದು ತಿಳಿದ ಬಳಿಕವೂ ಮಹಿಳೆ, ಪುರುಷನೊಬ್ಬನ ಜತೆ ಲೈಂಗಿಕ ಸಂಪರ್ಕ ಮುಂದುವರಿಸಿದಲ್ಲಿ ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿವಾಹವಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎನ್ನುವ ಆಧಾರದಲ್ಲಿ ಮಹಿಳೆ ಅತ್ಯಾಚಾರ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿಯವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಮಾರಾಟ ತೆರಿಗೆ ಸಹಾಯಕ ಆಯುಕ್ತೆಯೊಬ್ಬರು ಸಿಆರ್‌ಪಿಎಫ್‌ನ ಉಪ ಕಮಾಂಡೆಂಟ್ ವಿರುದ್ಧ ಮಾಡಿದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ನೀಡಿದೆ. ಇಬ್ಬರೂ ಆರು ವರ್ಷಗಳ ಕಾಲ ಸಹಬಾಳ್ವೆ ನಡೆಸಿದ್ದರು ಹಾಗೂ ಪರಸ್ಪರರ ಮನೆಯಲ್ಲಿ ಹಲವು ಬಾರಿ ತಂಗಿದ್ದರು. ಇದರಿಂದಾಗಿ ಅದು ಒಪ್ಪಿತ ಸಂಬಂಧ ಎನ್ನುವುದು ದೃಢವಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸಿಆರ್‌ಪಿಎಫ್ ಅಧಿಕಾರಿಯನ್ನು ನಾನು 1998ರಿಂದಲೂ ಬಲ್ಲೆ; ಆದರೆ 2008ರಲ್ಲಿ ವಿವಾಹವಾಗುವ ಆಶ್ವಾಸನೆ ನೀಡಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಹೊಂದಿದರು ಎಂದು ಮಹಿಳೆ ದೂರು ನೀಡಿದ್ದರು. 2016ರವರೆಗೂ ಇಬ್ಬರ ನಡುವೆ ಸಂಬಂಧ ಮುಂದುವರಿಯಿತು. ಹಲವು ಬಾರಿ ಪರಸ್ಪರರ ಮನೆಗೆ ತೆರಳಿ ಜತೆಗೆ ತಂಗಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿರುವುದರಿಂದ ವಿವಾಹವಾಗುವುದು ಅಸಾಧ್ಯ ಎಂಬ ಆತಂಕ 2014ರಲ್ಲಿ ಮೂಡಿತು. ಇಷ್ಟಾಗಿಯೂ ಇಬ್ಬರೂ ಸಂಬಂಧ ಮುಂದುವರಿಸಿದರು. ಅಧಿಕಾರಿಗೆ ಮತ್ತೊಬ್ಬ ಮಹಿಳೆಯ ಜತೆ ನಿಶ್ಚಿತಾರ್ಥವಾದ ಹಿನ್ನೆಲೆಯಲ್ಲಿ ಈ ಮಹಿಳೆ 2016ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ಸುಳ್ಳು ಆಶ್ವಾಸನೆ ನೀಡುವುದಕ್ಕೆ ಮತ್ತು ಭರವಸೆ ಈಡೇರದಿರುವುದಕ್ಕೆ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ಪೀಠ ಮಹಿಳೆಯ ವಾದವನ್ನು ತಳ್ಳಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News